ಪಾರಂಪರಿಕ ಕೊಲ್ಹಾಪುರಿ ಚಪ್ಪಲಿಗಳ ವಿನ್ಯಾಸ ನಕಲು ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಇಟಲಿ ಮೂಲದ ಐಷಾರಾಮಿ ಫ್ಯಾಷನ್ ಬ್ರಾಂಡ್ ಪ್ರಾಡಾ(ಪಿಆರ್‌ಎಡಿಎ) ಕಂಪನಿ ವಿರುದ್ಧ ಕಾನೂನು ಹೋರಾಟಕ್ಕೆ ಕರ್ನಾಟಕ ಸರ್ಕಾರದ ಉದ್ಯಮ ಘಟಕವಾಗಿರುವ ಡಾ.ಬಾಬುಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕರ್) ಮುಂದಾಗಿದೆ.
ಲಿಡ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಡಾ.ಕೆ.ಎಂ ವಸುಂಧರಾ, ಪ್ರಾಡಾ ಕಂಪನಿ ವಿರುದ್ಧ ₹500 ಕೋಟಿ ರೂ.ನಷ್ಟದ ದಾವೆ ಹೂಡಲು ತೀರ್ಮಾನಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
“ಕೊಲ್ಹಾಪುರಿ ಚಪ್ಪಲಿಯ ವಿನ್ಯಾಸವನ್ನು 2018ರ ಡಿಸೆಂಬರ್ 11ರಂದು ಲಿಡ್ಕರ್ ಹಾಗೂ ಮಹಾರಾಷ್ಟ್ರದ ಲಿಡ್ ಕಾಂ ಜಂಟಿಯಾಗಿ ಜಿಯೋಗ್ರಾಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ (ರಿಜಿಸ್ಟ್ರೇಶನ್ ಅಂಡ್ ಪ್ರೊಟೆಕ್ಷನ್) 1999ರಡಿ ನೋಂದಣಿ ಮಾಡಿಸಲಾಗಿದೆ. ಆದರೆ, ಪ್ರಾಡಾ ಕಂಪನಿಯು ಕೊಲ್ಹಾಪುರಿ ಚಪ್ಪಲಿಗಳನ್ನು ‘ಲೆದರ್ ಪ್ಲಾಟ್ ಸ್ಯಾಂಡಲ್ಸ್ ಹೆಸರಿನಲ್ಲಿ ಸುಮಾರು 1.2 ಲಕ್ಷ ರೂ. ಮೌಲ್ಯಕ್ಕೆ ಫ್ಯಾಶನ್ ಶೋವೊಂದರಲ್ಲಿ ಪ್ರದರ್ಶನಕ್ಕಿಟ್ಟಿದೆ. ಈ ಕ್ರಮ ಜಿಐಜಿ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಿಂದ ಭಾರತದ ಪಾರಂಪರಿಕ ಅಸ್ಮಿತೆಗೆ ಧಕ್ಕೆಯಾಗಿದೆ” ಎಂದು ಅವರು ಹೇಳಿದ್ದಾರೆ.

”ಈ ನಿಟ್ಟಿನಲ್ಲಿ ಜಿಐಜಿ ಕಾಯಿದೆ ಉಲ್ಲಂಘಿಸಿ ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ಬಳಸಿರುವ ಪ್ರಾಡಾ ಕಂಪನಿಯ ವಿರುದ್ಧ 500 ಕೋಟಿ ರೂ.ಗಳ ನಷ್ಟ ಹಾನಿ ದಾವೆ ಹೂಡಲು ತೀರ್ಮಾನಿಸಲಾಗಿದೆ. ಜತೆಗೆ, ನಿಗಮದ ಕಾನೂನು ಸಲಹೆಗಾರರಾದ ನಿವೃತ್ತ ನ್ಯಾ. ಗೋಪಾಲ್ ಅವರಿಂದ ಪ್ರಾಡಾ ಕಂಪನಿಗೆ ನೋಟಿಸ್ ಜಾರಿಗೊಳಿಸಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಮುಂದಿನ 7 ದಿನ ತೀವ್ರ ಗಾಳಿ, ಭಾರೀ ಮಳೆ: ಹವಾಮಾನ ಇಲಾಖೆ

ಅಲ್ಲದೆ, ವಂಚನೆಗೆ ಪ್ರತಿಯಾಗಿ ಪ್ರಾಡಾ ಕಂಪನಿ ಲಿಡ್ಕರ್‌ನಿಂದ ಪಾದರಕ್ಷೆ ಖರೀದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಈ ಮೂಲಕ ಪಾರಂಪರಿಕ ಚರ್ಮ ಕುಶಲಕರ್ಮಿಗಳಿಗೆ ನಿರಂತರ ಉದ್ಯೋಗಾವಕಾಶ ಹಾಗೂ ಆರ್ಥಿಕ ಬಲ ತುಂಬುವುದು ಕಾನೂನು ಹೋರಾಟದ ಉದ್ದೇಶ ಎಂದು ಲಿಡ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ ವಸುಂಧರಾ ತಿಳಿಸಿದ್ದಾರೆ.
ಕೊಲ್ಹಾಪುರಿ ಚಪ್ಪಲಿ ಬಗ್ಗೆ
ಕೊಲ್ಹಾಪುರಿ ಚಪ್ಪಲಿ ಭಾರತದ ಮಹಾರಾಷ್ಟ್ರದ ಕೊಲ್ಹಾಪುರದಿಂದ ಉಗಮವಾದ ಸಾಂಪ್ರದಾಯಿಕ ಕೈಯಿಂದ ಮಾಡಿದ ಚರ್ಮದ ಫೂಟ್‌ವೇರ್ ಆಗಿದೆ. ಇದು ತನ್ನ ವಿಶಿಷ್ಟ ವಿನ್ಯಾಸ, ಬಾಳಿಕೆ ಮತ್ತು ಕರಕುಶಲತೆಗೆ ಹೆಸರುವಾಸಿಯಾಗಿದೆ. ಈ ಚಪ್ಪಲಿಗಳನ್ನು ಸಾಮಾನ್ಯವಾಗಿ ಎರಡು ತೊಗಲಿನಿಂದ (ಗೋವಿನ ಅಥವಾ ಎಮ್ಮೆಯ ಚರ್ಮ) ತಯಾರಿಸಲಾಗುತ್ತದೆ, ಇದನ್ನು ಸಸ್ಯದ ತೊಗಲಿನಿಂದ ಒಗೆದು, ಕೈಯಿಂದ ಕೆತ್ತಲಾಗುತ್ತದೆ ಮತ್ತು ಕೆಲವೊಮ್ಮೆ ಸಾಂಪ್ರದಾಯಿಕ ವಿಧಾನಗಳಿಂದ ಬಣ್ಣ ಹಾಕಲಾಗುತ್ತದೆ.
ಕೊಲ್ಹಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕುಶಲಕರ್ಮಿಗಳು ಕೈಯಿಂದ ಚಪ್ಪಲಿಗಳನ್ನು ತಯಾರಿಸುತ್ತಾರೆ, ಇದಕ್ಕೆ ಗಂಟೆಗಟ್ಟಲೆ ಕೆಲಸ ಬೇಕಾಗುತ್ತದೆ.
