ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುವುದರಿಂದ ಉಂಟಾಗುವ ಬಿಕ್ಕಟ್ಟುಗಳೇನು ಬಲ್ಲಿರಾ?

Date:

Advertisements
ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ರೂಪಾಂತರಿಸುವ ಪ್ರಕ್ರಿಯೆಯು ಜನಸಾಮಾನ್ಯರು, ಹಿರಿಯ ನಾಗರಿಕರು ಹಾಗೂ ಮಹಿಳೆಯರನ್ನು ಯಾವ ರೀತಿಯ ಬಿಕ್ಕಟ್ಟುಗಳಿಗೆ ತಳ್ಳಿದೆ ಎನ್ನುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ದೇವನಹಳ್ಳಿ ಭೂ ಸ್ವಾಧೀನ ವಿರುದ್ಧ ರೈತರ ಹೋರಾಟದ ಹಿನ್ನೆಲೆಯಲ್ಲಿ ಇದು ಇನ್ನಷ್ಟು ಸ್ಪಷ್ಟತೆ ನೀಡಬಹುದು...

ಈ ಬರಹದ ಆಶಯ ಸಮಕಾಲೀನ ಅಭಿವೃದ್ಧಿ ಪ್ರಕ್ರಿಯೆಗಳು ಮಾರುಕಟ್ಟೆ-ಸ್ಪರ್ಧೆ-ಹಣಕಾಸು ಬಂಡವಾಳದ ಹೆಸರಿನಲ್ಲಿ ಕೃಷಿ ಭೂಮಿಯನ್ನು ಮತ್ತು ಕೃಷಿ ಆರ್ಥಿಕತೆಯನ್ನು ಹಣಕಾಸು ಮಾರುಕಟ್ಟೆಯು ಹೇಗೆ ರೂಪಾಂತರಿಸುತ್ತದೆ? ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ತಳ/ಸ್ಥಳೀಯ ಮಟ್ಟದಲ್ಲಿ ಉಂಟಾಗಿರುವ ಸಾಮಾಜಿಕ ಬಿಕ್ಕಟ್ಟುಗಳು ಯಾವುವು? ಅವುಗಳ ರೂಪ ಯಾವ ಯಾವ ಆಯಾಮಗಳಲ್ಲಿದೆ? ಹಣಕಾಸೀಕರಣಕ್ಕೂ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಇರುವ ಸಂಬಂಧ ಯಾವ ಬಗೆಯದ್ದು? ಹೀಗೆ ಇನ್ನೂ ಮುಂತಾದ ಪ್ರಶ್ನೆಗಳನ್ನು ಅಭಿವೃದ್ಧಿ ಸಮಾಜಶಾಸ್ತ್ರದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳುವುದಾಗಿದೆ.

ಅಧ್ಯಯನದ ಅನುಕೂಲಕ್ಕೆ ಇದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಭಾಗ-1ರಲ್ಲಿ ವಿವಿಧ ಅಭಿವೃದ್ಧಿ ಹೆಸರಿನಲ್ಲಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎನ್ನುವುದನ್ನು ವಿವರಿಸಲಾಗಿದೆ. ಭಾಗ-2ರಲ್ಲಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ರೂಪಾಂತರಿಸುವ ಪ್ರಕ್ರಿಯೆಯು ಜನಸಾಮಾನ್ಯರು, ಹಿರಿಯ ನಾಗರಿಕರು ಹಾಗೂ ಮಹಿಳೆಯರನ್ನು ಯಾವ ರೀತಿಯ ಬಿಕ್ಕಟ್ಟುಗಳಿಗೆ ತಳ್ಳಿದೆ ಎನ್ನುವುದನ್ನು ವಿಶ್ಲೇಷಿಸಲಾಗಿದೆ. ಭಾಗ-3ರಲ್ಲಿ ಹಣಕಾಸು ಬಂಡವಾಳವು ಕಪ್ಪು ಆರ್ಥಿಕ ಚಟುವಟಿಕೆಯ ಮೂಲಕ ಉತ್ಪಾದನೆಯಾಗುವ ಕಪ್ಪು ಸಂಪತ್ತು ಕೃಷಿ ಭೂಮಿಯನ್ನು ತನ್ನ ತೆಕ್ಕೆಗೆ ಹೇಗೆ ತೆಗೆದುಕೊಳ್ಳುತ್ತಿದೆ ಎನ್ನುವುದನ್ನು ವಿಶ್ಲೇಷಿಸಲಾಗಿದೆ. ಭಾಗ-4ರಲ್ಲಿ ಪ್ರಸ್ತುತ ಅಧ್ಯಯನವು ಕಂಡುಕೊಂಡ ಕೆಲವು ತಾತ್ಕಾಲಿಕ ತೀರ್ಮಾನಗಳನ್ನು ವಿಶ್ಲೇಷಿಸಲಾಗಿದೆ. ಕೃತಿಯ ಹಣಕಾಸು ಮಾರುಕಟ್ಟೆ: ಭೂಮಿ ಮತ್ತು ರಿಯಲ್ ಎಸ್ಟೇಟ್ಸ್ ಅಧ್ಯಾಯದ ಆಯ್ದ ಭಾಗವನ್ನಿಲ್ಲಿ ನೀಡಲಾಗಿದೆ.

