ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮೇಗರವಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಐಐಟಿಗೆ ಪ್ರವೇಶ ಪಡೆದ ಸುಶಾಂತ್ ಪ್ರಭುವಿಗೆ ಗೌರವ ಸನ್ಮಾನ ಮಾಡಲಾಯಿತು.

ಇತ್ತೀಚಿಗೆ, ವಿಜೇತ ಎಂ ಕೆ ಇವರ ಸಾರಥ್ಯದಲ್ಲಿ ಮೇಗರವಳ್ಳಿ ಪ್ರೌಢಶಾಲೆಯಲ್ಲಿ ಕಲಿತು, ಕಳೆದ ವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ 5 ನೇ ರ್ಯಾಂಕ್ ಪಡೆದ ವಿದ್ಯಾರ್ಥಿ ಸುಮುಖ್ ಸೇರಿದಂತೆ ಇಪ್ಪತ್ತು ವಿದ್ಯಾರ್ಥಿಗಳಿಗೆ ಹಾಗೂ ಐಐಟಿ ಪ್ರವೇಶ ಪಡೆದ, ಮೇಗರವಳ್ಳಿಯ ಶ್ರೀಮತಿ ಸುಜಾತ ಮತ್ತು ನರಸಿಂಹ ಪ್ರಭು ಅವರ ಸುಪುತ್ರ ಸುಶಾಂತ್ ಪ್ರಭು ಅವರಿಗೆ , ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಮೇಗರವಳ್ಳಿ ಇವರುಗಳ ವತಿಯಿಂದ ಸನ್ಮಾನ ಮಾಡಲಾಯಿತು, ಹಾಗೂ ಪ್ರತಿ ವಿದ್ಯಾರ್ಥಿಗೂ ನಗದು ವಿದ್ಯಾರ್ಥಿ ವೇತನ ನೀಡುವುದರೊಂದಿಗೆ, ಶಾಲು, ಹಾರ ಹೊದಿಸಿ, ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನ ಮಾಡಲಾಯಿತು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಒಕ್ಕಲಿಗ ಸಂಘದ ತಾಲ್ಲೂಕು ಅಧ್ಯಕ್ಷರಾದ ಬಾಳೇಹಳ್ಳಿ ಪ್ರಭಾಕರ್ ಮಾತಾನಾಡಿ, ಮೇಗರವಳ್ಳಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಲಲಿತಮ್ಮ ಅವರ ಹೆಸರಿನಲ್ಲಿ ಅವರ ಸುಪುತ್ರ ವಿಜೇತ ಶೆಟ್ಟಿ ಮಾಡುತ್ತಿರುವ ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿಯಾದುದು ಎಂದರು, ಜೊತೆಗೆ ಮಕ್ಕಳಿಗೆ ನಗದು ವಿದ್ಯಾರ್ಥಿ ವೇತನ ನೀಡಿ ಸನ್ಮಾನ ಮಾಡಿರುವುದು ನಮಗೆಲ್ಲಾ ಮಾದರಿ ಕಾರ್ಯವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಪ್ರೋತ್ಸಾಹ ನೀಡಲು ಇವರಿಗೆ ಇನ್ನಷ್ಟು ಶಕ್ತಿ ಸಿಗಲಿ ಹಾಗೂ ಎಲ್ಲಾ ಮಕ್ಕಳು ಮುಂದಿನ ದಿನಗಳಲ್ಲಿ ಇಂತಹ ಕಾರ್ಯದ ಮಹತ್ವವನ್ನು ಅರಿತು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿ, ಇದೇ ರೀತಿಯಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ, ಬಾಳೇಹಳ್ಳಿ ಪ್ರಭಾಕರ್, ವಿಜೇತ ಎಂ ಕೆ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪಟೇಲ್ ವೆಂಕಟೇಶ ಹೆಗಡೆ, ಗ್ರಾಮ ಪಂಚಾಯತಿ ಸದಸ್ಯರಾದ ಅಜಿತ್ ಅಣ್ಣುವಳ್ಳಿ, ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು ಪೋಷಕರು, ಸಾಧಕ ಮಕ್ಕಳು ಉಪಸ್ಥಿತರಿದ್ದರು.