ಜು.15ರ ಸಭೆಯಲ್ಲಿ ಸರ್ಕಾರದಿಂದ ರೈತಪರ ನಿರ್ಧಾರ ಹೊರಬರದಿದ್ದರೆ ಸಂಯುಕ್ತ ಕಿಸಾನ್ ಮೋರ್ಚಾದ ಬೆಂಬಲದೊಂದಿಗೆ ಹೋರಾಟ ಇನ್ನಷ್ಟು ತೀವ್ರರೂಪ ಪಡೆಯಲಿದೆ ಎಂಬ ತೀರ್ಮಾನವನ್ನು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕೈಗೊಂಡಿದೆ.
ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯ ಕುರಿತು ಹೋರಾಟ ಸಮಿತಿಯ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, “ಹೋರಾಟ ಸಮಿತಿಯು, ಮುಖ್ಯಮಂತ್ರಿಗಳ ಈ ಮನವಿಯನ್ನು ಪರಿಗಣಿಸಿ, ನೋಟಿಫಿಕೇಶನ್ ರದ್ದು ಮಾಡಲು ಇರುವ ಕಾನೂನು ತೊಡಕುಗಳನ್ನು ಪರಿಶೀಲಿಸಲು ಮತ್ತು ಸಮಾಲೋಚಿಸಲು ಸಮಯಾವಕಾಶ ಕೇಳುತ್ತಿರುವುದರಿಂದ, ಚಳುವಳಿಗಾರರು ಅದನ್ನು ಒಪ್ಪಿದ್ದು ಇದೇ ತಿಂಗಳ 15ರಂದು ಮುಂದಿನ ಸಭೆ ನಿಗದಿಯಾಗಿದೆ” ಎಂದು ತಿಳಿಸಿದೆ.
“ಇನ್ನು ಎಷ್ಟು ದಿನಗಳು ಕಳೆದರೂ ಭೂಮಿ ಕೊಡುವುದಿಲ್ಲ ಎಂಬ ನಿರ್ಧಾರ ಬದಲಾಗುವುದಿಲ್ಲ ಎಂಬುದನ್ನು ಸಭೆಯಲ್ಲಿ ಎಲ್ಲರ ಗಮನಕ್ಕೆ ತರಲಾಗಿದೆ. ಮುಂದಿನ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ರೈತರು ಮತ್ತು ಹೋರಾಟಗಾರರು ಆಗ್ರಹಿಸಿದ್ದಾರೆ. ಮುಂದಿನ ಸಭೆಯಲ್ಲಿ ಭೂಸ್ವಾಧೀನವನ್ನು ಕೈಬಿಡದಿದ್ದರೆ ಹೋರಾಟವನ್ನು ತೀವ್ರಗೊಳಿಸುವುಗಾಗಿ ರೈತ ಪ್ರತಿನಿಧಿಗಳು ಎಚ್ಚರಿಸಿದ್ದಾರೆ. ಈಗಾಗಲೇ ಹಳ್ಳಿಗಳಿಂದ ಚನ್ನರಾಯಪಟ್ಟಣ ಹೋಬಳಿ ಕೇಂದ್ರಕ್ಕೆ, ಅಲ್ಲಿಂದ ದೇವನಹಳ್ಳಿಗೆ ಮತ್ತು ನಂತರ ಬೆಂಗಳೂರಿನವರೆಗೆ ಹಬ್ಬಿ, ಹೋರಾಟ ದೇಶದ ಗಮನ ಸೆಳೆದಿದೆ” ಎಂದು ಹೇಳಿದೆ.
