ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರನ್ನು ಗಡಿಪಾರು ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಡೊನಾಲ್ಡ್ ಟ್ರಂಪ್ ಅವರ ಗಡಿಪಾರು ನೀತಿಯನ್ನು ಸ್ವಂತ ಕುಟುಂಬದ ಮೇಲೆ ಮೊದಲು ಪ್ರಯೋಗಿಸಬೇಕು, ಕಾನೂನು ಪ್ರಕಾರವಾಗಿ ಅಮೆರಿಕ ಪೌರತ್ವ ಪಡೆದುಕೊಂಡ ಟ್ರಂಪ್ ಪತ್ನಿ ಮೆಲಾನಿಯಾ, ಅವರ ಪೋಷಕರು ಮತ್ತು ಮಗ ಬ್ಯಾರನ್ ಟ್ರಂಪ್ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಮೆಲಾನಿಯಾ ಸ್ಲೊವೇನಿಯಾದಲ್ಲಿ 1970ರಲ್ಲಿ ಜನಿಸಿದ್ದು, 1996ರಲ್ಲಿ ಅಮೆರಿಕಕ್ಕೆ ಆಗಮಿಸಿದ್ದಾರೆ. 2001ರಲ್ಲಿ ಗ್ರೀನ್ ಕಾರ್ಡ್ ಪಡೆದು, 2006ರಲ್ಲಿ ಅಮೆರಿಕದ ಪೌರತ್ವ ಪಡೆದಿದ್ದಾರೆ. ಬಳಿಕ 2007ರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾಗಿದ್ದಾರೆ.
ಈ ಸಂಬಂಧ ಆನ್‌ಲೈನ್ ಅರ್ಜಿಗೆ ಮೂರು ಸಾವಿರಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ. “ಟ್ರಂಪ್ ಸ್ವಾಭಾವಿಕ ನಾಗರಿಕರನ್ನು ಗಡಿಪಾರು ಮಾಡಲು ಬಯಸುತ್ತಿರುವುದರಿಂದ, ಮೆಲಾನಿಯಾ ಮತ್ತು ಅವರ ಪೋಷಕರು ಮೊದಲು ಹೊರಹೋಗುವುದು ನ್ಯಾಯಯುತ. ಇದಲ್ಲದೆ, ಮೆಲಾನಿಯಾ ಅವರ ಮಗ ಬ್ಯಾರನ್ ಕೂಡಾ ಹೊರಹೋಗುವಂತೆ ಒತ್ತಾಯಿಸಬೇಕು. ಏಕೆಂದರೆ ಅವರ ತಾಯಿಯ ತಾಯಿ ಬೇರೆ ದೇಶದಲ್ಲಿ ಜನಿಸಿದವರು” ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ಇದನ್ನು ಓದಿದ್ದೀರಾ? ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಟ್ರಂಪ್ ಪದತಲಕ್ಕೆ ಜಾರಿದ್ದು ಹೇಗೆ?
“ಇವೆಲ್ಲವೂ ನಿಮ್ಮ ತಾಯಿಯ ತಾಯಿ ಅಮೆರಿಕದಲ್ಲಿ ಜನಿಸಿರಬೇಕು ಎಂಬ ಟ್ರಂಪ್ ಜಾರಿಗೆ ತರುತ್ತಿರುವ ನೀತಿಯ ಭಾಗವಾಗಿದೆ. ಮೆಲಾನಿಯಾ ಅವರ ತಾಯಿ ಬೇರೆಡೆ ಜನಿಸಿದರು ಎಂದು ನಮಗೆ ತಿಳಿದಿದೆ. ಈ ವಿಚಾರದಲ್ಲಿ ಯಾವುದೇ ವಿನಾಯಿತಿ ಇರಬಾರದು. ಮೊದಲ ದೋಣಿಯಲ್ಲಿ ಅಥವಾ ವಿಮಾನದಲ್ಲಿ ಅವರನ್ನು ಕಳುಹಿಸಿ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
“ಇದು ನಿಜವಾಗಿಯೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಿರ್ಧಾರವಾಗಿದ್ದರೆ, ಮೆಲಾನಿಯಾ ದೇಶದಿಂದ ಹೊರಹೋಗಬೇಕು” ಎಂದು ಆಗ್ರಹಿಸಲಾಗಿದೆ. ಮಾರ್ಚ್ 25ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದ DOGE(Department of Government Efficiency) ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಟ್ರಂಪ್ ತನಿಖೆ ನಡೆಸಿ ಮೆಲಾನಿಯಾ ಟ್ರಂಪ್ ಅವರನ್ನು ಗಡಿಪಾರು ಮಾಡಬೇಕು ಎಂದು ಡೆಮಾಕ್ರಟಿಕ್ ಕ್ಯಾಲಿಫೋರ್ನಿಯಾ ಪ್ರತಿನಿಧಿ ಮ್ಯಾಕ್ಸಿನ್ ವಾಟರ್ಸ್ ಸೂಚಿಸಿದ್ದರು. ಇದಾದ ಕೆಲವೇ ದಿನಗಳ ನಂತರ ಮೆಲಾನಿಯಾ ಗಡಿಪಾರಿಗೆ ಆಗ್ರಹಿಸಿ ಅಭಿಯಾನ ಆರಂಭವಾಗಿದೆ.
