“ಈ ದೇಶದ ಆಂತರಿಕ ಭದ್ರತೆಗೆ ಅಪಾಯ ಇರುವುದು ಮುಸ್ಲಿಮರಿಂದ ಅಲ್ಲ, ಈ ದೇಶದ ಸಂವಿಧಾನಕ್ಕೆ ಯಾರು ವಿರೋಧಿಯಾಗಿದ್ದಾರೊ ಅವರಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಿದೆ ಎಂಬುದನ್ನು ಬಹಳ ಗಟ್ಟಿಯಾಗಿ ನಿರೂಪಿಸಬೇಕಾಗಿದೆ” ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ ನಾರಾಯಣ ಹೇಳಿದರು.
‘ಜಾಗೃತ ಕರ್ನಾಟಕ’ ಶುಕ್ರವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕರ್ನಾಟಕದ ರಾಜಕಾರಣದಲ್ಲಿ ಮುಸ್ಲಿಮರ ಭವಿಷ್ಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಭಾರತ ದೇಶದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಮರ ರಾಜಕೀಯ ಭವಿಷ್ಯ ಅಪಾಯದಲ್ಲಿದೆ. ನಮ್ಮೆಲ್ಲರ ಪ್ರತಿರೋಧ ಇಲ್ಲದೆ ಇದ್ದರೆ ಈ ಅಪಾಯ ಈಗಿನ ಪ್ರಧಾನ ಮಂತ್ರಿಗಳ ನಂತರವೂ ಮುಂದುವರಿಯುತ್ತದೆ. ಈ ಆತಂಕ ಮುಂದುವರಿಯುತ್ತದೆ ಎಂಬ ನಿರಾಶವಾದದ ನಡುವೆಯೂ ನಮ್ಮ ದೇಶದ ಬಹುಸಂಖ್ಯಾತ ಸೆಕ್ಯುಲರ್‌ಗಳು ಪ್ರಬಲವಾದಂತಹ ಪ್ರತಿರೋಧ ತೋರಿದರೆ ಈ ಆತಂಕ ಇರುವುದಿಲ್ಲ ಎಂಬ ಆಶಾವಾದ ಕಾಣಿಸುತ್ತದೆ. ಈ ದೇಶದ ಬಹುಸಂಖ್ಯಾತ ಸೆಕ್ಯುಲರ್‌ಗಳು ಅಂತಹ ಪ್ರಬಲವಾದ ಪ್ರತಿರೋಧವನ್ನು ಕಟ್ಟುವಂತಹ ಸಂದರ್ಭ ಬಂದಿದೆ.
ಇಂತಹ ಸಂದರ್ಭದಲ್ಲಿ ಒಂದು ದೊಡ್ಡ ಪ್ರತಿರೋಧ ಹುಟ್ಟಿಕೊಳ್ಳುವ ಅವಶ್ಯಕತೆ ಇದೆ. ಪ್ರತಿರೋಧ ಹುಟ್ಟುವುದಾದರೂ ಹೇಗೆ ಮತ್ತು ಯಾರು ಮಾಡಬೇಕು? ಈ ದೇಶದಲ್ಲಿರುವ ಬಹುಸಂಖ್ಯಾತ ಸೆಕ್ಯೂಲರ್‌ವಾದಿಗಳು ಬಹಳ ವ್ಯವಸ್ಥಿತವಾಗಿ ಒಟ್ಟಾಗಿ ಸೇರಿ ಮುಸ್ಲಿಂರನ್ನು ರಾಕ್ಷಸೀಕರಣಗೊಳಿಸುತ್ತಿರುವ ಅಪಪ್ರಚಾರವನ್ನು ಅಲ್ಲಗಳೆಯಬೇಕಾಗಿದೆ” ಎಂದರು.
