ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳಿಗೆ ಬಹಳ ವಿಶೇಷ ಸ್ಥಾನವಿದ್ದು, ಡಾ. ಫ.ಗು. ಹಳಕಟ್ಟಿಯವರು ವಚನಗಳ ರಕ್ಷಣೆಗೆ ಶ್ರಮಿಸಿದ ಮಹನೀಯರಲ್ಲಿ ಅಗ್ರಗಣ್ಯರು ಎಂದು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ ಹಿಟ್ನಾಳ ಹೇಳಿದರು.
ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ. ಫ.ಗು.ಹಳಕಟ್ಟಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇಂದಿನ ಜನ ಸಮುದಾಯಕ್ಕೆ ಚಲನಚಿತ್ರ ನಟ, ನಟಿಯರು ಆದರ್ಶ ವ್ಯಕ್ತಿಗಳಾಗಿದ್ದಾರೆ. ಆದರೆ, ನಿಜವಾಗಿಯೂ ಆದರ್ಶವಾಗಬೇಕಿರುವುದು ಡಾ. ಫ.ಗು.ಹಳಕಟ್ಟಿಯವರಂತಹ ಮಹನೀಯರು. 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮ ಸಮಾಜ ನಿರ್ಮಾಣಕ್ಕಾಗಿ ಬಹಳಷ್ಟು ಹೋರಾಟಗಳ ಮೂಲಕ ಅಂದಿನ ಕಾಲಘಟ್ಟದಲ್ಲಿದ್ದ ಹಲವಾರು ವರ್ಗ ಹಾಗೂ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ಅವರು ಸಮಾಜದಲ್ಲಿನ ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು. ಕರ್ನಾಟಕ ಅಷ್ಟೇ ಅಲ್ಲದೇ ದೇಶದ ಎಲ್ಲಾ ಭಾಗಗಳಿಂದ ಬಂದಂತಹ ಶರಣ, ಶರಣೆಯರು ಅನುಭವ ಮಂಟಪದಲ್ಲಿ ಸೇರಿ ವಿಶ್ವದ ಮೊದಲ ಸಂಸತ್ತನ್ನು ನಿರ್ಮಾಣ ಮಾಡಿ, ಅಲ್ಲಿ ಚರ್ಚಿಸಿ ವಚನಗಳ ರಚಿಸಿದ್ದರು. ಆ ಎಲ್ಲಾ ವಚನಗಳು ಬೇರೆ-ಬೇರೆ ಕಡೆ ಹಂಚಿಹೋಗಿದ್ದವು. ಅವುಗಳ ಸಂಗ್ರಹಣೆಗಾಗಿ ಡಾ. ಫ.ಗು.ಹಳಕಟ್ಟಿಯವರು ಊರೂರು ಸುತ್ತಿ, ಪ್ರಕಟಣೆ ಹಾಗೂ ಸಂಶೋಧನೆಗೊಳಿಸುವ ಮೂಲಕ ನಮಗೆಲ್ಲಾ ತಿಳಿಸಿಕೊಟ್ಟಿದ್ದಾರೆ” ಎಂದರು.
“ಡಾ. ಫ.ಗು.ಹಳಕಟ್ಟಿಯವರು ವಚನಗಳ ಸಂಗ್ರಹಣೆ ಮಾಡದೇ ಇದ್ದರೇ, ನಮಗೆ ವಚನ ಸಾಹಿತ್ಯ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಮಹಾನ್ ವ್ಯಕ್ತಿಯ ಜಯಂತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ನಮ್ಮ ಭಾರತದ ಸಂವಿಧಾನದಲ್ಲಿರುವ ಎಲ್ಲಾ ಆಶಯಗಳನ್ನು ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಹೇಳಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ” ಎಂದು ಹೇಳಿದರು.
