ಹೇಮಾವತಿ ನದಿ ನೀರಿನ ಹಂಚಿಕೆ, ಬಳಕೆಯ ವಿಚಾರವು ತುಮಕೂರು ಹಾಗೂ ರಾಮನಗರ ಜಿಲ್ಲೆಗಳ ರೈತರ ಮಧ್ಯೆ ದ್ವೇಷಮಯ ವಾತಾವರಣ ಸೃಷ್ಟಿಸಿದೆ. ಅಲ್ಲದೇ, ಎರಡೂ ಜಿಲ್ಲೆಗಳ ರಾಜಕಾರಣಿಗಳಿಗೆ ಮಧ್ಯೆ ಪ್ರತಿಷ್ಠೆಯ ವಿಷಯವಾಗಿದೆ.
ಮಾಗಡಿ ಮತ್ತು ಕುಣಿಗಲ್ ತಾಲೂಕಿಗೆ ಕುಡಿಯುವ ನೀರು ಪೂರೈಕೆ ಉದ್ದೇಶಕ್ಕಾಗಿ ರೂಪಿಸಿರುವ ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿಯಿಂದ 70 ಕಿ.ಮೀ. ಪೈಪ್ ಲೈನ್ ಅಳವಡಿಸುವ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಸಂಬಂಧಿಸಿದ ಜನಪ್ರತಿನಿಧಿಗಳ ಸಭೆ ನಡೆಸಿದರು. ಆದರೆ ಸಭೆಯ ಮುಖ್ಯ ಉದ್ದೇಶ ಈಡೇರದೇ ಎರಡು ಜಿಲ್ಲೆಗಳ ಶಾಸಕರ ನಡುವೆ ಜಟಾಪಟಿಗೆ ವೇದಿಕೆಯಾಯಿತು.
ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಮ್ಮ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಬೆಂಗಳೂರು ದಕ್ಷಿಣ (ರಾಮನಗರ) ಮತ್ತು ತುಮಕೂರು ಭಾಗದ ಸರ್ವಪಕ್ಷದ ಜನಪ್ರತಿನಿಧಿಗಳ ಸಭೆ ಕರೆದಿದ್ದರು. ಸಭೆಯಲ್ಲಿ ತುಮಕೂರು ಮತ್ತು ದಕ್ಷಿಣ ಬೆಂಗಳೂರು ಭಾಗದ ನಾಯಕರು ಪರಸ್ಪರ ಕಿತ್ತಾಡಿಕೊಂಡರು.
“ನೀರು ಹರಿಯುವ ಮೂಲ ವಿನ್ಯಾಸವನ್ನು ಬದಲಾಯಿಸಬಾರದು. ಅದನ್ನು ನೈಸರ್ಗಿಕವಾಗಿ ಹರಿಯಲು ಬಿಡಬೇಕು. ಅದನ್ನು ಬಿಟ್ಟು ಮಾರ್ಗ ಬದಲಿಸಿ ನೀರು ತೆಗೆದುಕೊಂಡು ಹೋದರೆ ಹೇಗೆ” ಎಂದು ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಸುರೇಶ್ ಗೌಡ ಮಾತಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಟಿ ಬಿ ಜಯಚಂದ್ರ ಧ್ವನಿಗೂಡಿಸಿದರು.
ಇದರಿಂದ ಕೆರಳಿದ ಮಾಗಡಿ ಬಾಲಕೃಷ್ಣ, ಸಭೆಯಲ್ಲಿ ಎದ್ದು ನಿಂತು ತುಮಕೂರು ಭಾಗದ ನಾಯಕರ ಮೇಲೆ ಏರುಧ್ವನಿಯಲ್ಲಿ ಆಕ್ರೋಶ ಹೊರಹಾಕಿದರು. “ಪ್ರತೀ ದಿನ ನಾವೇನು ಆರ್ಮಿಯನ್ನು ರಕ್ಷಣೆಗೆ ಇಟ್ಟುಕೊಂಡು ನೀರು ಪಡೆಯಬೇಕಾ? ನಾವು ಕುಡಿಯೋದಕ್ಕೆ ಅಲ್ಪ ಪ್ರಮಾಣದಲ್ಲಿ ನೀರು ಕೇಳುತ್ತಿರುವುದು. ಕುಡಿಯಲು ನೀರು ಕೊಡಲು ಅಡ್ಡಗಾಲು ಹಾಕಿದ್ರೆ ಹೇಗೆ” ಎಂದು ಗುಡುಗಿದರು.
