ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ, ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯವರಿಗೆ ಸಲ್ಲಿಸಿರುವ ದೂರನ್ನು ಪರಿಗಣಿಸಿರುವ ಧರ್ಮಸ್ಥಳ ಪೊಲೀಸರು ಸರಣಿ ಅತ್ಯಾಚಾರ ಕೊಲೆಗಳ ಸಾಕ್ಷಿ ನಾಶಕ್ಕೆ ಸಂಬಂಧಿಸಿದ BNS 211 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎಸ್‌ಪಿ ಕಚೇರಿಯ ದೂರಿನ ಅನ್ವಯ ಎನ್‌ಸಿಆರ್ ಪ್ರಕರಣ ದಾಖಲಾಗಿತ್ತು. ಆದರೆ ಇಂದು ಮಾನ್ಯ ಜೆಎಂಎಫ್‌ಸಿ ಬೆಳ್ತಂಗಡಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣದ ಗಂಭೀರತೆ, ದೂರಿನ ಜೊತೆಗೆ ನೀಡಿದ ವಿವರಣೆ ಸಾಕ್ಷಿಗಳ ಸತ್ಯಾ ಸತ್ಯತೆ ಪರಿಶೀಲಿಸಿ ಪೊಲೀಸರು ಎಫ್‌ಐಆರ್ ದಾಖಲಿದ್ದಾರೆ.
“ನನಗೆ ನಿರಂತರ ಪ್ರಾಣ ಬೆದರಿಕೆಯೊಡ್ಡಿ, ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಲೆಗೊಳಗಾದ ಹಾಗೂ ಅತ್ಯಾಚಾರಕ್ಕೊಳಗಾಗಿ ಕೊಲೆಗೊಳಗಾದ ಅನೇಕ ಮೃತ ದೇಹಗಳು ಮತ್ತು ಸಾಕ್ಷ್ಯಗಳನ್ನು ನನ್ನಿಂದ ಬಲವಂತವಾಗಿ ಹೂತುಹಾಕಿಸಿದ್ದಾರೆ. ನನ್ನಿಂದ ಹೂತು ಹಾಕಿಸಿರುವ ಮೃತ ದೇಹಗಳ ಕಳೇಬರಗಳನ್ನು ಪೊಲೀಸರ ಸಮ್ಮುಖದಲ್ಲಿ ಹೊರತೆಗೆಸುವಂತೆ ಮನವಿ ಮಾಡುತ್ತಿದ್ದೇನೆ. ತಕ್ಷಣದ ಪ್ರಥಮ ವರ್ತಮಾನ ವರದಿ ಹಾಗೂ ಸಾಕ್ಷಿ ಸಂರಕ್ಷಣೆಯ ವಿನಂತಿ ಮಾಡುತ್ತಿದ್ದೇನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಸ್‌ಪಿಯವರಿಗೆ ಸಲ್ಲಿಸಿದ್ದೆನ್ನಲಾದ ಸುಮಾರು ಆರು ಪುಟಗಳ ದೂರನ್ನು ವಕೀಲರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಆ ವ್ಯಕ್ತಿಯ ಹೆಸರನ್ನು ಇನ್ನೂ ಕೂಡ ಬಹಿರಂಗಗೊಳಿಸಿಲ್ಲವಾದರೂ, ‘ಆ’ ವ್ಯಕ್ತಿ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕ ಆಗಿದ್ದರು ಎಂದು ಖಾತ್ರಿಪಡಿಸಿದೆ. ಅಲ್ಲದೇ, ಅವರು 1995ರಿಂದ 2014ರ ಡಿಸೆಂಬರ್ ವರೆಗೆ ಉದ್ಯೋಗದಲ್ಲಿದ್ದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಅತ್ಯಂತ ಭಾರವಾದ ಹೃದಯದಿಂದ ಹಾಗೂ ಪರಿಹಾರವಾಗದ ಪಾಪಪ್ರಜ್ಞೆಯಿಂದ ಹೊರಬರುವ ಸಲುವಾಗಿ ಈ ದೂರು ನೀಡುತ್ತಿದ್ದೇನೆ. ನಾನು 11 ವರ್ಷಗಳ ಹಿಂದೆ ಧರ್ಮಸ್ಥಳವನ್ನು ರಾತ್ರೋರಾತ್ರಿ ತೊರೆದೆ; ನನ್ನ ಸಣ್ಣ ಕುಟುಂಬವನ್ನೂ ನನ್ನೊಡನೆ ಎಳೆದೊಯ್ದೆ. ನೆರೆ ರಾಜ್ಯವೊಂದರಲ್ಲಿ ತಲೆಮರೆಸಿಕೊಂಡೆ. ಧರ್ಮಸ್ಥಳದಿಂದ ದೂರವಿದ್ದರೂ, ನಾನು ಮತ್ತು ನನ್ನ ಕುಟುಂಬ ಯಾವುದೇ ಕ್ಷಣದಲ್ಲಿ ಹಿಂದಿನವರಂತೆಯೇ ಕೊಲೆಗೊಳಗಾಗುತ್ತೇವೆ ಎಂಬ ಖಚಿತತೆ ನಮ್ಮನ್ನು ದಿನನಿತ್ಯ ಕಾಡಿದೆ” ಎಂದು ಅನಾಮಧೇಯ ವ್ಯಕ್ತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ನಾನು ಹೇಳುತ್ತಿರುವುದರ ಪುರಾವೆಯಾಗಿ, ಇತ್ತೀಚೆಗೆ ಧರ್ಮಸ್ಥಳದಲ್ಲಿ ಮೃತದೇಹ ಹೂಳಿದ್ದ ಸ್ಥಳವೊಂದಕ್ಕೆ ರಹಸ್ಯವಾಗಿ ಹೋಗಿ ಕಳೇಬರವನ್ನು ಹೊರತೆಗೆದಿದ್ದೇನೆ” ಎಂದೂ ಕೂಡ ‘ಆ’ ವ್ಯಕ್ತಿಯು ವಕೀಲರ ಮೂಲಕ ಎಸ್‌ಪಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
“ಆರೋಪಿತರ ಹೆಸರುಗಳು ಮತ್ತು ಅಪರಾಧಗಳಲ್ಲಿ ಅವರ ನಿಖರ ಪಾತ್ರವನ್ನು ಪೊಲೀಸರಿಗೆ ತಿಳಿಸುವ ಮುನ್ನವೇ ನಾನು ಕೊಲೆಯಾದರೆ ಇಲ್ಲವೇ ಅಲಭ್ಯವಾಗಿ ಹೋದರೆ, ನಡೆದಿರುವ ಸತ್ಯವು ನನ್ನೊಡನೆಯೇ ನಾಶವಾಗದಿರಲೆಂದು ಮುಂದುವರೆದ ದೂರನ್ನು ನನ್ನ ಸಹಿ ಹಾಕಿ, ಸುಪ್ರೀಂ ಕೋರ್ಟಿನ ವಕೀಲರಾದ ಕೆ.ವಿ. ಧನಂಜಯ್ ರವರಿಗೆ ನೀಡಿರುತ್ತೇನೆ” ಎಂದು ಎಸ್‌ಪಿಯವರಿಗೆ ಸಲ್ಲಿಸಿರುವ ಆರು ಪುಟಗಳ ದೂರಿನ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ.