ತಳಮಟ್ಟದ ಬಿಕ್ಕಟ್ಟುಗಳು:

Advertisements

ಕೃಷಿ ಭೂಮಿಯನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಲಾಗಿರುವುದನ್ನು ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ನಮ್ಮ ಹಳ್ಳಿಗರು ಮತ್ತು ಕೃಷಿ ಭೂಮಿಯ ಮೇಲೆ ವಿದೇಶಿ ನೇರ ಬಂಡವಾಳದ (ಎಫ್.ಡಿ.ಐ) ಹೂಡಿಕೆಗೆ ಮುಕ್ತ ಮಾರುಕಟ್ಟೆಗೆ ತೆರೆಯುವ ‘ಅಭಿವೃದ್ಧಿ ನೀತಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಥಮ ಆದ್ಯತೆಯಾಗಿದೆ ಎನ್ನುವುದು ಮೇಲಿನ ಚರ್ಚೆ ಮತ್ತು ಮಾಹಿತಿಯಿಂದ ಸ್ಪಷ್ಟವಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಭೂಮಿ ಖಾಸಗಿ ಹಾಗೂ ಕಾರ್ಪೊರೇಟೀಕರಣ ಪ್ರಕ್ರಿಯೆಗೆ ಒಳಪಟ್ಟಾಗ ಉಂಟಾಗುವ ಹಲವು ಬಿಕ್ಕಟ್ಟುಗಳನ್ನು ಸ್ಥಳೀಯ ಜನರು ಎದುರಿಸುತ್ತಿರುವುದು ನಮ್ಮ ಕಣ್ಣ ಮುಂದೆ ಇವೆ. ಅದರಲ್ಲಿ ಬಳ್ಳಾರಿ ಜಿಲ್ಲೆಯ ಅನುಭವವನ್ನು ಮಾತ್ರ ಇಲ್ಲಿ ವಿಶ್ಲೇಷಿಸಲು ಪ್ರಯತ್ನ ಮಾಡಲಾಗಿದೆ.

ಇದನ್ನು ಓದಿದ್ದೀರಾ?: ಮೋದಿ ಮತ್ತು ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ವ್ಯತ್ಯಾಸವಿಲ್ಲ: ಬಡಗಲಪುರ ನಾಗೇಂದ್ರ ವಾಗ್ದಾಳಿ

ಬಳ್ಳಾರಿ ಜಿಲ್ಲೆಯು ಗಣಿಗಾರಿಕೆಯಿಂದಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡಿದೆ. ಈ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ, ವಿಮಾನ ನಿಲ್ದಾಣ ಇತ್ಯಾದಿಗಳಿಗೆ ಸುಮಾರು 20 ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದೆ. ಹೀಗೆ ಕೃಷಿ ಭೂಮಿ ವಶಪಡಿಸಿಕೊಳ್ಳುವಾಗ ಚೌಕಾಶಿಯು ಕೊಳ್ಳುವವರು-ಸ್ಥಳೀಯರು-ಆಳುವ ವರ್ಗ ಮತ್ತು ಆಡಳಿತಶಾಹಿಗಳ ನಡುವೆ ನಡೆಯುತ್ತದೆ. ಈ ಪ್ರಕ್ರಿಯೆ ನಡೆಯುವಾಗಲೇ ಹಳ್ಳಿಗಳ ಹಿರಿಯರು, ಮಧ್ಯಮ ವಯಸ್ಸಿನವರು ಮತ್ತು ಮಹಿಳೆಯರು ತಮ್ಮ ಭೂಮಿಯನ್ನು ಎಷ್ಟೇ ಹಣ ನೀಡಿದರೂ ಕೊಡುವುದಿಲ್ಲ ಎನ್ನುವ ನಿರ್ಧಾರ ಮಾಡುತ್ತಾರೆ.