ಮಧ್ಯಪ್ರವೇಶಿಸಿದ ಡಿ.ಕೆ.ಶಿವಕುಮಾರ್, “ಎಸ್.ಎಂ.ಕೃಷ್ಣ ಸರಕಾರದ ಅವಧಿಯಲ್ಲಿ ಶಿರಾ ತಾಲೂಕಿಗೆ ನೀರು ಹೇಗೆ ತೆಗೆದುಕೊಂಡು ಹೋಗಿದ್ದೀರಾ ಅನ್ನೋದು ಗೊತ್ತಿಲ್ಲವೇ?ʼʼ ಎಂದು ಜಯಚಂದ್ರ ಅವರನ್ನೇ ಪ್ರಶ್ನಿಸಿದರು. ಮುಂದುವರಿದು, “ನಾವೆಲ್ಲ ಒಂದೇ ಭಾಗದಲ್ಲಿ ಇರುವವರು. ಕುಡಿಯುವ ನೀರಿಗೂ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶದ ರೀತಿ ಕಿತ್ತಾಡಬೇಕೇ? ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದುವರೆಯುವ ಕುರಿತು ಆಲೋಚಿಸಿ” ಎಂದು ಸಲಹೆ ನೀಡಿದರು.
ಹೇಮಾವತಿ ಲಿಂಕ್ ಕೆನಾಲ್ ಯೋಜನೆ ರಾಜ್ಯ ಸರ್ಕಾರಕ್ಕೆ ಈಗ ತಲೆನೋವಾಗಿ ಪರಿಣಮಿಸಿದೆ. ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸಲು ಸರ್ಕಾರದ ಮೇಲೆ ತುಮಕೂರು ಭಾಗದ ಜನಪ್ರತಿನಿಧಿಗಳು ಒತ್ತಡ ಹೇರುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಯೋಜನೆಯನ್ನು ಜಾರಿಗೊಳಿಸಲು ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಸಕರು ಆಗ್ರಹಿಸುತ್ತಿದ್ದಾರೆ.

ಎರಡು ಜಿಲ್ಲೆಗಳ ಜನರ ವಾದ
ಕುಣಿಗಲ್ ಶಾಸಕ ರಂಗನಾಥ್ ಅವರು ರೈತರ ಜೊತೆಗೆ ಹೋರಾಟ ನಡೆಸುತ್ತಿದ್ದಾರೆ. ಹೇಮಾವತಿ ಕೆನಾಲ್ ನೀರು ಕುಣಿಗಲ್ ತಾಲ್ಲೂಕಿಗೆ ಮಾತ್ರವಾಗಿದೆ. ಹೊರತಾಗಿ ಮಾಗಡಿಗೆ ಅಲ್ಲ ಎಂದು ಡಾ. ರಂಗನಾಥ್ ಹಠ ಹಿಡಿದಿದ್ದಾರೆ. ಈ ಬೆಳವಣಿಗೆ ಎರಡು ಜಿಲ್ಲೆಗಳ ಜನರ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿದೆ.
ಕುಣಿಗಲ್ ರಂಗನಾಥ್ ಅವರು ರೈತರ ಹೋರಾಟದ ಬಗ್ಗೆ ಅಲ್ಲಿನ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಪೈಪ್ ಲೈನ್ ಬದಲಾಗಿ ನಾಲೆ ಮೂಲಕ ತೆಗೆದುಕೊಂಡು ಹೋಗಲಿ ಎಂಬುವುದು ಬೆಂಗಳೂರು ದಕ್ಷಿಣ ಭಾಗದ ಹೋರಾಟಗಾರರ ವಾದವಾಗಿದೆ.
