ಸರ್ಕಾರ ಬಿಜಿನೆಸ್ ಮಾಡುವುದಿದ್ದರೆ ಬೇರೆ ಕಡೆ ಮಾಡಲಿ, ರೈತರು ಭೂಮಿ ಕೊಡುವುದಿಲ್ಲ ಎಂದ ಮೇಲೆ ರೈತರಿಗೆ ಅವರ ಭೂಮಿ ಕಸಿಯಲು ಯಾವುದೇ ಅಧಿಕಾರ ಇಲ್ಲ ಎಂದು ಸರ್ಕಾರಕ್ಕೆ ರೈತ ನಾಯಕ ರಾಕೇಶ್ ಟಿಕಾಯತ್ ಸಂದೇಶ ನೀಡಿದರು.
ದೇವನಹಳ್ಳಿ ರೈತ ಹೋರಾಟದ ಮುಂದಿನ ಯಾವುದೇ ನಿರ್ಧಾರಕ್ಕೆ ಸಂಯುಕ್ತ ಕಿಸಾನ್ ಮೋರ್ಚಾದಿಂದ ಬೆಂಬಲ ಇರಲಿದೆ ಎಂದು ಘೋಷಿಸಿ ಗುರುವಾರ ಮಾತನಾಡಿದರು.
ಚನ್ನರಾಯಪಟ್ಟ ರೈತರ ಚಳವಳಿ ನಡೆಯುತ್ತಿರುವುದು ಭೂಮಿಯ ರಕ್ಷಣೆಗಾಗಿ, ಇಡೀ ದೇಶದ ಕಣ್ಣು ಈ ಚಳವಳಿಯ ಮೇಲಿದೆ, ಪೂರ್ತಿ ಸಾವಿರದ ಇನ್ನೂರು ದಿನ ನಡೆದಿದೆ, ಬಹಳಷ್ಟು ಚಳವಳಿಗಳಲ್ಲಿ ರೈತರು ಸರ್ಕಾರದ ಜೊತೆಗೆ ಮಾತುಕತೆಗೆ ಕೂರುತ್ತಾರೆ, ಆದರೆ ಇಲ್ಲಿ ರೈತರು ಹೇಳಿದ್ದಾರೆ, ನಮಗೆ ಮಾತುಕತೆ ಬೇಕಾಗಿಯೇ ಇಲ್ಲ, ನಾವು ಭೂಮಿ ಕೊಡುವುದಿಲ್ಲ ಎಂದು. ಆ ಕಾರಣದಿಂದ ಇದು ಬಹಳ ವಿಶೇಷವಾದ ಹೋರಾಟ ಎಂದು ಹೇಳಿದರು.
“ದೆಹಲಿಯಲ್ಲಿ ಎಸ್‌ಕೆಎಂ ಸಭೆಯಲ್ಲಿ ಈಗಾಗಲೇ ಈ ಹೋರಾಟದ ವಿಚಾರ ಅಜೆಂಡಾದಲ್ಲಿದೆ, ಒಂದು ವೇಳೆ ನಾಳೇಯ ಸಭೆಯಲ್ಲಿ ಒಳ್ಳೆಯ ನಿರ್ಧಾರದ ಜೊತೆಗೆ ಹೋರಾಟ ಮುಕ್ತಾಯ ಆಗದಿದ್ದರೆ, ಮುಂದೆಯೂ ಅದನ್ನು ಚರ್ಚೆಯಲ್ಲಿ ಸೇರಿಸಿಕೊಳ್ಳುತ್ತೇವೆ, ಎಸ್‌ಕೆಎಂ ಇಲ್ಲಿನ ರೈತರು ಮತ್ತು ಸಂಘಟನೆಗಳೂ ಏನು ನಿರ್ಧಾರ ಕೈಗೊಂಡರೂ ಅದರ ಜೊತೆಗಿರುತ್ತದೆ“ ಎಂದು ಹೇಳಿದರು.