ಆದರೆ ಹೊಸ ತಲೆಮಾರಿನ ಯುವಕರು ಇದಕ್ಕೆ ವಿರುದ್ಧವಾಗಿ, ಮುಂದಿನ ದಿನಗಳಲ್ಲಿ ಕೃಷಿ ಮಾಡುವುದು ಕಷ್ಟ. ಇನ್ನೂ ಹೆಚ್ಚಿನ ಬೆಲೆಯನ್ನು ನೀಡುವಂತೆ ಒತ್ತಾಯ ಮಾಡಿ ಭೂಮಿ ನೀಡುವುದು ಖಚಿತ. “ಬಂದ ಹಣದಲ್ಲಿ ರಿಯಲ್ ಎಸ್ಟೇಟ್, ಗಣಿ, ಸಾರಿಗೆ ಇತ್ಯಾದಿ ಯಾವುದಾದರೂ ಒಂದು ವ್ಯವಹಾರ ಮಾಡಿದರೆ, ಹತ್ತು ವರ್ಷ ಕೃಷಿಯಲ್ಲಿ ದುಡಿಯುವುದನ್ನು ಒಂದೇ ವರ್ಷದಲ್ಲಿ ದುಡಿಯಬಹುದು” ಎಂದು ಸಿರವಾರ ಹಳ್ಳಿಯ ಯುವಕರು ಹೇಳುತ್ತಾರೆ. ಇದಕ್ಕೆ ಅಲ್ಲಿನ ಹಿರಿಯರ ಸಂಪೂರ್ಣ ಒಪ್ಪಿಗೆ ಇಲ್ಲ. ಯಾಕೆಂದು ಹಿರಿಯರನ್ನು ಮತ್ತು ಮಹಿಳೆಯರನ್ನು ಪ್ರಶ್ನೆ ಮಾಡಿದರೆ, ನಾವು ಹುಟ್ಟಿ ಬೆಳೆದ ಭೂಮಿ, ನಮ್ಮ ಹಿರಿಯರು ಬದುಕಿದ್ದು ಇಲ್ಲೇ. ಇದನ್ನು ಹೇಗೆ ಬಿಡುವುದು? ಎಂದು ಮರುಪ್ರಶ್ನೆ ಮಾಡಿ, ಮಾತು ಮುಂದುವರಿಸುತ್ತಾರೆ. “ಗಣಿಗಾರಿಕೆ ಬಂದ ನಂತರ ನಮ್ಮ ಹಳ್ಳಿಗಳಲ್ಲಿ ನಾವು ನಿದ್ದೆ ಮಾಡಲಾಗದ ಸ್ಥಿತಿ ತಲುಪಿದ್ದೇವೆ. ಗಣಿ ಮಾಫಿಯಾ ನಮ್ಮ ಹಳ್ಳಿಗಳ ಯುವಕರನ್ನು ಗಣಿದಂಧೆಗೆ ಬಳಸಿಕೊಂಡು ಅವರಿಗೆ ಬ್ರಾಂಡಿ, ವಿಸ್ಕಿ, ಇತರೆ (ಬಾಯಿಯಲ್ಲಿ ಹೇಳಲಾಗದ) ರುಚಿ ತೋರಿಸಿ ನಮ್ಮ ಮಕ್ಕಳನ್ನು ಹಾಳು ಮಾಡಿದೆ. ಅವರಿಗೆ ಅವರ ತಂದೆ-ತಾಯಿ, ಹೆಂಡತಿ ಮಕ್ಕಳು ಬೇಡವಾಗಿದ್ದಾರೆ. ಕುಡಿತ ಇಂದು ಚಟವಾಗಿದೆ. ಈ ಪರಿಯ ಕುಡಿತ ಮೊದಲು ನಮ್ಮ ಹಳ್ಳಿಗಳಲ್ಲಿ ಇರಲಿಲ್ಲ.” “ಸಂಜೆ 7ರ ನಂತರ ನಮ್ಮ ಹೆಣ್ಣು ಮಕ್ಕಳು (ಸೊಸೆಯರು-ಹೆಣ್ಣು ಮಕ್ಕಳು) ಮತ್ತು ಮಹಿಳೆಯರು ಮನೆಯಿಂದ ಹೊರಗೆ ಕಾಲಿಡಲಾಗದ ಸ್ಥಿತಿ ನಿರ್ಮಾಣವಾಗಿದೆ”. ನೈತಿಕವಾಗಿ ಸರಿಯಲ್ಲದ ದಾರಿಯಲ್ಲಿ ಸರಳವಾಗಿ ಹರಿದಾಡುತ್ತಿರುವ ಹಣವು “ನಮ್ಮ ಹೆಣ್ಣು ಮಕ್ಕಳನ್ನು ಬಹಳ ಕೇವಲವಾಗಿಸಿ, ಬಳಕೆಯ ವಸ್ತುವಂತೆ ನೋಡುತ್ತಿದೆ… ನಮ್ಮ ಸಾಮಾಜಿಕ-ಸಾಂಸ್ಕೃತಿಕ-ರಕ್ತ ಸಂಬಂಧಗಳು ಸೇರಿದಂತೆ ಎಲ್ಲವನ್ನು ಹಣ ಧ್ವಂಸ ಮಾಡಿದೆ,” ಎನ್ನುವುದು ಸುಮಾರು 62 ವರ್ಷ ವಯಸ್ಸಿನ ಹಿರಿಯರ ಅಳಲು.