ಇದನ್ನೂ ಓದಿ: ಕೊಪ್ಪಳ | ಪತ್ರಕರ್ತರಿಗೆ ನೈತಿಕತೆ ಮುಖ್ಯ: ಶಿವಕುಮಾರ್ ಮೆಣಸಿನಕಾಯಿ
ಗದಗಿನ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ಬಸಪ್ಪ ಬರಗುಂಡಿ ಮಾತನಾಡಿ, “ಹಳಕಟ್ಟಿಯವರು 1880 ಜುಲೈ 2ರಂದು ಧಾರವಾಡದಲ್ಲಿ ಜನಿಸಿದರು. ಫಕೀರಪ್ಪ ತಂದೆ ಗುರುಬಸಪ್ಪ ಹಳಕಟ್ಟಿ ಅವರು ಕಾನೂನು ಪದವಿ ಪಡೆದು, ವೃತ್ತಿಯಿಂದ ವಕೀಲರಾಗಿ, ಸಾಹಿತಿ, ಸಹಕಾರಿಗಳಾಗಿ, ಸಂಘಸಂಸ್ಥೆಗಳ ಕಟ್ಟಿ ಬೆಳೆಸಿ ಸಮಾಜಕ್ಕಾಗಿ ತಮ್ಮ ತನು ಮನ ಧನವನ್ನು ನೀಡಿ ವಚನ ಸಾಹಿತ್ಯವನ್ನು ಉಳಿಸಿದ್ದಾರೆ. ಅವರು ತಮ್ಮ ಬದುಕನ್ನು ವಚನಗಳ ಜೋಡಣೆಗೆ ಮುಡುಪಾಗಿಟ್ಟರು. ಬಸವಾದಿ ಶರಣರ ಆಶಗಳನ್ನು ಉಳಿಸುವುದಕ್ಕಾಗಿ ಶ್ರಮಿಸಿದ ಹಳಕಟ್ಟಿಯವರನ್ನು ‘ವಚನ ಸಾಹಿತ್ಯದ ಪಿತಾಮಹ’ ಎಂದು ಕರೆಯುತ್ತಾರೆ. ವಚನಗಳ ಮೂಲಕ ಒಂದು ಸುಂದರವಾದ ಸಮಾಜ ನಿರ್ಮಾಣ ಸಾಧ್ಯವಾಗಿದ್ದು, ಇಂತಹ ವಚನಗಳ ರಕ್ಷಣೆಗೆ ಶ್ರಮಿಸಿದ ಹಳಕಟ್ಟಿಯವರು ನಮ್ಮ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಗುರುರಾಜ ಹಲಗೇರಿ, ಎ.ಬಸವರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಬಿ.ಎನ್ ಹೊರಪೇಟ, ಸುಧಾ ಶೆಟ್ಟರ್, ಗಿರಿಜಾ ಮೆಳ್ಳಿಕೇರಿ, ಸವಿತಾ ಬೋರಟ್ಟಿ, ಅರ್ಚನಾ ಸಸಿಮಠ, ಸೌಮ್ಯ ನಾಲ್ವಾಡ, ಎಬಿ ಕಣಿವೆ ವಕೀಲರು, ಕೊಪ್ಪಳ ಸಂಸದರಾದ ರಾಜಶೇಖರ ಬಸವರಾಜ ಹಿಟ್ನಾಳ, ಮಾಜಿ ಶಾಸಕರಾದ ಕೆ.ಶರಣಪ್ಪ, ರಾಜಶೇಖರ ಆಡೂರ, ಗುರುರಾಜ ಹಲಿಗೇರಿ, ಬಸವರಾಜ ಬಳ್ಳೊಳ್ಳಿ, ರಾಜೇಶ ಸಸಿಮಠ, ಬಸವರಾಜ, ವೀರಣ್ಣ ಸಂಕ್ಲಾಪುರ್, ವೀರಣ್ಣ ಕೊರ್ಲಳ್ಳಿ, ಗವಿಸಿದ್ದಪ್ಪ ಕೊಪ್ಪಳ, ಪ್ರಕಾಶ ಚಿನಿವಾಲರ, ವೀರೇಶ ಕೊತಬಾಳ, ಡಾ. ಬಸವರಾಜ ಕ್ಯಾವಟರ್, ಶರಣಪ್ಪ ಹ್ಯಾಟಿ ಹಾಗೂ ಇತರರು ಉಪಸ್ಥಿತರಿದ್ದರು.