“ಪ್ರಸ್ತುತ ದೇಶಕ್ಕೆ ರಾಜಕೀಯ ನಾಯಕತ್ವ ಬೇಕಾಗಿದೆ. ನಾಯಕತ್ವ ಹುಟ್ಟುವ ಕಾಲ ಬಂದಿದೆ. ದೇಶದ ಜನಕ್ಕೆ ಈಗಿರುವ ಸಮಸ್ಯೆಗಳಿಂದ ಮುಕ್ತಿ ದೊರಕಿಸಿಕೊಡುವ ನಾಯಕ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮುಸ್ಲಿಮರು ನಾವು ಅಲ್ಪಸಂಖ್ಯಾತರ ನಾಯಕ, ಮುಸ್ಲಿಮರ ನಾಯಕನಾಗಬೇಕು ಎಂದು ಯೋಚಿಸಬೇಡಿ. ನಾವು ಇಡೀ ಭಾರತ ದೇಶದ ಸಮಸ್ತ ಜನವರ್ಗದ ನಾಯಕನಾಗುತ್ತೇನೆ ಮತ್ತು ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಗಟ್ಟಿಯಾಗಿ ಹೇಳುವಂಥ ಧೈರ್ಯ ಬೆಳೆಸಿಕೊಳ್ಳಬೇಕು. ಹಾಗೆ ಮುಸ್ಲಿಂ ನಾಯಕರಾದಂಥವರು ಬರೀ ಮುಸ್ಲಿಂ ಸಮಸ್ಯೆಗಳ ಬಗ್ಗೆ ಮಾತನಾಡೋದಲ್ಲ, ದಲಿತರ, ಹಿಂದುಳಿದ ವರ್ಗಗಳ ಸಮಸ್ಯೆಗಳ ಬಗ್ಗೆ ಮಾತನಾಡಿ. ನಿಮ್ಮ ಹಾಗೆ ಇರುವ ಇಡೀ ಜನವರ್ಗದ ಸಮಸ್ಯೆ ಬಗ್ಗೆ ಮಾತನಾಡಿದಾಗ ಜನ ನಿಮ್ಮ ಧರ್ಮವನ್ನು, ನಿಮ್ಮ ಮತವನ್ನು ಮರೆತು ನಿಮ್ಮನ್ನು ಮನುಷ್ಯರೆಂದು ನೋಡುತ್ತಾರೆ. ನಾಯಕರೆಂದು ಒಪ್ಪಿಕೊಳ್ಳುತ್ತಾರೆ. ಈ ದೇಶ ಒಬ್ಬ ರಕ್ಷಕನಿಗಾಗಿ ಕಾಯುತ್ತಿದೆ. ಆ ರಕ್ಷಕ ಯಾವ ಸಮಾಜದಿಂದ, ಯಾವ ಮತದಿಂದ ಬರುತ್ತಾರೆ ಎಂದು ನೋಡುವುದಿಲ್ಲ. ಅವನು ನಮ್ಮ ರಕ್ಷಕ ಹೌದೋ ಅಲ್ಲವೊ ಎಂಬುದಷ್ಟೆ ನೋಡುತ್ತಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಈ ದೇಶವಿದ್ದು ನಾವೆಲ್ಲರೂ ಒಟ್ಟಿಗೆ ಸೇರಿಕೊಂಡು ಎದುರಿಸೋಣ” ಎಂದರು.
Shikwa E Hind : The Political Future Of Indian Muslims ಪುಸ್ತಕದ ಲೇಖಕ, ದೆಹಲಿಯ ಜಾಮಿಯಾ ಮಿಲಿಯಾ ವಿವಿ ಪ್ರಾಧ್ಯಾಪಕ ಪ್ರೊ ಮುಜೀಬರ್ ರೆಹಮಾನ್ ಮಾತನಾಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಮುಖ್ಯ ಅತಿಥಿಯಾಗಿದ್ದರು. ಜಾಗೃತ ಕರ್ನಾಟಕದ ಡಾ ವಾಸು ಎಚ್ ವಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುಹೈಲ್ ಅಹಮದ್ ನಿರೂಪಿಸಿದರು. ಸಂವಾದದಲ್ಲಿ ಹಲವು ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.