ಬಳ್ಳಾರಿ ಗಣಿಗಾರಿಕೆ 1

ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಕೃಷಿ ಭೂಮಿ ವಶಪಡಿಸಿಕೊಳ್ಳುವ ಕುರಿತು ನಮ್ಮ ಒಂದಿಂಚು ಭೂಮಿಯನ್ನು ನೀಡುವುದಿಲ್ಲ ಎನ್ನುವ ನಿರ್ಧಾರವನ್ನು ಚಾಗನೂರು ಗ್ರಾಮಸಭೆಯಲ್ಲಿ ಸ್ಥಳೀಯ ಜನರು ಮಾತನಾಡುತ್ತಾರೆ. ಕೆಲವು ದಿನಗಳ ನಂತರ ಅದೇ ಗ್ರಾಮದಲ್ಲಿ ಮತ್ತೊಂದು ಗ್ರಾಮಸಭೆ ನಡೆಯುತ್ತದೆ. ಆ ಸಭೆಯಲ್ಲಿ ಹಳ್ಳಿಯ ಹಿರಿಯರು ಭೂಮಿ ನೀಡುವುದಿಲ್ಲ ಎಂದು ಸಭೆಯಲ್ಲಿ ಹೇಳಲು ಪ್ರಾರಂಭಿಸಿದ ತಕ್ಷಣವೇ, ಮದ್ಯಪಾನ ಮಾಡಿದ ಕೆಲವು ಯುವಕರು ಹಿರಿಯರ ಮೇಲೆ ಮುಗಿಬಿದ್ದು, ನಾವು ಭೂಮಿ ನೀಡುತ್ತೇವೆ ಎಂದು ಹೇಳುತ್ತಾರೆ. ಆಗ ಅಲ್ಲಿ ಹಿರಿಯ ಮತ್ತು ಕಿರಿಯ ತಲೆಮಾರುಗಳ ನಡುವೆ ಗದ್ದಲ-ಗಲಾಟೆ ನಡೆಯುತ್ತದೆ. ಇದೇ ಸಮಯವನ್ನು ಬಳಸಿಕೊಂಡ ಬಂಡವಾಳಶಾಹಿ ಪರವಾದ ಆಡಳಿತಶಾಹಿ ವರ್ಗ, ಭೂಮಿ ನೀಡುವುದಾಗಿ ಜನರು ಗ್ರಾಮಸಭೆಯಲ್ಲಿ ತಿಳಿಸಿದ್ದರು ಎಂದು ದಾಖಲಿಸುತ್ತದೆ. ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ.

