ಬಿಹಾರದ ಪ್ರಸಿದ್ಧ ಉದ್ಯಮಿ ಮತ್ತು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ಪಟನಾದ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ‘ಪನಾಚೆ’ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಖೇಮ್ಕಾ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್ ಪಕ್ಕದಲ್ಲಿರುವ ‘ಟ್ವಿನ್ ಟವರ್’ ಸೊಸೈಟಿಯಲ್ಲಿ ಖೇಮ್ಕಾ ವಾಸಿಸುತ್ತಿದ್ದರು. ಅಪರಾಧದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.
ಇದನ್ನು ಓದಿದ್ದೀರಾ? ಪಂಜಾಬಿನ ಯುವಕ ಕೆನಡಾದಲ್ಲಿ ಗುಂಡಿಕ್ಕಿ ಹತ್ಯೆ
ಖೇಮ್ಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ. ಅಪರಾಧ ನಡೆದ ಸ್ಥಳದಿಂದ ಒಂದು ಗುಂಡು ಮತ್ತು ಶೆಲ್ ಕೇಸಿಂಗ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ನಗರ ಕೇಂದ್ರ ಎಸ್ಪಿ ದೀಕ್ಷಾ, “ಜುಲೈ 4ರ ರಾತ್ರಿ 11 ಗಂಟೆ ಸುಮಾರಿಗೆ, ಗಾಂಧಿ ಮೈದಾನ ದಕ್ಷಿಣ ಪ್ರದೇಶದಿಂದ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ನಮಗೆ ಮಾಹಿತಿ ಬಂದಿತ್ತು. ಮಾಹಿತಿ ಬಂದ ತಕ್ಷಣ, ಪೊಲೀಸರು ಆಸ್ಪತ್ರೆ ಮತ್ತು ಅಪರಾಧ ಸ್ಥಳಕ್ಕೆ ತಲುಪಿದರು. ಪ್ರದೇಶವನ್ನು ಸುತ್ತುವರೆದಿದ್ದು, ತನಿಖೆ ನಡೆಯುತ್ತಿದೆ. ಸಿಸಿಟಿವಿ ಪರಿಶೀಲಿಸಲಾಗುತ್ತಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ಖೇಮ್ಕಾ ಉದ್ಯಮಿಯಾಗಿದ್ದರು. ಅವರ ಮಗ ಗುಂಜನ್ ಖೇಮ್ಕಾ ಅವರನ್ನೂ ಮೂರು ವರ್ಷಗಳ ಹಿಂದೆ ಕೊಲೆ ಮಾಡಲಾಗಿತ್ತು.
ಇನ್ನು ಪೂರ್ಣಿಯದ ಸ್ವತಂತ್ರ ಸಂಸದ ಪಪ್ಪು ಯಾದವ್ ಅಲಿಯಾಸ್ ರಾಜೇಶ್ ರಂಜನ್ ನಿನ್ನೆ ರಾತ್ರಿ ಸ್ಥಳಕ್ಕೆ ಧಾವಿಸಿದರು. ಎಕ್ಸ್ನಲ್ಲಿ ಪೋಸ್ಟ್ ಮಾಡಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ಬಿಹಾರದಲ್ಲಿ ಯಾರೂ ಸುರಕ್ಷಿತವಾಗಿಲ್ಲ. ಬಿಹಾರ ಅಪರಾಧಿಗಳಿಗೆ ಆಶ್ರಯ ತಾಣವಾಗಿದೆ. ನಿತೀಶ್ ಅವರೇ ದಯವಿಟ್ಟು ಬಿಹಾರವನ್ನು ಉಳಿಸಿ” ಎಂದು ಹೇಳಿದ್ದಾರೆ.
