ಸಕ್ರಿಯವಾಗಿಲ್ಲದ ರಾಜಕೀಯ ಪಕ್ಷಗಳ ರದ್ದತಿಗೆ ಚು.ಆಯೋಗ ನೋಟಿಸ್‌; ಕಾನೂನು ಏನು ಹೇಳುತ್ತದೆ?

Date:

Advertisements
ದೇಶದಲ್ಲಿ ಬರೋಬ್ಬರಿ 2,790ಕ್ಕೂ ಹೆಚ್ಚು ನೋಂದಾಯಿತ ರಾಜಕೀಯ ಪಕ್ಷಗಳಿವೆ. ಹಲವು ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ, ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ. ಇಂತಹ ಪಕ್ಷಗಳು ತೆರಿಗೆ ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ವರ್ಗಾವಣೆ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಸಾಧ್ಯತೆ ಇವೆ ಎನ್ನುತ್ತಿದೆ ಆಯೋಗ

ಸಕ್ರಿಯವಾಗಿಲ್ಲದ ರಾಜಕೀಯ ಪಕ್ಷಗಳಿಗೆ ಭಾರತದ ಚುನಾವಣಾ ಆಯೋಗವು (ECI) ಇತ್ತೀಚೆಗೆ ನೋಟಿಸ್‌ ನೀಡಿದೆ. 2019ರಿಂದ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದೆ, ಚುನಾವಣಾ ಪ್ರಕ್ರಿಯೆಗಳಿಂದ ಹೊರಗುಳಿದಿರುವ ಪಕ್ಷಗಳನ್ನು ನೋಂದಾಯಿತ ಗುರುತಿಸಿಕೊಳ್ಳದ ರಾಜಕೀಯ ಪಕ್ಷಗಳು (Registered Unrecognized Political Parties – RUPP) ಎಂದು ಆಯೋಗವು ಹೆಸರಿಸಿದೆ. ಇದರ ಅಡಿಯಲ್ಲಿ ದೇಶಾದ್ಯಂತ 345 ಪಕ್ಷಗಳನ್ನು ಆಯೋಗವು ಗುರುತಿಸಿದ್ದು, ಅವುಗಳ ರದ್ದತಿಗೆ ನಿರ್ಧರಿಸಿದೆ.

ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿರದ ಪಕ್ಷಗಳ ರದ್ದತಿಯ ತನ್ನ ಕ್ರಮವು ಚುನಾವಣಾ ವ್ಯವಸ್ಥೆಯ ಶುದ್ಧೀಕರಣ, ಆದಾಯ ತೆರಿಗೆ ವಿನಾಯಿತಿಯ ದುರ್ಬಳಕೆ ತಡೆಗಟ್ಟುವಿಕೆ ಹಾಗೂ ಚುನಾವಣೆಯ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿಕೊಂಡಿದೆ.

ಅಂದಹಾಗೆ, ಭಾರತದಲ್ಲಿ ರಾಜಕೀಯ ಪಕ್ಷಗಳು ‘ಜನತಾ ಪ್ರಾತಿನಿಧ್ಯ ಕಾಯ್ದೆ-1951’ (Representation of the People Act – RP Act)ನ ಸೆಕ್ಷನ್ 29Aರ ಅಡಿಯಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಈ ಸೆಕ್ಷನ್ ಅಡಿಯಲ್ಲಿ, ರಾಜಕೀಯ ಪಕ್ಷಗಳು ಭಾರತದ ಸಂವಿಧಾನಕ್ಕೆ ನಿಷ್ಠೆ, ಸಮಾಜವಾದ, ಜಾತ್ಯತೀತತೆ, ಪ್ರಜಾಪ್ರಭುತ್ವ, ರಾಷ್ಟ್ರದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಯನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸುತ್ತವೆ. ಪಕ್ಷಗಳು ಚುನಾವಣೆಯಲ್ಲಿ ಸಾಮಾನ್ಯ ಚಿಹ್ನೆಯನ್ನು ಹೊಂದುವ ಮತ್ತು 20 ಸ್ಟಾರ್ ಕ್ಯಾಂಪೇನರ್‌ಗಳ ಸೌಲಭ್ಯಗಳನ್ನು ಪಡೆಯುವ ಅವಕಾಶವನ್ನು ನೀಡಲಾಗಿದೆ. ಅಲ್ಲದೆ, ನೋಂದಾಯಿತ ಪಕ್ಷಗಳಿಗೆ ಆದಾಯ ತೆರಿಗೆ ಕಾಯ್ದೆ-1961ರ ಸೆಕ್ಷನ್ 13A ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನೂ ನೀಡಲಾಗುತ್ತದೆ.