ಇದನ್ನು ಓದಿದ್ದೀರಾ?: ದೇವನಹಳ್ಳಿ ರೈತ ಹೋರಾಟ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮೇಧಾ ಪಾಟ್ಕರ್‌

ಹೀಗೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯ ಹಿಂದೆ ಕಾಣದ ಕೈಗಳಂತೆ ಸ್ಥಳೀಯ ರಾಜಕಾರಣಿಗಳು, ರಾಜಕೀಯ ಪುಢಾರಿಗಳು ಮತ್ತು ರಾಷ್ಟ್ರೀಯ ಬಂಡವಾಳಶಾಹಿಗಳು ಕೆಲಸ ಮಾಡಿದ್ದಾರೆ. ಈ ಘಟನೆ ಕೇವಲ ಒಂದು ಪುಟ್ಟ ಪ್ರಕರಣ ಮಾತ್ರವಲ್ಲ. ‘ಅಭಿವೃದ್ಧಿ’ ಹೆಸರಿನಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ದಿಕ್ಕಿನಲ್ಲಿ ಹೆಚ್ಚು ಪ್ರಕ್ರಿಯೆಗಳು ನಡೆಯುತ್ತಿರುವ ಎಲ್ಲಾ ಹಳ್ಳಿಗಳು, ಪಟ್ಟಣಗಳು, ನಗರಗಳ ಸುತ್ತಮುತ್ತ ಬಹುತೇಕ ಹಿರಿಯರು, ಮಹಿಳೆಯರು ಮತ್ತು ಹೆಣ್ಣು ಮಕ್ಕಳು, ಮಕ್ಕಳು ಎದುರಿಸುತ್ತಿರುವ ಸಾಮಾಜಿಕ ಸಂಘರ್ಷಗಳ ವಿರಾಟ್ ಸ್ವರೂಪವಿದು.

ಒಂದೇ ವಾಕ್ಯದಲ್ಲಿ ಹೇಳುವುದಾದರೆ ಈಸ್ಟ್ ಇಂಡಿಯಾ ಕಂಪನಿಯ ಒಡೆದು ಆಳುವ ನೀತಿಯನ್ನು ರೂಪಾಂತರಿಸಿದ ಮುಕ್ತ ಮಾರುಕಟ್ಟೆಯು ತನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಂಡು ಬೇಡವಾದದ್ದನ್ನು ಗಣಿಗಳಲ್ಲಿ ಡೋಜರ್ ಅನುಪಯುಕ್ತ ಮಣ್ಣನ್ನು ತಳ್ಳುವಂತೆ ತಳ್ಳಿಹಾಕುತ್ತಿದೆ. ಇಂತಹ ಅಭಿವೃದ್ಧಿ ಪ್ರಕ್ರಿಯೆಗಳು ಮಹಿಳೆಯರು ಮತ್ತು ಅಸಹಾಯಕರನ್ನು ಹೊರಹಾಕುವುದಲ್ಲದೆ, ಪುಕ್ಕಟೆಯಾಗಿ ಅವರನ್ನು ಬಳಸುವುದು ಮಾತ್ರವಲ್ಲದೆ, ಅವರ ಭೂಮಿ ಸೇರಿದಂತೆ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ.

