ದುಷ್ಕರ್ಮಿಗಳ ಗುಂಪೊಂದು 14 ವರ್ಷದ ಬಾಲಕನನ್ನು ವಿವಸ್ತ್ರಗೊಳಿಸಿ ಭೀಕರವಾಗಿ ಇರಿದು ಕೊಂದಿರುವ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ನಾಲ್ವರು ಬಾಲಾಪರಾಧಿಗಳು ಸೇರಿದಂತೆ 8 ಜನರ ಗುಂಪು ಈ ಕೃತ್ಯ ಎಸಗಿದೆ ಎಂದು ಪೊಪಲೀಸರು ತಿಳಿಸಿದ್ದಾರೆ.
ದೆಹಲಿಯ ಹೈದರ್ಪುರ ಪ್ರದೇಶದಲ್ಲಿ ಘಟನೆ ನಡೆದಿದೆ. ಬಾಲಕ ಮೃತದೇಹವು ಹೈದರ್ಪುರ ಹೊರವಲಯದಲ್ಲಿರುವ ಕಾಲುವೆಯಲ್ಲಿ ಪತ್ತೆಯಾಗಿದೆ. ಸಿರಾಸ್ಪುರದ ಜೀವನ್ ಪಾರ್ಕ್ ನಿವಾಸಿಯಾಗಿದ್ದ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿ, ವಿವಸ್ತ್ರಗೊಳಿಸಿ, ಕೊಂದಿದ್ದಾರೆ. ಇದು ಸೇಡಿನ ಕೃತ್ಯವಾಗಿದೆ ಎಂದು ಪೊಲಿಸರು ಶಂಕಿಸಿದ್ದಾರೆ.
ಕೃತ್ಯವು ಮೂರ್ನಾಲ್ಕು ದಿನಗಳ ಹಿಂದೆಯೇ ನಡೆದಿದ್ದು, ಈಗ ಮೃತದೇಹ ಪತ್ತೆಯಾಗಿದೆ. ದೇಹವು ಭಾಗಶಃ ಕೊಳೆತಿದ್ದು, ಪೊಲಿಸರು ಮರಣೋತ್ತರ ಪರೀಕ್ಷೆಗೆ ರವಾಹಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಅವರ ಬಂಧನಕ್ಕಾಗಿ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.
“ತಾಂತ್ರಿಕ ಕಣ್ಗಾವಲು ಬಳಸಿ, ಇಬ್ಬರು ಪ್ರಮುಖ ಆರೋಪಿಗಳಾದ ಕೃಷ್ಣ ಅಲಿಯಾಸ್ ಭೋಲಾ (19) ಮತ್ತು ಇನ್ನೊಬ್ಬ ಬಾಲಾಪರಾಧಿಯನ್ನು ಮೊದಲಿಗೆ ಗುರುತಿಸಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಹರೇಶ್ವರ್ ವಿ ಸ್ವಾಮಿ ಹೇಳಿದ್ದಾರೆ.
ಕಳೆದ ವರ್ಷ ಮೋನು ಮತ್ತು ಸೋನು ಎಂಬವರು ಆರೋಪಿ ಕೃಷ್ಣನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ಬಗ್ಗೆ ಸಾಕ್ಷಿ ಹೇಳಲು ಮೃತ ಬಾಲಕ ನಿರಾಕರಿಸಿದ್ದನು. ಈ ಕಾರಣಕ್ಕೆ, ಆರೋಪಿ ಕೃಷ್ಣ ಮೃತ ಬಾಲಕನ ಮೇಲೆ ದ್ವೇಷ ಸಾಧಿಸಿದ್ದ. ಆತನನ್ನು ಕೊಲ್ಲಲು ತನ್ನ ಇತರ ಏಳು ಮಂದಿ ಆರೋಪಿ ಸ್ನೇಹಿತರೊಂದಿಗೆ ಸಂಚು ರೂಪಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
“ಜೂನ್ 29-30ರ ನಡುರಾತ್ರಿ ಕೃಷ್ಣ ಮತ್ತು ಇತರ ಆರೋಪಿಗಳು ವೀರ್ ಚೌಕ್ ಬಜಾರ್ ಬಳಿ ಮೃತ ಬಾಲಕನನ್ನು ಅಡ್ಡಗಟ್ಟಿದ್ದಾರೆ. ಆತನ ಸ್ನೇಹಿತನ ಎದುರೇ ಅಪಹರಿಸಿ, ಎಳೆದೊಯ್ದಿದ್ದಾರೆ. ಅಲ್ಲಿ, ಆತನ ಬಾಯಿಗೆ ಸ್ಕಾರ್ಫ್ ಕಟ್ಟಿ, ಆತನನ್ನು ವಿವಸ್ತ್ರಗೊಳಿಸಿ, ಆರೋಪಿಗಳು ಸರದಿಯಲ್ಲಿ ಆತನಿಗೆ ಇರಿದಿದ್ದಾರೆ. ಮೃತದೇಹವನ್ನು ನೀರಿಗೆ ಎಸೆದಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗಳ ಬಳಿಕ ಈವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.