- ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಮಾರ್ವೇಶ್‌ನಿಗೆ ಮನಬಂದಂತೆ ಥಳಿಸಿ ಹಲ್ಲೆ ಮಾಡಿದ್ದ ಆರೋಪಿಗಳು
ಬೆಂಗಳೂರಿನ ಪೆಲ್ಲೋಟಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗೆಳೆಯನ ಪ್ರೀತಿಗೆ ಅಮಾಯಕ ಮಾರ್ವೇಶ್ ಬಲಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ತಿಕ್, ಅಭಿಷೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರೀಕಾಂತ್ ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾರ್ವೇಶ್ ಬೆಂಗಳೂರಿನ ಬಾಣಸವಾಡಿ ಸಮೀಪದ ವಿನ್ಸೆಂಟ್ ಪೆಲ್ಲೋಟಿ ಕಾಲೇಜಿನಲ್ಲಿ ಬಿಕಾಂ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಈತನ ಸ್ನೇಹಿತ ಕಾಲೇಜಿನಲ್ಲಿ ಓರ್ವ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಆದರೆ, ಹುಡುಗಿ ಈತನ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ಯುವತಿ ಬೇರೊಂದು ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು.
ಆದರೂ ಬಿಡದ ಮಾರ್ವೇಶ್ ಸ್ನೇಹಿತ ಯುವತಿಗೆ ಪ್ರೀತಿಸುವಂತೆ ಸತಾಯಿಸುತ್ತಿದ್ದನು. ಅಲ್ಲದೇ ಆಕೆಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಕಳುಹಿಸುತ್ತಿದ್ದನು. ಯುವತಿ ತನ್ನ ಪ್ರಿಯಕರನಿಗೆ ಈ ಬಗ್ಗೆ ಹೇಳಿಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಯುವತಿಯ ಪ್ರಿಯಕರ ಮಾರ್ವೇಶ್‌ನ ಸ್ನೇಹಿತನಿಗೆ ಕರೆ ಮಾಡಿದ್ದಾನೆ. ಆತ ಕರೆ ಸ್ವೀಕರಿಸದ ಕಾರಣ ಮಾರ್ವೇಶ್‌ನಿಗೆ ಕರೆ ಮಾಡಿ ಮಾತಾಡಿದ್ದಾನೆ.
ಮಾರ್ವೇಶ್‌ನನ್ನು ಜುಲೈ 26ರಂದು ಹುಡುಗಿಯ ಪ್ರಿಯಕರ ಹಾಗೂ ಆತನ ಸಹಚರರು ರೂಮ್ವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಾರ್ವೇಶ್‌ನಿಗೆ ಸ್ನೇಹಿತನಿಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಎಷ್ಟೇ ಕರೆ ಮಾಡಿದರೂ ಆತ ಉತ್ತರಿಸಿದ ಕಾರಣ ಕೋಪಗೊಂಡ ಹುಡುಗಿಯ ಪ್ರಿಯಕರ ಹಾಗೂ ಸಹಚರರು ಮಾರ್ವೇಶ್‌ನಿಗೆ ಮನಬಂದಂತೆ ಥಳಿಸಿ ಹಲ್ಲೆ ಮಾಡಿದ್ದಾರೆ.
ಬಳಿಕ ಆರೋಪಿಗಳು ಮಾರ್ವೇಶ್‌ನನ್ನು ಆತನ ಸ್ನೇಹಿತ ಸುನೀಲ್ ಎಂಬಾತನಿಗೆ ಒಪ್ಪಿಸಿದ್ದಾರೆ. ಈ ಘಟನೆ ನಂತರ ಮಾರ್ವೇಶ್ ವಾಂತಿ ಮಾಡಿಕೊಂಡಿದ್ದನು. ಹಾಗಾಗಿ, ಸುನೀಲ್ ಮತ್ತು ಇನ್ನಿತರ ಸ್ನೇಹಿತರು ಮಾರ್ವೇಶ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಅಷ್ಟರಾಗಲೇ ಮಾರ್ವೇಶ್ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಿಎಂಟಿಸಿ | ಎಲೆಕ್ಟ್ರಿಕ್ ಪ್ರೊಟೊಟೈಪ್ ಬಸ್‌ಗೆ ಚಾಲನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ
“ಎರಡು ದಿನದ ಹಿಂದೆ ಮಾರ್ವೇಶ್ ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರು 20 ರಿಂದ 21 ವರ್ಷದ ಯುವಕರಾಗಿದ್ದು, ಇವರಲ್ಲಿ ಕಾರ್ತಿಕ್, ಅಭಿಷೇಕ್ ಹಾಗೂ ನೆಲ್ಸನ್ ಈ ಮೂವರು ಕಾಲೇಜಿನಿಂದ ಡ್ರಾಪೌಟ್ ಆಗಿದ್ದಾರೆ. ಹಾಗೆಯೇ ಇವರ ವಿರುದ್ಧ ಅಪರಾಧ ಪ್ರಕರಣಗಳು ಇವೆ” ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.
“ಕಾರ್ತಿಕ್ ವಿರುದ್ಧ ರಾಮಮೂರ್ತಿನಗರದಲ್ಲಿ ರೌಡಿ ಪಟ್ಟಿ ಇದೆ. ಈ ಕೊಲೆಯಲ್ಲಿ ಭಾಗಿಯಾದ ಅಭಿ, ನೆಲ್ಸನ್ ವಿರುದ್ಧ ಮುಂದಿನ ದಿನಗಳಲ್ಲಿ ರೌಡಿ ಶೀಟ್ ತೆರೆಯಲಾಗುವುದು” ಎಂದರು.
ಸದ್ಯ ಮರಣೋತ್ತರ ಪರಿಕ್ಷಾ ವರದಿಗಾಗಿ ಹೆಣ್ಣೂರು ಪೊಲೀಸರು ಕಾಯುತ್ತಿದ್ದು, ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.