ಪರಿಣಾಮವಾಗಿ 2001-2011ರ ಅವಧಿಯಲ್ಲಿ ಸಾಗುವಳಿದಾರರ ಸಂಖ್ಯೆ 127.3 ಮಿಲಿಯನ್‌ನಿಂದ 118.6 ಮಿಲಿಯನ್‌ಗೆ ಇಳಿದಿದೆ. ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 59ರಷ್ಟು ಪುರುಷರು ಮತ್ತು ಶೇಕಡಾ 75ರಷ್ಟು ಮಹಿಳೆಯರು ಜೀವನೋಪಾಯಕ್ಕೆ ಕೃಷಿಯನ್ನು ನೇರವಾಗಿ ಅವಲಂಬಿಸಿದ್ದಾರೆ. ಕಳೆದ ಮೂರು ಜನಗಣತಿ(1991-2011) ಅವಧಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ಸಂಖ್ಯೆ(ಶೇಕಡಾ 26ರಿಂದ ಶೇಕಡಾ 30) ಹೆಚ್ಚಾಗಿದೆ. ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸವೆತ, ಆಹಾರ ಪದಾರ್ಥಗಳ ಬೆಲೆಯ ಹೆಚ್ಚಳವು ಅಪೌಷ್ಟಿಕ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹಳ್ಳಿಗಳಲ್ಲಿ ಗಣನೀಯವಾಗಿ ಹೆಚ್ಚಲು ಕಾರಣವಾಗಿದೆ. ಕೃಷಿ ಕೂಲಿಯು 1980ರಲ್ಲಿ ಶೇಕಡಾ 5 ಪ್ರಮಾಣದಲ್ಲಿ ಹೆಚ್ಚಳ ಕಂಡರೆ, 1990ರಲ್ಲಿ ಶೇಕಡಾ 2ರಷ್ಟು ಬೆಳವಣಿಗೆ ಸಾಧಿಸಿ, 2000ರ ಮೊದಲ ಅರ್ಧದಲ್ಲಿ ಶೂನ್ಯವಾಗಿದೆ. 2011ರ ಸಾಮಾಜಿಕ-ಆರ್ಥಿಕ ಜಾತಿಗಣತಿ(ಎಸ್.ಐ.ಸಿ.ಸಿ.)ಯು ಗ್ರಾಮೀಣ ಪ್ರದೇಶದಲ್ಲಿ ಇರುವ ಶೇಕಡಾ 49ರಷ್ಟು ಕುಟುಂಬಗಳು ಬಡತನದಲ್ಲಿವೆ. ಶೇಕಡಾ 51ರಷ್ಟು ಕುಟುಂಬಗಳು ಬದುಕಿಗೆ ಪ್ರತಿದಿನವೂ ಕೂಲಿ ಕೆಲಸವನ್ನು ಅವಲಂಬಿಸಿವೆ, ಶೇಕಡಾ 30ರಷ್ಟು ಕುಟುಂಬಗಳು ಭೂಮಾಲೀಕತ್ವವನ್ನು ಹೊಂದಿಲ್ಲ. ಹಳ್ಳಿಗಳಲ್ಲಿ ಇರುವ ಶೇಕಡಾ 77ರಷ್ಟು ಕುಟುಂಬಗಳು ಪ್ರತಿದಿನ ದುಡಿಮೆಗಾಗಿ 5 ಕಿ.ಮೀ ಪ್ರಯಾಣ ಮಾಡಲೇಬೇಕಾಗಿದೆ ಎನ್ನುವ ಆಘಾತಕಾರಿ ಮಾಹಿತಿಗಳನ್ನು ನೀಡಿದೆ.

