ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ವಂಚಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಿಜೆಪಿ ಮುಖಂಡನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಈ ನಡುವೆ ಆರೋಪಿ ತಲೆಮರೆಸಿಕೊಂಡಿದ್ದ.
ಪುತ್ತೂರು ಬಪ್ಪಳಿಗೆ ನಿವಾಸಿ, ಬಿಜೆಪಿ ಮುಖಂಡ ಹಾಗೂ ವಾಸ್ತುಶಿಲ್ಪಿ ಪಿ ಜಿ ಜಗನ್ನಿವಾಸ್ ರಾವ್ ಎಂಬವರ ಪುತ್ರ ಪಿ ಜಿ ಕೃಷ್ಣ ಜೆ. ರಾವ್(21) ಆರೋಪಿತ. ಸಂತ್ರಸ್ತೆ ಹಾಗೂ ಕೃಷ್ಣ ಜೆ ರಾವ್ ಇಬ್ಬರೂ ಸಹಪಾಠಿಗಳು. ಇಬ್ಬರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿ ಯಾರೂ ಇಲ್ಲದ ವೇಳೆ ಯುವತಿಯನನ್ನು ಮನೆಗೆ ಕರೆತಂದು ಬಲವಂತವಾಗಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ವಿರೋಧಿಸಿದಾಗ ಮದುವೆಯಾಗುವುದಾಗಿ ನಂಬಿಸಿದ್ದ.
ಇದನ್ನು ಓದಿದ್ದೀರಾ? ಪುತ್ತೂರು | ಬಿಜೆಪಿ ಮುಖಂಡನ ಪುತ್ರನಿಂದ ವಿದ್ಯಾರ್ಥಿನಿ ಗರ್ಭವತಿ ಪ್ರಕರಣ; ಮಗಳಿಗೆ ನ್ಯಾಯ ಕೊಡಿಸಲು ತಾಯಿ ಆಗ್ರಹ
ಯುವತಿ ಗರ್ಭವತಿಯಾದಾಗ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರನ್ನು ಸಂಪರ್ಕಿಸಿದ್ದು ಮದುವೆಗೆ ಒಪ್ಪಿಕೊಂಡಿದ್ದರು. ಆದರೆ ಬಳಿಕ ಕೃಷ್ಣ ರಾವ್ ಮದುವೆಯಾಗಲು ನಿರಾಕರಿಸಿದ್ದ.
ಮದುವೆ ಮಾಡಿಕೊಡುವುದಾಗಿ ಠಾಣೆಯಲ್ಲಿ ಆರೋಪಿಯ ತಂದೆ ಜಗನ್ನಿವಾಸ್ ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದಾರೆ. ಜೂನ್ 23ಕ್ಕೆ ಆರೋಪಿಗೆ 21 ವರ್ಷ ತುಂಬಿತ್ತು. ಜೂನ್ 22ರಂದು ಆರೋಪಿ ನನಗೆ ಕಾಲ್ ಮಾಡಿ ನಿಮ್ಮ ಮಗಳನ್ನು ನಾನು ಮದುವೆಯಾಗೋದಿಲ್ಲ ಎಂದು ತಿಳಿಸಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ.
ಈ ಹಿನ್ನೆಲೆ ದೂರು ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ಶನಿವಾರ ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