Advertisements

ಚುನಾವಣಾ ಆಯೋಗದ ಇತ್ತೀಚಿನ ದತ್ತಾಂಶಗಳ ಪ್ರಕಾರ, ದೇಶದಲ್ಲಿ ಬರೋಬ್ಬರಿ 2,790ಕ್ಕೂ ಹೆಚ್ಚು ನೋಂದಾಯಿತ ರಾಜಕೀಯ ಪಕ್ಷಗಳಿವೆ. ಆದರೆ, ಇವುಗಳಲ್ಲಿ ಗಮನಾರ್ಹ ಸಂಖ್ಯೆಯ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸಿಲ್ಲ, ತಮ್ಮ ಕಚೇರಿಗಳನ್ನು ಕಾಯಂಗೊಳಿಸಿಲ್ಲ ಅಥವಾ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ. ಇಂತಹ ಪಕ್ಷಗಳು ತೆರಿಗೆ ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ವರ್ಗಾವಣೆ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಸಾಧ್ಯತೆ ಇವೆ ಎಂದು ಆರೋಗ್ಯ ಹೇಳಿಕೊಂಡಿದೆ.

ಹೀಗಾಗಿಯೇ, 2019ರಿಂದ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ 345 ಪಕ್ಷಗಳನ್ನು ಗುರುತಿಸಿದ್ದು, ಅವುಗಳ ರದ್ದತಿಗಾಗಿ ಶೋ-ಕಾಸ್ ನೋಟಿಸ್ ನೀಡಿರುವುದಾಗಿ ಆಯೋಗ ಹೇಳಿಕೊಂಡಿದೆ.

“ಸಕ್ರಿಯವಾಗಿಲ್ಲದ ಪಕ್ಷಗಳನ್ನು ರದ್ದುಗೊಳಿಸುವುದರಿಂದ, ಆದಾಯ ತೆರಿಗೆ ವಿನಾಯಿತಿಯ ದುರುಪಯೋಗ ಮತ್ತು ಪಕ್ಷಗಳ ಹೆಸರಿನಲ್ಲಿ ನಡೆಯುವ ಅಕ್ರಮ ಹಣ ವರ್ಗಾವಣೆ ಚಟುವಟಿಕೆಯನ್ನು ತೊಡಗುವುದನ್ನು ತಡೆಯಬಹುದು. ಇದರಿಂದ, ಆರ್ಥಿಕ ಪಾರದರ್ಶಕತೆಯನ್ನು ಖಾತ್ರಿಪಡಿಸಬಹುದು. ಸಕ್ರಿಯವಾಗಿಲ್ಲದ ಪಕ್ಷಗಳಿಂದಾಗಿ ಚುನಾವಣಾ ಪ್ರಕ್ರಿಯೆಗಳು ದುರ್ಬಲಗೊಳ್ಳುತ್ತಿವೆ. ಚುನಾವಣೆಯ ಸಮಗ್ರತೆಯನ್ನು ಕಾಪಾಡಲು ರದ್ದತಿಯು ನೆರವಾಗುತ್ತದೆ” ಎಂದು ಆಯೋಗ ವಾದಿಸಿದೆ.

ಆದಾಗ್ಯೂ, ಆರ್‌ಪಿ ಕಾಯ್ದೆ-1951ರ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸುವ ಸ್ಪಷ್ಟ ಅಧಿಕಾರವಿಲ್ಲ. 2002ರ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ‘ಮೂರು ಸಂದರ್ಭಗಳಲ್ಲಿ ಮಾತ್ರವೇ ರಾಜಕೀಯ ಪಕ್ಷಗಳನ್ನು ರದ್ದುಗೊಳಿಸಬಹುದು’ ಎಂದು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲಾಗಿದೆ.

ಆ ಮೂರು ಸಂದರ್ಭಗಳು;

  1. ಪಕ್ಷವು ವಂಚಿಸಿ ನೋಂದಣಿ ಮಾಡಿಕೊಂಡಿದ್ದರೆ,
  2. ಪಕ್ಷವು ತನ್ನ ಪ್ರಣಾಳಿಕೆಯನ್ನು ಸಂವಿಧಾನಕ್ಕೆ ವಿರುದ್ಧವಾಗಿ ಮಾರ್ಪಡಿಸಿದ್ದರೆ,
  3. ಕೇಂದ್ರ ಸರ್ಕಾರವು ಪಕ್ಷವನ್ನು ‘ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ-1967’ ಅಡಿ ಕಾನೂನುಬಾಹಿರ ಎಂದು ಘೋಷಿಸಿದ್ದರೆ,