ಎಸ್.ಇ.ಜಡ್ ಅಭಿವೃದ್ಧಿಯಿಂದ ಕೃಷಿ ಭೂಮಿಯಲ್ಲಿ ಅಸಮಾನತೆ, ನ್ಯಾಯ ಸಮ್ಮತವಲ್ಲದ ರೋಗಗ್ರಸ್ಥ ಸ್ಥಿತಿ ಸೃಷ್ಟಿಯಾಗಿದೆ. ಎಸ್.ಇ.ಜಡ್ ಅಭಿವೃದ್ಧಿಗಾಗಿ ನಡೆಯುತ್ತಿರುವ ಭೂ-ಸ್ವಾಧೀನ ಪ್ರಕ್ರಿಯೆಯು ರಿಯಲ್ ಎಸ್ಟೇಟ್ಸ್ ಮಾಫಿಯಾದ ಮುಂದಾಳತ್ವದಲ್ಲಿ ನಡೆಯುತ್ತಿರುವುದನ್ನು ಈ ಮೇಲಿನ ಚರ್ಚೆ ನಮಗೆ ತಿಳಿಸುತ್ತದೆ. ಇಂಡಿಯಾದಲ್ಲಿ ಬೃಹತ್ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ 60-65 ಮಿಲಿಯನ್ ಸ್ಥಳೀಯ ಜನರು ಅಭಿವೃದ್ಧಿ ಹೆಸರಿನಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ ನಿರ್ದಿಷ್ಟವಾಗಿ ಎಸ್.ಇ.ಜಡ್ ಯೋಜನೆಯಿಂದ 1,14,000 ಕೃಷಿ ಕುಟುಂಬಗಳು (ಸರಾಸರಿ ಐದು ಸದಸ್ಯರು ಇರುವ ಕುಟುಂಬಗಳು), ಜೊತೆಗೆ ಜೀವನ ನಿರ್ವಹಣೆಗೆ ಕೃಷಿ ದುಡಿಮೆಯನ್ನೇ ನೇರವಾಗಿ ಅವಲಂಬಿಸಿದ ಭೂ-ರಹಿತ ಕೃಷಿ ಕಾರ್ಮಿಕರ 82,000 ಕುಟುಂಬಗಳು ಸ್ಥಳಾಂತರಗೊಂಡಿವೆ. ಇದರ ನಷ್ಟವನ್ನು ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ಕೆಲವು ತಜ್ಞರ ಮೂಲಕ ಮಾಡಿಸಿದೆ. ಅದರ ಪ್ರಕಾರ ಪ್ರತಿ ವರ್ಷಕ್ಕೆ ರೂ. 212 ಕೋಟಿ ನಷ್ಟ ಉಂಟಾಗುತ್ತಿದೆ. ಇದು ಸ್ಥಳೀಯ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ನೇರವಾದ ಮತ್ತು ಬಹಳ ಗಂಭೀರವಾದ ಪರಿಣಾಮವನ್ನು ಉಂಟುಮಾಡಿದೆ. ಸ್ಥಳಾಂತರಗೊಂಡ ಜನರಿಗೆ ಮಾನವೀಯ ನೆಲೆಯಲ್ಲಿ ಪುನರ್ ವಸತಿ/ನೆಲೆಯನ್ನು ಒದಗಿಸಲಾಗುವುದು ಎಂದು ಸರ್ಕಾರಗಳು ಹೇಳುತ್ತಿವೆ. ಆದರೆ, ಪುನರ್‌ವಸತಿ ಕುರಿತ ನಮ್ಮ ಚಾರಿತ್ರಿಕ ದಾಖಲೆಗಳು ಯಾವುದೇ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸುವುದಿಲ್ಲ. 1950ರಿಂದ ಬೃಹತ್ ಅಭಿವೃದ್ಧಿ ಯೋಜನೆಗಳಿಂದ ನೆಲೆ ಕಳೆದುಕೊಂಡವರಲ್ಲಿ ಇಂದಿಗೂ ಶೇಕಡಾ 75ರಷ್ಟು ಜನರು ಪುನರ್‌ನೆಲೆ/ವಸತಿಗಾಗಿ ಕಾಯುತ್ತಿದ್ದಾರೆ.

