ತೆಲಂಗಾಣದ ಪಾಶಮಿಲರಂನಲ್ಲಿರುವ ಔಷಧ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 38 ಮಂದಿ ಮೃತಪಟ್ಟಿದ್ದರು. ಸುಮಾರು 35 ಮಂದಿ ಗಾಯಗೊಂಡಿದ್ದರು. ಹಲವರು ಕಾಣೆಯಾಗಿದ್ದರು. ಅವರಲ್ಲಿ, 9 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ ಪತ್ತೆಗಾಗಿನ ಪ್ರಯತ್ನಗಳು ಮುಂದುವರೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 30ರಂದು ಔಷಧ ತಯಾರಿಕ ಘಟಕದಲ್ಲಿ ಸ್ಪೋಟ ಸಂಭವಿಸಿತ್ತು. ಸ್ಪೋಟಕ್ಕೆ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಕಾರಣಗಳನ್ನು ಗುರುತಿಸಲು ಮತ್ತು ಮೌಲ್ಯಮಾಪನ ಮಾಡಲು ತಜ್ಞರ ತಂಡವನ್ನು ರಚಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಕಾಣೆಯಾದವರ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾರಿತೋಷ್ ಪಂಕಜ್ ತಿಳಿಸಿದ್ದಾರೆ.
ವಿಜ್ಞಾನಿ ಡಾ. ಬಿ.ವೆಂಕಟೇಶ್ವರ್ ರಾವ್ ನೇತೃತ್ವದ ತಜ್ಞರ ಸಮಿತಿಯು ಇನ್ನು ಒಂದು ತಿಂಗಳೊಳಗೆ ತನಿಖಾ ವರದಿ ಸಲ್ಲಿಸಲಿದೆ. ವರದಿ ಆಧಾರಿಸಿ ಸರ್ಕಾರವು ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.