ಕಲ್ಪತರು ನಾಡಿನ ಜೀವನಾಡಿ ತೆಂಗು ಸದ್ಯ ಬೆಳೆಗಾರರ ಬುದುಕನ್ನು ಹಸನಾಗಿಸಿದೆ. ತೆಂಗಿನ ಚಿಪ್ಪಿಗೂ ಚಿನ್ನದ ಬೆಲೆ ಬಂದಿದೆ. ಕಳೆದ ಸೋಮವಾರ ಇ-ಟೆಂಡರ್ ನಲ್ಲಿ ಕ್ವಿಂಟಲ್ ಕೊಬ್ಬರಿಗೆ 31 ಸಾವಿರ ದಾಟುವ ಮೂಲಕ ಕೊಬ್ಬರಿ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ.
2024ರಲ್ಲಿ 9 ಸಾವಿರದ ಅಸುಪಾಸಿಪಲ್ಲಿದ್ದ ಕೊಬ್ಬರಿ, ಈ ವರ್ಷ 30 ಸಾವಿರ ದಾಟಿ ಗ್ರಾಹಕರ ಹುಬ್ಬೇರಿಸಿದೆ. ಉಂಡೆ ಕೊಬ್ಬರಿ ನಂಬಿ ತುಮಕೂರು ಜಿಲ್ಲೆಯ ಬಹುತೇಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಕೊಬ್ಬರಿ ಬೆಲೆ ನಿರಂತರ ಕುಸಿತದಿಂದ ಬಸವಳಿದಿದ್ದ ತೆಂಗು ಬೆಳೆಗಾರಿಗೆ ದಿಢೀರ್ ಆಗಿ ಕೊಬ್ಬರಿ ಬೆಲೆ ಏರುತ್ತಿರುವುದು ಅತೀವ ಸಂತಸ ತಂದಿದೆ. ಕೊಬ್ಬರಿ ಬೆಲೆಯೇನೋ ಏರಿಕೆಯಾಗಿದೆ ಅದರೆ ರೈತರ ಬಳಿ ಕೊಬ್ಬರಿಯೇ ಇಲ್ಲ, ರೋಗಬಾಧೆ, ಅಡಿಕೆ ಮೇಲಿನ ಆಸಕ್ತಿಯಿಂದ ತೆಂಗು ಬೆಳೆಯ ವಿಸ್ತೀರ್ಣವೂ ಕಡಿಮೆಯಾಗಿದೆ.
ಕರ್ನಾಟಕದಲ್ಲೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತುಮಕೂರು ಜಿಲ್ಲೆಯಲ್ಲಿ 2.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ತುಮಕೂರಿನಲ್ಲಿ ಬೆಳೆಯುವ ತೆಂಗಿನ ಉಂಡೆ ಕೊಬ್ಬರಿಗೆ ಉತ್ತರ ಭಾರತದಲ್ಲಿ ಬಹು ಬೇಡಿಕೆ ಿದೆ. ಆದರೂ, ಕಳೆದ ಹಲವು ವರ್ಷಗಳಿಂದ ಕೊಬ್ಬರಿ ಬೆಲೆ ಪಾತಾಳ ಕಂಡಿತ್ತು. ತೆಂಗು ಬೆಳೆಗಾರರಂತೂ ಉತ್ತಮ ಬೆಲೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಹೋಗಿದ್ದರು. ಕನಿಷ್ಠ ಬೆಂಬಲ ಬೆಲೆಗೆ ಬೀದಿಗಿಳಿದಿದ್ದರು. ನಿರಂತವಾಗಿ ಪ್ರತಿಭಟನೆಯನ್ನು ಮಾಡಿ ಕಡೆಗೆ ಕೇಂದ್ರದಿಂದ ಬೆಂಬಲ ಬೆಲೆ ಪಡೆದು ನಿಟ್ಟುಸಿರು ಬಿಟ್ಟರು.
ಏಷ್ಯ ಖಂಡದ ಅತಿದೊಡ್ಡ ಕೊಬ್ಬರಿ ಮಾರುಕಟ್ಟೆ ತಿಪಟೂರು ಎಪಿಎಂಸಿಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಹಲವು ಬದಲಾವಣೆ ತರಲಾಗಿದೆ. ಈ ಹಿಂದೆ ಒಬ್ಬ ವರ್ತಕ ನಿಗದಿ ಪಡಿಸಿದ ಬೆಲೆಗೆ ಇತರರು ಕೊಬ್ಬರಿ ಖರೀದಿ ಮಾಡುತ್ತಿದ್ದರು. ಈಗ ಯಾರು ಬೇಕಾದರೂ ಹರಾಜಿನಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಆನ್ ಲೈನ್ ಮೂಲಕವೂ ಖರೀದಿಗೆ ಅವಕಾಶವಿದೆ. ಈ ಹಿಂದೆ ವಾರಕ್ಕೆ ಮೂರು ದಿನ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಈಗ ವಾರಕ್ಕೆ ಎರಡು ಬಾರಿ ಹರಾಜು ಮಾಡಲಾಗುತ್ತಿದೆ. ಬೆಲೆ ಏರಿಕೆಗೆ ಈ ಹರಾಜು ವ್ಯವಸ್ಥೆಯೂ ಪರಿಣಾಮ ಬೀರಿದೆ ಎನ್ನುವ ಚರ್ಚೆಗಳು ನಡೆಯುತ್ತಿವೆ.