ನಮ್ಮ ದೇಶದಲ್ಲಿ ಇರುವ ಒಟ್ಟು ಕೃಷಿ ಭೂಮಿಯಲ್ಲಿ ಶೇಕಡಾ 17ರಷ್ಟು ಕೃಷಿ ಭೂಮಿಯನ್ನು ಶೇಕಡಾ 80ರಷ್ಟು ಕೃಷಿಕರು ಹೊಂದಿದ್ದಾರೆ. ಇದರ ಅರ್ಥವಿಷ್ಟೆ, ನಮ್ಮ ಅಭಿವೃದ್ಧಿ ಯೋಜನೆಗಳು ನಮ್ಮ ರೈತರನ್ನು ಸ್ವಲ್ಪ-ಹೆಚ್ಚು ಕಡಿಮೆ ಭೂ- ರಹಿತ ಕೃಷಿಕರನ್ನಾಗಿಸುತ್ತಿವೆ. ಇವರು ಅತಿ ಸಣ್ಣ ಪ್ರಮಾಣದ ಭೂಮಿಯ ಮಾಲೀಕರು, ಇಲ್ಲ ಯಾವುದೇ ಕೃಷಿ ಮಾಡಲಾಗದ ಸ್ಥಿತಿ ಇದೆ. ಇಂತಹ ಹಲವು ಕಾರಣಗಳಿಂದ ಕಳೆದ 20 ವರ್ಷಗಳಿಂದ ಇಂಡಿಯಾದಲ್ಲಿ ಸರಾಸರಿ ಪ್ರತಿದಿನ 2035 ಪ್ರಮುಖ ಕೃಷಿ ಕುಟುಂಬಗಳು (Main cultivator) ವ್ಯವಸಾಯದಿಂದ ಮುಕ್ತಿ ಪಡೆಯುತ್ತಿದ್ದಾರೆ. ಉದ್ಯೋಗ ಅವಕಾಶದ ಸೃಷ್ಟಿಯಲ್ಲಿ ನೆಲಕಚ್ಚಿರುವ ನಮ್ಮ ಅಭಿವೃದ್ಧಿ ಮಾದರಿಯಲ್ಲಿ, ಕೃಷಿಯಿಂದ ವಿಮುಕ್ತಿ ಪಡೆದವರು ಜೀವನ ನಿರ್ವಹಣೆಗೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಅತ್ಯಂತ ಕನಿಷ್ಠ ವೇತನಕ್ಕೆ, ಹೆಚ್ಚು ಸಮಯ ಮತ್ತು ಶ್ರಮ ಆಧಾರಿತ ಸೇವಾ ಕ್ಷೇತ್ರವನ್ನು (ಹೋಟೆಲ್, ಆಸ್ಪತ್ರೆಗಳಲ್ಲಿ ಸ್ವಚ್ಛತಾ ಕೆಲಸ, ವಾಚ್‌ಮನ್ ಕೆಲಸ ಇತ್ಯಾದಿ) ಬದುಕಿಗೆ ಅವಲಂಬಿಸುವಂತಾಗಿದೆ.

ಇದನ್ನು ಓದಿದ್ದೀರಾ?: ಸರ್ಕಾರ ಬೇರೆ ಕಡೆ ಬಿಜಿನೆಸ್‌ ಮಾಡಲಿ, ರೈತರ ಭೂಮಿ ಕಸಿಯುವ ಅಧಿಕಾರ ಯಾರಿಗೂ ಇಲ್ಲ: ರಾಕೇಶ್‌ ಟಿಕಾಯತ್‌

ಇಷ್ಟಾದರೂ ಜಾಗತಿಕ ಹಣಕಾಸು ಬಂಡವಾಳಶಾಹಿ ವರ್ಗ ತನಗೆ ಬೇಕಾದಂತೆ ‘ಅಭಿವೃದ್ಧಿ’ಯನ್ನು ಪರಿಭಾವಿಸಿಕೊಳ್ಳುತ್ತಲೇ ಇದೆ. ಇದನ್ನು ಹಲವು ಕಾನೂನು ಬಾಹಿರ ಚಟುವಟಿಕೆಗಳ ಮೂಲಕವೇ ಸಂಪಾದಿಸಿದ ಕಪ್ಪು ಆದಾಯ ಮತ್ತು ಕಪ್ಪು ಸಂಪತ್ತು ಕಾನೂನಿನ ಸಹಕಾರ ಮತ್ತು ತೆರಿಗೆ ವಿನಾಯಿತಿಗಳನ್ನು ಪಡೆಯುವ ಮೂಲಕವೇ ನಡೆಸುತ್ತಿದೆ. ಅಂದರೆ ಕಪ್ಪು ಆರ್ಥಿಕ ಚಟುವಟಿಕೆಗಳಿಂದ ಉತ್ಪಾದನೆಯಾಗುವ ಕಪ್ಪು ಸಂಪತ್ತು ಮತ್ತು ಕಪ್ಪು ಆದಾಯವು ಇಂಡಿಯಾದ ರಿಯಲ್ ಎಸ್ಟೇಟ್ಸ್ ವ್ಯವಹಾರದಲ್ಲಿ ತೊಡಗಿಸಲಾಗುತ್ತಿದೆ.

(‘ಅಭಿವೃದ್ಧಿಯ ಅನುಭವಗಳು’, ಲೇ: ಡಾ.ಹೆಚ್.ಡಿ. ಪ್ರಶಾಂತ್, ಪ್ರ: ಕನ್ನಡ ವಿಶ್ವವಿದ್ಯಾಲಯ, ಹಂಪಿ, ಸಂ: 70228 52677)

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X