ಡಾ. ದರ್ಶನ್ ಪಾಲ್ ಮಾತನಾಡಿ, “ಬೆಂಗಳೂರು ನಗರಕ್ಕೆ ಇಷ್ಟು ಹತ್ತಿರವಿದ್ದೂ ತಮ್ಮ ಭೂಮಿಯನ್ನು ಬಿಡುವುದಿಲ್ಲವೆಂದು ಸುಮಾರು ಮೂರೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿರುವ ರೈತರಿಗೆ ಅಭಿನಂದನೆಗಳು. ಈ ಹೋರಾಟ ಮಾದರಿಯಾದದ್ದು. ಈಚೆಗೆ ಎಸ್.ಕೆ.ಎಂ ಸಭೆ ನಡೆದು ಎರಡು ವಿಚಾರಗಳಿಗೆ ಬೆಂಬಲವನ್ನು ನೀಡಬೇಕೆಂದು ನಿರ್ಧಾರವಾಗಿದೆ” ಎಂದರು.
ಉತ್ತರಪ್ರದೇಶದ ಎಸ್.ಕೆ.ಎಂನ ರಾಷ್ಟ್ರೀಯ ನಾಯಕ ಯುಧ್‌ವೀರ್ ಸಿಂಗ್ ಮಾತನಾಡಿ, “ರೈತರು ಹೆಚ್ಚೂಕಡಿಮೆ 1200 ದಿನಗಳ ಕಾಲ ಹೋರಾಟ ನಡೆಸಿದ್ದಾರೆ ಎಂದರೆ ಅದೇನೂ ಕಡಿಮೆ ವಿಚಾರವಲ್ಲ, ಸ್ವತಃ ಸಿದ್ಧರಾಮಯ್ಯ ಅವರು ಈ ರೈತರಿಗೆ ಭೂಸ್ವಾಧೀಣವನ್ನು ರದ್ದುಪಡಿಸುವ ಭರವಸೆ ಚುನಾವಣೆಗೆ ಮುಂಚೆ ನೀಡಿದ್ದಾರೆ. ಆ ಮಾತನ್ನು ಅವರು ಉಳಿಸಿಕೊಳ್ಳಬೇಕಿದೆ” ಎಂದು ಆಗ್ರಹಿಸಿದರು.
ಡಾ. ಸುನಿಲಮ್ ಮಾತನಾಡಿ, “ಈ ರೈತ ಆಂದೋಲನದ ಸಮಯದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ, ದಬ್ಬಾಳಿಕೆ ನಡೆಸಿದ ಪೊಲೀಸರ ಮೇಲೆ ಕಾನೂನು ಕ್ರಮ ಆಗಬೇಕೆಂದು ಎಸ್.ಕೆ.ಎಂ ಒತ್ತಾಯಿಸುತ್ತದೆ. ಹೋರಾಟದ ಪ್ರತಿನಿಧಿಗಳೊಂದಿಗೆ ನಾಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕರೆದಿರುವ ಸಭೆ ಇದೆ, ಅದು ಯಶಸ್ವಿಯಾಗುತ್ತದೆಂದು ನಾವು ಭರವಸೆ ಇಟ್ಟಿದ್ದೇವೆ. ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿಯವರು ಇಡೀ ದೇಶಾದ್ಯಂತ ಸುತ್ತಾಡಿ ಎನ್‌ಡಿಎ ಸರ್ಕಾರದ ಕರಾಳ ಕಾನೂನುಗಳ ವಿರುದ್ಧ ಮಾತನಾಡುವವರು, ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಅವರು ರೈತರಿಗೆ ನ್ಯಾಯ ಸಿಗುವುದನ್ನು ಖಾತ್ರಿ ಪಡಿಸಬೇಕಲ್ಲವೇ” ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಜು.4 ರಂದು ಕರೆದಿರುವ ಸಭೆಯಲ್ಲಿ ಭೂಸ್ವಾಧೀನ ರದ್ದುಮಾಡುವ ನಿರ್ಧಾರ ಪ್ರಕಟಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಸಂಯುಕ್ತ ಕಿಸಾನ್‌ಮೋರ್ಚಾದ ನಾಯಕರು. ಸಭೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರಾದ ವಿಜು ಕೃಷ್ಣನ್, ಕರ್ನಾಟಕದ ಜನಚಳುವಳಿಗಳ ಐಕ್ಯ ವೇದಿಕೆಯಾದ ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿನಿಧಿಗಳಾದ ಎಚ್ .ಎಂ.ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ, ಟಿ. ಯಶವಂತ್ ಮತ್ತು ಸಾಮಾಜಿಕ ಹೋರಾಟಗಾರರರಾದ ಎಸ್.ಆರ್.ಹಿರೇಮಠ್ ಇದ್ದರು.