ಈ ಮೂರು ಸಂದರ್ಭಗಳಲ್ಲಿ ಮಾತ್ರವೇ ರಾಜಕೀಯ ಪಕ್ಷಗಳ ನೋಂದಣಿಯನ್ನು ಆಯೋಗವು ರದ್ದುಗೊಳಿಸಬಹುದು. ಇದರ ಹೊರತಾಗಿ, ಚುನಾವಣೆಯಲ್ಲಿ ಭಾಗವಹಿಸದಿರುವುದು, ಲೆಕ್ಕಪತ್ರ ಸಲ್ಲಿಸದಿರುವುದು ಅಥವಾ ಕಚೇರಿಯನ್ನು ಕಾಯಂಗೊಳಿಸದೇ ಇರುವುದು – ಇಂತಹ ಕಾರಣಗಳು ನೋಂದಣಿ ರದ್ದತಿಗೆ ಕಾನೂನಾತ್ಮಕ ಆಧಾರವಾಗುವುದಿಲ್ಲ.

ಈ ಲೇಖನ ಓದಿದ್ದೀರಾ?: ಬಿಹಾರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ: ‘ಎನ್‌ಆರ್‌ಸಿ’ಗಿಂತಲೂ ಹೆಚ್ಚು ಅಪಾಯಕಾರಿ

ಆದಾಗ್ಯೂ, ಆಯೋಗದ 2016ರ ಚುನಾವಣಾ ಸುಧಾರಣಾ ಶಿಫಾರಸು ಮತ್ತು ಕಾನೂನು ಆಯೋಗದ 255ನೇ ವರದಿಯಲ್ಲಿ (2015) 10 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಲು ಕಾನೂನು ರೂಪಿಸುವಂತೆ ಶಿಫಾರಸು ಮಾಡಿದ್ದವು.

ಆದರೆ, ಚುನಾವಣಾ ಆಯೋಗ ಮತ್ತು ಕಾನೂನು ಆಯೋಗಗಳ ಶಿಫಾರಸುಗಳನ್ನು ಕೇಂದ್ರ ಸರ್ಕಾರವು ಒಪ್ಪಿ, ಜಾರಿಗೊಳಿಸಿಲ್ಲ. ಹೀಗಾಗಿ, ಚುನಾವಣಾ ಆಯೋಗದ ಕ್ರಮ ಜರುಗಿಸಲು ಸಾಧ್ಯವಿಲ್ಲ. ಜೊತೆಗೆ, ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸುವ ಕ್ರಮವು ರಾಜಕೀಯ ವಿವಾದಕ್ಕೂ ಕಾರಣವಾಗುವ ಸಾಧ್ಯತೆಗಳಿವೆ. ಮಾತ್ರವಲ್ಲದೆ, ಸಂವಿಧಾನದ 19(1)(c) ಅನುಚ್ಛೇದದ ಅಡಿಯಲ್ಲಿ ಸಂಘಗಳನ್ನು ಸ್ಥಾಪಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂಬ ಆರೋಪಗಳಿವೆ.

ಹೀಗಾಗಿ, ಪ್ರಸ್ತುತ ಸಂದರ್ಭದಲ್ಲಿ ಸಕ್ರಿಯವಾಗಿಲ್ಲದ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಲು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಸಾಕಷ್ಟು ಸವಾಲುಗಳಿವೆ. ಅವುಗಳನ್ನು ನಿವಾರಿಸದ ಹೊರತು, ಅಗತ್ಯ ಕಾನೂನುಗಳನ್ನು ಸರ್ಕಾರವು ಜಾರಿಗೆ ತರದ ಹೊರತು, ಆಯೋಗವು ತನ್ನ ಕ್ರಮವನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗದೇ ಹೋಗಬಹುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ನಾವು ಯಾರ ಪರವೂ ಇಲ್ಲ; ನ್ಯಾಯದ ಪರ: ಡಿಸಿಎಂ ಡಿ.ಕೆ.ಶಿವಕುಮಾರ್

"ನಾವು ಧರ್ಮಸ್ಥಳದವರ ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ...

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್

ಬಿಹಾರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ(SIR) ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತ...

ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ: ಡಿಸಿಎಂ ಡಿ ಕೆ ಶಿವಕುಮಾರ್

"ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ...

ಚಿತ್ರದುರ್ಗ | ಚಳ್ಳಕೆರೆ ನಗರದಲ್ಲಿ ರಸ್ತೆ ಗುಂಡಿಗಳ ಪೂಜೆ; ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನೂತನ ಪ್ರತಿಭಟನೆ

ಚಳ್ಳಕೆರೆ ನಗರದ ಬಹುತೇಕ ವಾರ್ಡುಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ, ಅಲ್ಲದೆ ತಾಲೂಕಿನ...

Download Eedina App Android / iOS

X