ರೋಗದ ಕಾರಣಕ್ಕೆ ತೆಂಗು ಇಳುವರಿ ಕಡಿಮೆ ಇರುವ ಸಂದರ್ಭದಲ್ಲೇ ಬೆಲೆ ಏರಿಕೆ ಆಗುತ್ತಿರುವುದು ಹಲವು ಅನುಮಾನ ಹುಟ್ಟು ಹಾಕಿದೆ. ಹಾಗೆ ವರ್ತಕರ ಮೋಸದಾಟದ ಬಗ್ಗೆಯೂ ಶಂಕೆ ಮೂಡಿದೆ. ವರ್ತಕರು ಅಡಗಿಸಿಟ್ಟಿರುವ ಕೊಬ್ಬರಿ ಮಾರಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿವೆ.
ತಿಪಟೂರು ಎಪಿಎಂಸಿ ಮಾರುಕಟ್ಟೆಗೆ ಸೋಮವಾರ 4,182 ಕ್ವಿಂಟಲ್ (9,727 ಚೀಲ) ಉಂಡೆ ಕೊಬ್ಬರಿ ಅವಕ ಬಂದಿದ್ದು, ‘ಮಾದರಿ’ ದರ 31,606 ಹಾಗೂ ಕನಿಷ್ಠ 27 ಸಾವಿರಕ್ಕೆ ಹರಾಜಾಗಿದೆ. ಕೊಬ್ಬರಿ ದರ ಏರಿಕೆ ಆಗುತ್ತಿದಂತೆ ಕೊಬ್ಬರಿ ಎಣ್ಣೆ, ಚಿಪ್ಪು, ಕೊಬ್ಬರಿ ಮಟ್ಟೆಗೂ ಬೇಡಿಕೆ ಸೃಷ್ಠಿಯಾಗಿದೆ. ಹಾಗೆ ಬೆಲೆಯೂ ಏರಿಕೆಯಾಗಿದೆ. ತೆಂಗಿನ ಕಾಯಿಯ ಬೆಲೆಯೂ ಗಗನಕ್ಕೇರಿದೆ.
ಇದನ್ನೂ ಓದಿ: ತುಮಕೂರು | ಸರ್ಕಾರಿ ಭೂಮಿ ಪರಿವರ್ತನೆ ಆರೋಪ: ಡಿಸಿ ಶುಭ ಕಲ್ಯಾಣ್ ವಿರುದ್ಧ ದೂರು
ಉಂಡೆ ಕೊಬ್ಬರಿ ಬೆಲೆ ಏರಿಕೆ ನಡುವೆ ಕೊಬ್ಬರಿ ಚಿಪ್ಪು, ಮಟ್ಟೆ (ಕೊಬ್ಬರಿ ಸಿಪ್ಪೆ)ಗೂ ಬೇಡಿಕೆ ಬಂದಿದೆ. ತೆಂಗಿನ ಚಿಪ್ಪುಗಳನ್ನು ಮನೆಯ ಬಾಗಿಲಿಗೇ ಬಂದು ಖರೀದಿ ಮಾಡುತ್ತಿದ್ದಾರೆ. ತೆಂಗಿನ ಕಾಯಿಯನ್ನು ದಿನ ಬಳಕೆಗೆ ಉಪಯೋಗಿಸಿದ ನಂತರ ಅದರ ಚಿಪ್ಪುಗಳನ್ನು ಜೋಪಾವನ ಮಾಡುತ್ತಿದ್ದಾರೆ. 2021-22 ರಲ್ಲಿ ಟನ್ ಗೆ 18 ಸಾವಿರವಿದ್ದ ಚಿಪ್ಪಿನ ಬೆಲೆ ಇದೀಗ 30 ಸಾವಿರಕ್ಕೆ ಏರಿಕೆಯಾಗಿದೆ.
“ಕೊಬ್ಬರಿ ಬೆಲೆಯೇನೋ ಏರಿಕೆಯಾಗಿದೆ. ಅದರೆ ಅಟ್ಟದಲ್ಲಿ ಕೊಬ್ಬರಿಯೇ ಇಲ್ಲ. ರೋಗಗಳಿಂದ ತೆಂಗು ಇಳುವರಿಯೂ ಕಡಿಮೆಯಾಗಿದೆ. ಕೊಬ್ಬರಿ ಇದ್ದವನು ಸಾಹುಕಾರ ಎನ್ನುವಂತಾಗಿದೆ. ಇರುವವರಿಗೆ ಲಾಭವಾಗಲಿ. ಇದೇ ರೀತಿ ಕೊಬ್ಬರಿ ಬೆಲೆ ಸ್ಥಿರವಾಗಿದ್ದು ಹೆಚ್ಚು ರೖತರಿಗೆ ಅನುಕೂಲವಾಗಲಿ ಎಂದು ತೆಂಗು ಬೆಳೆಗಾರ ಹೆಸರಹಳ್ಳಿ ಮಂಜುನಾಥ್ ಆಶಯಿಸಿದರು.
ಒಟ್ಟಾರೆ ಕೊಬ್ಬರಿ ಬೆಲೆಯೇನೋ ಏರಿಕೆಯತ್ತ ಸಾಗುತ್ತಿದೆ. ಇದೇ ರೀತಿ ಮಾರುಕಟ್ಟೆಗಳಲ್ಲಿ ಬದಲಾವಣೆಗಳನ್ನು ತರುತ್ತಾ ರೈತರು ಬೆಳೆದ ಬೆಳೆಗಳಿಗೆ ವೖಜ್ಙಾನಿಕ ಬೆಲೆ ಸಿಗುವಂತಾಲಿ.