ಬಹು ನಿರೀಕ್ಷೆಯ ಕಳ್ಳಿಪಾಳ್ಯ ರೈಲ್ವೆ ಅಂಡರ್ ಪಾಸ್ ಸೇತುವೆಗೆ ಚಾಲನೆ ನೀಡಲು ಸ್ಥಳ ಪರಿಶೀಲನೆ ನಡೆಸಿ ಏಳು ದಿನದಲ್ಲಿ ಕಾಮಗಾರಿ ಆರಂಭಿಸಿ ಆರು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಕೊಡುವ ಭರವಸೆಯನ್ನು ಕೇಂದ್ರದ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ನೀಡಿದರು.
ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಕಳ್ಳಿಪಾಳ್ಯ ಗೇಟ್ ಬಳಿ ಸ್ಥಳ ಪರಿಶೀಲನೆ ನಡೆಸಿದ ಸಚಿವ ಸೋಮಣ್ಣ ಅವರು ಸ್ಥಳದಲ್ಲೇ ಕಂದಾಯ ಅಧಿಕಾರಿಗಳು ಹಾಗೂ ರೈಲ್ವೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿ ಕೂಡಲೇ ಕೆಲಸ ಆರಂಭಿಸಲು ಸೂಚನೆ ನೀಡಿದರು.
ರೈಲ್ವೆ ಹಳಿಯ ಪಕ್ಕ ಭೂಮಿ ವಶಕ್ಕೆ ಪಡೆಯಲು ಕೇಂದ್ರ ಸರ್ಕಾರ ಈಗಾಗಲೇ 58 ಲಕ್ಷ ರೂಗಳನ್ನು ಮೀಸಲಿಟ್ಟಿದೆ. ಕಂದಾಯ ಇಲಾಖೆ ತೀವ್ರಗತಿಯಲ್ಲಿ ವಶಕ್ಕೆ ಪಡೆಯುವ ಎಲ್ಲಾ ಪ್ರಕ್ರಿಯೆ ನಡೆಸಿ ಕೆಲಸಕ್ಕೆ ಚಾಲನೆ ನೀಡಬೇಕು. ಟೆಂಡರ್ ಪ್ರಕ್ರಿಯೆ ಮುಗಿದ ಕಳ್ಳಿಪಾಳ್ಯ ಗೇಟ್ ಹಾಗೂ ಮಲ್ಲಸಂದ್ರ ಗೇಟ್ ಸೇತುವೆ ಕಾಮಗಾರಿಗೆ ಇನ್ನೆರೆಡು ದಿನದಲ್ಲಿ ಭೂಮಿ ವಶಕ್ಕೆ ಪಡೆಯುವ ದಾಖಲೆ ಸಿದ್ಧವಾಗಬೇಕು ಎಂದು ಸೂಚಿಸಿದರು.
ಕೇಂದ್ರ ಸರ್ಕಾರದಿಂದ 23 ಸಾವಿರ ಕೋಟಿ ರೂಗಳನ್ನು ಮೀಸಲಿಟ್ಟ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ರೈಲ್ವೆ ಸೇತುವೆ ಕಾಮಗಾರಿ 2027 ರೊಳಗೆ ಪೂರ್ಣಗೊಳ್ಳಲಿದೆ. ಈ ಎಲ್ಲಾ ಕೆಲಸಗಳಿಗೆ ಸ್ಥಳೀಯರ ಸಹಕಾರ ಅತ್ಯಗತ್ಯ. ನಿಮ್ಮ ವೈಯಕ್ತಿಕ ಆಸಕ್ತಿ ತೋರಿ ಕೆಲಸ ಪೂರ್ಣಗೊಳಿಸಿ ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಸುಮಾರು 20 ಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ರೈಲ್ವೆ ಗೇಟ್ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಹಾಲು ವಾಹನ, ಶಾಲಾ ವಾಹನ ಎಲ್ಲವೂ ಸಕಾಲಕ್ಕೆ ತಲುತ್ತಿರಲಿಲ್ಲ. ಗೇಟ್ ಬಂದ್ ಆದರೆ ಹದಿನೈದು ನಿಮಿಷ ಕಾಯಬೇಕಿತ್ತು. ಈ ಅಂಡರ್ ಪಾಸ್ ಸೇತುವೆ ಬಗ್ಗೆ ರೈಲ್ವೆ ಸಚಿವ ಸೋಮಣ್ಣ ಅವರಲ್ಲಿ ಮನವಿ ಮಾಡಿದ್ದೆವು. ಮನವಿ ಪುರಸ್ಕರಿಸಿ ಕೂಡಲೇ 16 ಕೋಟಿ ರೂಗಳ ಮಂಜೂರು ಮಾಡಿದ್ದಾರೆ. ಶೀಘ್ರದಲ್ಲಿ ಕಾಮಗಾರಿ ನಡೆಸಬೇಕು. ಸ್ಥಳೀಯರ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ನಹೀದಾ ಜಂಜಂ, ತಹಶೀಲ್ದಾರ್ ಬಿ.ಆರತಿ, ನೈರುತ್ಯ ರೈಲ್ವೆ ಬಿಆರ್ ಎಂ ಅಶುತೋಷ್ ಸಿಂಗ್, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಭೈರಪ್ಪ, ಯೋಗಾನಂದ, ಶಿವಪ್ರಸಾದ್, ಬ್ಯಾಟರಂಗೇಗೌಡ ಇತರರು ಇದ್ದರು.