ಇಂದು ಸಂಜೆ ಮತ್ತು ನಾಳೆ ಅಂದರೆ, ಜುಲೈ 3 ಮತ್ತು 4 ರಂದು ಹಾಸನ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಂಭವ ಇದ್ದು, ಸಾರ್ವಜನಿಕರು ಅಗತ್ಯ ಎಚ್ಚರಿಕೆ ವಹಿಸಿ ಕೆರೆ-ಕಟ್ಟೆ ಹಾಗೂ ನದಿ ಪಾತ್ರಗಳ ಬಳಿ ಹೋಗದಿರಲು ಹಾಗೂ ಜಾನುವಾರುಗಳನ್ನು ಬಿಡದಿರಲು ಕೋರಲಾಗಿದೆ. ಗುಡ್ಡ ಕುಸಿತ ಪ್ರಕರಣಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಹಾಗೂ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗುವುದರಿಂದ ನದಿಪಾತ್ರಗಳ ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ತಿಳಿಸಿದೆ. ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಿರುವಂತೆ ಸಹಕರಿಸಲು ಈ ಮೂಲಕ ಕೋರಿದೆ.

ತುರ್ತು ಸಂದರ್ಭಗಳಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿ ದೂರವಾಣಿ ಸಂಖ್ಯೆ: 08172-261111 ಹಾಗೂ ಉಚಿತ ಸಹಾಯವಾಣಿ 1077 ಗೆ ಕರೆ ಮಾಡಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಲತಾ ಕುಮಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸನ | ಕೋಮು ಹಿಂಸಾಚಾರ ತಡೆಗಟ್ಟಿ, ಶಾಂತಿ ಕಾಪಾಡಲು ಡಿಸಿಗೆ ಮನವಿ
