ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರನ್ಯಾ ರಾವ್ ಅವರಿಗೆ ಸೇರಿದ 34.12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಅರ್ಕಾವತಿ ಬಡಾವಣೆಯಲ್ಲಿ ಇರುವ ರಾನ್ಯಾ ರಾವ್ ಅವರ ನಿವೇಶನ, ವಿಕ್ಟೋರಿಯಾ ಲೇಔಟ್ನಲ್ಲಿರುವ ಮನೆ, ಆನೇಕಲ್ ಮತ್ತು ತುಮಕೂರು ಬಳಿಯ ಅವರ ಕೃಷಿ ಜಮೀನುಗಳನ್ನು ಇಡಿ ಜಪ್ತಿ ಮಾಡಿದೆ.
ಇದೇ ವರ್ಷದ ಮಾರ್ಚ್ 3ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಅವರನ್ನು ಡೈರೆಕ್ಟರೇಟ್ ಆಫ್ ರವೆನ್ಯೂ ಇಂಟೆಲಿಜೆನ್ಸ್ (DRI) ಬಂಧಿಸಿತ್ತು. ರನ್ಯಾ ದುಬೈನಿಂದ ಸುಮಾರು 14.2 ಕೆ.ಜಿ ಚಿನ್ನವನ್ನು ಕ್ರಮವಾಗಿ ಬೆಂಗಳೂರಿಗೆ ತಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಅಂದಿನಿಂದಲೂ ರನ್ಯಾ ಜೈಲಿನಲ್ಲಿಯೇ ಇದ್ದಾರೆ.
ನಟಿ ರನ್ಯಾ ರಾವ್, ತರುಣ್ ಕೊಂಡೂರು ಹಾಗೂ ಇತರರ ಗುಂಪು ಸಕ್ರಿಯವಾಗಿ ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ರನ್ಯಾ ವಿರುದ್ಧ ಸಿಬಿಐ ಮತ್ತು ಡಿಆರ್‌ಐ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿವೆ. ಸಿಬಿಐ ಮತ್ತು ಡಿಆರ್‌ಐನ ಅನುಮತಿ ಪಡೆದು ಇಡಿ ಕೂಡ ಪ್ರಕರಣ ದಾಖಲಿಸಿಕೊಂಡಿದೆ. ರನ್ಯಾ ಅವರ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಈ ಲೇಖನ ಓದಿದ್ದೀರಾ?: ಪ್ರತಿಷ್ಠಿತ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಮೇಲೆ ಗಂಭೀರ ಆರೋಪ: ಕ್ಲಿನಿಕಲ್ ಪ್ರಯೋಗಕ್ಕೆ ಬಡರೋಗಿಗಳ ಬಳಕೆ
ರನ್ಯಾ ಮತ್ತು ಅವರ ತಂಡವು ದುಬೈ ಮತ್ತು ಉಗಾಂಡಾದಿಂದ ಚಿನ್ನವನ್ನು ಖರೀದಿಸಿ, ಹವಾಲಾ ಮೂಲಕ ನಗದು ಪಾವತಿ ಮಾಡುತ್ತಿದ್ದರು. ದುಬೈನಲ್ಲಿ ಚಿನ್ನವನ್ನು ಸ್ವಿಟ್ಜರ್ಲ್ಯಾಂಡ್, ಅಮೆರಿಕಗೆ ತೆಗೆದುಕೊಂಡು ಹೋಗುವುದಾಗಿ ಸುಳ್ಳು ಕಸ್ಟಮ್ಸ್ ಡಿಕ್ಲರೇಷನ್ ಪಡೆಯುತ್ತಿದ್ದರು ಎಂದು ಇ.ಡಿ ತಿಳಿಸಿದೆ.