ಮೈಸೂರು ಜಿಲ್ಲೆ, ಸರಗೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ‘ ಆಶಾಕಿರಣ ದೃಷ್ಟಿ ಕೇಂದ್ರ ‘ ಉದ್ಘಾಟನೆಗೊಂಡು ಸಾರ್ವಜನಿಕರ ಸೇವೆಗೆ ಚಾಲನೆ ದೊರೆಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ” ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಅಂಧತ್ವ ನಿವಾರಣೆಗಾಗಿ ಇಂದಿನಿಂದ ರಾಜ್ಯಾದ್ಯಂತ ‘ ಆಶಾಕಿರಣ ದೃಷ್ಟಿ ‘ ಕೇಂದ್ರಗಳನ್ನು ಸಾರ್ವಜನಿಕರ ಸೇವೆಗೆ ಲಭ್ಯಗೊಳಿಸಿದ್ದೇವೆ. ಇಂದಿನಿಂದ (ಜುಲೈ.3) ರಾಜ್ಯದಲ್ಲಿ ಒಟ್ಟು 393 ಕೇಂದ್ರಗಳು ಏಕಕಾಲದಲ್ಲಿ ಲೋಕಾರ್ಪಣೆಗೊಂಡವು. “
ಈ ಕಾರ್ಯಕ್ರಮದ ಉದ್ದೇಶ ಸಮಗ್ರ ಕಣ್ಣಿನ ಆರೈಕೆ ಸೇವೆಗಳು. ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಅರ್ಹ ಫಲಾನುಭವಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆ. ಉಚಿತ ನೇತ್ರ ಸಂಗ್ರಹಣೆ ಮತ್ತು ವಿತರಣೆ. 40ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕಣ್ಣಿನ ಪರೀಕ್ಷೆ ನಡೆಸಿ ಕನ್ನಡಕ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ದಿನ ನಿತ್ಯದ ಚಟುವಟಿಕೆಯಲ್ಲಿ ಮನೆ ಮನೆ ಬೇಟಿ ನೀಡಿ ಪ್ರಾಥಮಿಕ ತಪಾಸಣೆ ಮಾಡುತ್ತಾರೆ. ತಪಾಸಣೆಯಲ್ಲಿ ಶಂಕಿತ ಪ್ರಕರಣಗಳು ಕಂಡು ಬಂದಲ್ಲಿ ಹೆಚ್ಚಿನ ತಪಾಸಣೆಗೆ ಹತ್ತಿರದ ದೃಷ್ಟಿ ಕೇಂದ್ರಗಳಿಗೆ ಕಳಿಸುವುದು, ಅಗತ್ಯ ಚಿಕಿತ್ಸೆಗೆ ನೆರವು ಮಾಡಿ ಕೊಡುವುದು ಯೋಜನೆಯ ಭಾಗವಾಗಿದೆ ಎಂದು ಹೇಳಿದರು.
ಸರಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಟ್ಟು 1470 ಕನ್ನಡಕಗಳು ಬಂದಿರುತ್ತವೆ. ಇದರಲ್ಲಿ1092 ಫಲಾನುಭವಿಗಳಿಗೆ ಕನ್ನಡಕವನ್ನು ವಿತರಣೆ ಮಾಡಿದ್ದೇವೆ. ಇನ್ನುಳಿದ 378 ಕನ್ನಡಕಗಳನ್ನು ವಿತರಣೆ ಮಾಡುತ್ತೇವೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ ‘ ನಮ್ಮ ತಾಲೂಕಿನಲ್ಲಿ ಈ ರೀತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷಕರವಾದ ವಿಷಯ. ಸರಗೂರು ಪಟ್ಟಣದ ಜನರು ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ ಮತ್ತು ಕನ್ನಡವನ್ನು ಪಡೆದುಕೊಳ್ಳಿ ‘ ಎಂದು ತಿಳಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಉತ್ತಮ ಆರೋಗ್ಯಕ್ಕೆ ಉಳಿದಿರುವ ದಾರಿ ಒಂದೇ; ಅದುವೇ ರಾಸಾಯನಿಕ ಮುಕ್ತ ಕೃಷಿ
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವೀರೇಶ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಭಾಗ್ಯಲಕ್ಷ್ಮಿ, ವೈದ್ಯಾಧಿಕಾರಿ ಡಾ. ಸುಜಾತ, ನೇತ್ರಾಧಿಕಾರಿ ಗಿರೀಶ್, ಕಚೇರಿ ಅಧೀಕ್ಷಕ ವಿಜಯ ರಾಘವ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪಾರ್ಥಸಾರಥಿ, ಕಚೇರಿಯ ಸಿಬ್ಬಂದಿ ವರ್ಗದವರಾದ ರವಿರಾಜ್, ಅರ್ಚನಾ, ರೇಖಾ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರಾದ ಹರೀಶ್ ನಿಲವಾಗಿಲು, ಜಗದೀಶ್, ಹರೀಶ್, ಮಹೇಶ್, ಪುಷ್ಪ, ಶಾಂತಿ, ಮಹಾದೇವ, ಮಹದೇವಸ್ವಾಮಿ, ಚಂದ್ರು ಸೇರಿದಂತೆ ಇನ್ನಿತರರು ಇದ್ದರು.