ಮುಂದಿನ ಸಭೆಯ ತನಕ ಹೋರಾಟ ಮುಂದುವರೆಸುವ ನಿರ್ಧಾರ ಕೈಗೊಂಡಿದ್ದು, ಎಲ್ಲ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರು ಚನ್ನರಾಯಪಟ್ಟಣದ ಹದಿಮೂರು ಹಳ್ಳಿಗಳಿಗೆ ತೆರಳಿ ರೈತರ ಸಭೆಗಳನ್ನು ನಡೆಸಲು ಮತ್ತು “ನಮ್ಮ ಭೂಮಿ ನಮ್ಮ ಹಕ್ಕು, ಯಾವ ಕಂಪೆನಿಗಳಿಗೂ ಬಿಟ್ಟುಕೊಡುವುದಿಲ್ಲ” ಎಂಬ ನಾಮ ಫಲಕ ಹಾಕಲು ಸಮಿತಿ ತೀರ್ಮಾನಿಸಿದೆ. ಜೊತೆಗೆ ಇದೇ ಜುಲೈ 9ರಂದು ನಡೆಯುವ ಕಾರ್ಮಿಕರ ರಾಷ್ಟ್ರಮಟ್ಟದ ಸಾರ್ವತ್ರಿಕ ಹೋರಾಟದ ಭಾಗವಾಗಿ ಕರ್ನಾಟಕದಲ್ಲಿ ದೇವನಹಳ್ಳಿ ಭೂಮಿ ಹೋರಾಟದ ಹಕ್ಕೊತ್ತಾಯವನ್ನೂ ಒಳಗೊಳ್ಳಲಿದ್ದು, ಎಲ್ಲ ಸಂಘಟನೆಗಳೂ ಸೇರಿ ಮುಷ್ಕರವನ್ನು ಯಶಸ್ವಿಗೊಳಿಸಲು ನಿರ್ಧರಿಸಿದೆ.
ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಭೂಸ್ವಾಧೀನ ರದ್ದುಪಡಿಸಬೇಕೆಂದು ಆಗ್ರಹಿಸಿ ʼ ಚಲೋ ಸುದೀರ್ಘ 1188 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ನಾಡಿನ ಎಲ್ಲ ಜನಪರ, ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಮಹಿಳಾ ಸಂಘಟನೆಗಳು ಬೆಂಬಲ ನೀಡಿ, ʼಸಂಯುಕ್ತ ಹೋರಾಟ ಕರ್ನಾಟಕʼದ ಬೆಂಬಲದೊಂದಿಗೆ ಜೂನ್ 25ರಂದು ನಡೆದ ʼದೇವನ ಹಳ್ಳಿ ಚಲೋʼ ಸಂದರ್ಭದಲ್ಲಿ ಪೊಲೀಸ್ ದೌರ್ಜನ್ಯದ ನಂತರ ಹೋರಾಟ ವಿಸ್ತಾರಗೊಂಡಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜೂನ್ 27ರಿಂದ ನಿರಂತರ ಪ್ರತಿಭಟನಾ ಧರಣಿ ನಡೆಯುತ್ತಿದೆ.
ಈ ಹೋರಾಟದ ಅಂಗವಾಗಿ ಜುಲೈ 4ರಂದು ಮುಖ್ಯಂತ್ರಿಗಳು ಕರೆದಿದ್ದ ಸಭೆಯಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ, ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳ ಜೊತೆಗೆ ಮುಖ್ಯಮಂತ್ರಿಗಳು ಮತ್ತು ಹಲವು ಸಚಿವರು ಮತ್ತು ಅಧಿಕಾರಿಗಳು ಚರ್ಚೆ ನಡೆಸಿದರು. ಈ ವಿಚಾರದಲ್ಲಿ ಈಗಾಗಲೇ ಫೈನಲ್ ನೋಟಿಫಿಕೇಶನ್ ಆಗಿರುವುದರಿಂದ ಭೂಸ್ವಾಧೀನ ರದ್ದುಪಡಿಸಲು ಇರುವ ಕಾನೂನು ತೊಡಕುಗಳನ್ನು ಹೇಗೆ ನಿವಾರಿಸುವುದೆಂಬ ಚರ್ಚೆ ಮಾಡಬೇಕಿರುವುದರಿಂದ 10 ದಿನಗಳ ಸಮಯಾವಕಾಶ ಬೇಕೆಂದು ಮುಖ್ಯಮಂತ್ರಿಗಳು ಹೋರಾಟ ಸಮಿತಿಯ ಮುಂದೆ ಮನವಿ ಮಾಡಿದರು.
