ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮನುಷ್ಯ ಮತ್ತು ಕಾಡಿನ ನಡುವಿನ ಸಂಬಂಧಗಳನ್ನು ಚಲನಚಿತ್ರದ ಮೂಲಕ ಮಾತನಾಡತ್ತ, ಮಲೆನಾಡಿನ ಕಾಡನ್ನು ಸಂರಕ್ಷಿಸುವ ಕಥಾ ಹಂದರವೇ ತಿಮ್ಮನ ಮೊಟ್ಟೆಗಳು ಸಿನೆಮಾವಾಗಿದೆ ಎಂದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ,ಮಲೆನಾಡಿನ ಕಥಾಹಂದರದೊಂದಿಗೆ ಮಲೆನಾಡಿನ ಕಾಡಿನಲ್ಲಿ ಚಿತ್ರಿಕರಣಗೊಂಡು, ಮಲೆನಾಡಿನ ಕಲಾವಿದರು ನಟಿಸಿದ ಸಿನೆಮಾ ಇದಾಗಿದೆ ಎಂದರು, ಮಲೆನಾಡ ಕಾಡಿನಲ್ಲಿರುವ ಕಾಳಿಂಗ ಹಾವನ್ನು ಕೇಂದ್ರವಾಗಿರಿಸಿಕೊಂಡು ಪ್ರಕೃತಿ ಮತ್ತು ಮನುಷ್ಯರ ನಡುವಿನ ವಿಭಿನ್ನ ದೃಷ್ಟಿಕೋನವನ್ನು, ದ್ವಂದ್ವ ನಿಲುವನ್ನು ಈ ಸಿನೆಮಾ ಬಿಂಬಿಸುತ್ತದೆ ಎಂದರು.
ಮನುಷ್ಯನಿಂದು ಕಾಡುಗಳ ನಡುವೆ ಬೆಳೆಸಿಕೊಂಡ ನಂಬಿಕೆ ಮತ್ತು ಮೌಢ್ಯ ವಿಭಿನ್ನ ರೂಪ ಪಡೆದುಕೊಳ್ಳುತ್ತಿದೆ, ಮಲೆನಾಡಿನ ಕಾಡನ್ನು ಸಂರಕ್ಷಿಸುವ ಉದ್ದೇಶವನ್ನು ಸಿನೆಮಾದಲ್ಲಿ ಹೆಚ್ಚು ಒತ್ತು ನೀಡಿದ್ದೇನೆ ಎಂದರು.
ಈಗಾಗಲೇ ಅಂತರಾಷ್ಟ್ರೀಯ ಚಲಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಹೆಸರಾಂತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಹಾಗೂ ಪಿ.ಶೇಷಾದ್ರಿಯವರಿಂದ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಕಾರ್ಯಕಾರಿ ನಿರ್ಮಾಪಕ ವಿನಯ್ ಕಣಿವೆ ಮಾತನಾಡಿ, ಮಲೆನಾಡ ಕಾಡಿನಲ್ಲಿನ ಸಂಸ್ಕೃತಿ, ವಿಕೃತಿ, ಮೌಢ್ಯ, ನಂಬಿಕೆಗಳ ಚಿತ್ರಣ ಈ ಸಿನೆಮಾದಲ್ಲಿದೆ, ಮಲೆನಾಡಿಗರು ಈ ಸಿನೆಮಾವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದರು.
ಈ ಗೋಷ್ಠಿಯಲ್ಲಿ ಕಲಾವಿದರಾದ ಕೇಶವ ಗುತ್ತಳಿಕೆ, ಸಂದೀಪ್ ಕುಂದಾದ್ರಿ, ಹರ್ಷ, ಸೂರಜ್, ಪ್ರೇಮ್ ಯಡೂರು ಉಪಸ್ಥಿತರಿದ್ದರು.