ಯುವಕನೋರ್ವ ಆನ್ಲೈನ್ ಗೇಮಿಂಗ್ ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ನೇಣಿಗೆ ಕೊರಳೊಡ್ಡಿದ್ದು, ಆತ್ಮಹತ್ಯೆಗೂ ಮುನ್ನ ಆರು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾನೆ. ಸಿಎಂ, ಡಿಸಿಎಂ ಅಲ್ಲದೇ ಮುಖ್ಯ ನ್ಯಾಯಾಧೀಶರಿಗೂ ಎರಡು ಪುಟಗಳ ಮನವಿ ಪತ್ರ ಬರೆದಿದ್ದಾನೆ. ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆಯೂ ಡೆತ್ ನೋಟ್‌ನಲ್ಲಿ ಬರೆದಿದ್ದು, ಆನ್‌ಲೈನ್ ಗೇಮ್ ನಂಥ ವೆಬ್ ಸೈಟ್ ವಿರುದ್ಧ ಧ್ವನಿ ಎತ್ತುವಂತೆ ಕೇಳಿಕೊಂಡಿದ್ದಾನೆ. ಘಟನೆ ದಾವಣಗೆರೆ ನಗರದ ಸರಸ್ವತಿನಗರದಲ್ಲಿ ನಡೆದಿದ್ದು, ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆಯಲ್ಲಿ ಆನ್ಲೈನ್ ಗೇಮಿಂಗ್, ಮಟ್ಕಾ, ಗಾಂಜಾ ಸೇರಿದಂತೆ ಅಕ್ರಮ ಚಟುವಟಿಕೆಗಳ ಹಾವಳಿ ಮಿತಿ ಮೀರುತ್ತಿದ್ದು, ಆತ್ಮಹತ್ಯೆಗೆ ಶರಣಾದ ಯುವಕ ಆನ್ಲೈನ್ ಗೇಮಿಂಗ್ ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಆನ್‌ಲೈನ್ ಗೇಮ್‌ನಲ್ಲಿ ಸುಮಾರು 18 ಲಕ್ಷ ರೂಪಾಯಿ ಕಳೆದುಕೊಂಡು ಮಾನಸಿಕ ತೊಳಲಾಟಕ್ಕೆ ಸಿಲುಕಿದ್ದ ಎಂದು ಹೇಳಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನಗರದ ಸರಸ್ವತಿನಗರ ನಿವಾಸಿ ಶಶಿಕುಮಾರ್(25) ಎಂದು ಗುರುತಿಸಲಾಗಿದೆ. ಸಾವಿನ ನಂತರ ಯುವಕನೇ ಬರೆದಿದ್ದಾನೆ ಎನ್ನಲಾಗಿರುವ ಡೆತ್ ನೋಟ್ ಒಂದು ಸಿಕ್ಕಿದ್ದು ಅದರಲ್ಲಿ ಕೂಡ ಆನ್ಲೈನ್ ಗೇಮ್ಸ್ ಗೆ ಹಣ ಕಳೆದುಕೊಂಡ ಬಗ್ಗೆ ತಿಳಿಸಿದ್ದಾನೆ ಎಂದು ಕುಟುಂಬದ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ಗೇಮ್‌ನಲ್ಲಿ ಹಣ ಹೂಡಿಕೆ ಮಾಡಿದ್ದ. ನಂತರ ಸಾಲ ಮಾಡಿಕೊಂಡು ಅದರಲ್ಲಿ ಸಿಲುಕಿ ಹೊರಬರಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಶಿಕುಮಾರ್ ಸುಮಾರು 19,25,21,722 ರೂ. ಆನ್‌ಲೈನ್ ಗೇಮ್‌ನಲ್ಲಿ ಬಂದಿದ್ದು, ವೆಬ್‌ಸೈಟ್ ಮಾಲೀಕರಿಗೆ ಕೇಳಿದರೆ ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹಣ ಹೂಡಿಕೆ ಮಾಡಿದ್ದೆ. ಗೇಮ್ ನಲ್ಲಿ ಸೋತಾಗ ಹಣ ಪಡೆದಿದ್ದಾರೆ, ನಾನು ಗೆದ್ದಾಗ ನೀಡಿಲ್ಲ ಎಂದು ಶಶಿಕುಮಾರ್ ಡೆಟ್‌ನೋಟ್‌ನಲ್ಲಿ ಆರೋಪಿಸಿದ್ದು, ಈ ಸಂಬಂಧ ಈ ಮುಂಚೆ ವಿದ್ಯಾನಗರ ಪೊಲೀಸ್ ಠಾಣೆಗೂ ದೂರು ನೀಡಿದ್ದಾನೆ.

ಈ ಬಗ್ಗೆ ದಾವಣಗೆರೆಯ ಕೆಟಿಜೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಗೆ ಕ್ರಮ ಕೈಗೊಂಡಿದ್ದಾರೆ. ದಾವಣಗೆರೆಯಲ್ಲಿ ಯುವಕರು ಆನ್ಲೈನ್ ಗೇಮಿಂಗ್ ನಲ್ಲಿ ಹೆಚ್ಚು ತೊಡಗುತ್ತಿದ್ದು, ಇದರಲ್ಲಿ ಹಣ ಕಳೆದುಕೊಂಡವರು ಅಕ್ರಮ ಚಟುವಟಿಕೆಗಳಲ್ಲಿ ಕೂಡ ಕೆಲವೊಮ್ಮೆ ಭಾಗಿ ಆಗುತ್ತಿದ್ದಾರೆ. ಈ ಕುರಿತು ನಿಯಮಗಳನ್ನು ರೂಪಿಸಿ ಪೊಲೀಸ್ ಇಲಾಖೆ, ಸರ್ಕಾರ ಕಡಿವಾಣ ಹಾಕಬೇಕಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಗಿಲ್ ಕಂಪೆನಿ ಹಸ್ತಾಂತರ ನಿಲ್ಲಿಸಿ ಹಕ್ಕುಗಳನ್ನು ರಕ್ಷಿಸಲು ರೈತ ಸಂಘ ಹಾಗೂ ಕೃಷಿ ಕಾರ್ಮಿಕರ ಸಂಘಟನೆ ಒತ್ತಾಯ