ಕುಣಿಗಲ್ ತಾಲ್ಲೂಕಿಗೆ ಪೈಪ್‌ಲೈನ್ ಮೂಲಕ ನೀರು ಹರಿದರೆ ಮುಂದಿನ ದಿನಗಳಲ್ಲಿ ಪಕ್ಕದ ಮಾಗಡಿ, ರಾಮನಗರ ಭಾಗಕ್ಕೂ ನೀರು ಒದಗಿಸುವುದು ಸುಲಭವಾಗುತ್ತದೆ. ಇದೇ ಉದ್ದೇಶ ಇಟ್ಟುಕೊಂಡು ಪೈಪ್‌ಲೈನ್ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ಗುಬ್ಬಿ, ತುರುವೇಕೆರೆ, ತುಮಕೂರು ಭಾಗದವರು ನೀರಿನ ತೀವ್ರ ಕೊರತೆ ಎದುರಿಸಬೇಕಾಗುತ್ತದೆ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
ತುಮಕೂರು ಭಾಗದ ಬಿಜೆಪಿ, ಜೆಡಿಎಸ್, ರೈತ ಸಂಘಟನೆಗಳು, ಮಠಾಧೀಶರು ಹಾಗೂ ರೈತರು ಒಟ್ಟಾಗಿ ಯೋಜನೆ ವಿರೋಧಿಸಿ ಹೋರಾಟಕ್ಕೆ ಇಳಿದಿದ್ದಾರೆ. ಕುಣಿಗಲ್ ಭಾಗದಲ್ಲೂ ಯೋಜನೆ ಜಾರಿಗೆ ಪಕ್ಷಾತೀತವಾಗಿ ಒತ್ತಾಯಿಸಲಾಗುತ್ತಿದೆ. “ನಮಗೆ ನೀರು ಕೊಡಿ, ಮಾಗಡಿಗೆ ನಾವು ನೀರು ಕೊಡುವುದಿಲ್ಲ’ ಎಂಬ ಮಾತುಗಳು ಕುಣಿಗಲ್ ತಾಲ್ಲೂಕಿನಿಂದ ಕೇಳಿಬರುತ್ತಿವೆ.
ಹೇಮಾವತಿ ಹೋರಾಟ ಡಿ ಕೆ ಶಿವಕುಮಾರ್ ಅವರಿಗೆ ಸವಾಲಾಗಿ ಮಾರ್ಪಟ್ಟಿದೆ. ಯೋಜನೆಯ ಮೂಲ ಕಾರಣಕರ್ತರಾದ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಸಿದರೆ ಅಲ್ಲಿ ಬೇರೇನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ತುಮಕೂರು ಭಾಗದ ಹೋರಾಟಗಾರರು ಕೊಂಕು ತೆಗೆದಿದ್ದಾರೆ.

ಹೇಮಾವತಿ ಕೆನಾಲ್ ಯೋಜನೆ ನಿಲ್ಲಿಸಿ: ಬಿ.ಸುರೇಶ್ ಗೌಡ
“ಹೇಮಾವತಿ ಕೆನಾಲ್ ಯೋಜನೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದೇವೆ. ಸ್ಥಳ ಪರಿಶೀಲನೆ ಮಾಡುವುದಾಗಿ ಡಿಸಿಎಂ ಹೇಳಿದ್ದಾರೆ. ಅವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಾರೆ. ನಮ್ಮ ತುಮಕೂರಿಗೆ ನೀರಾವರಿಗೆ ಅನುದಾನ ಕೊಡೋದಾಗಿ ಹೇಳಿದ್ದಾರೆ. ನಮಗೆ ಮೂಲ ಯೋಜನೆ ಬೇಕು, ಯಾವ ಅನುದಾನವೂ ಬೇಡ. ಸರ್ಕಾರ ಇರೋದು ರೈತರ ಪರವಾಗಿ. ಮಾಗಡಿ, ರಾಮನಗರಕ್ಕೆ ನೀರು ಕೊಡೋಕೆ ವಿರೋಧ ಇಲ್ಲ. ಆದರೆ, ವೈಜ್ಞಾನಿಕವಾಗಿ ಮೂಲ ಯೋಜನೆ ಮೂಲಕ ನೀರು ತೆಗೆದುಕೊಂಡು ಹೋಗಲಿ” ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಹೇಳಿದ್ದಾರೆ.
“ಹೇಮಾವತಿ ಲಿಂಕ್ ಕೆನಾಲ್ ಕುರಿತು ಸಭೆ ನಡೆಸಿದ್ದೇವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕೊಟ್ಟರು. ತಾಂತ್ರಿಕವಾಗಿ ಏನು ಸಮಸ್ಯೆ ಇದೆ ಅನ್ನೋದನ್ನ ಒಬ್ಬ ಸಂಸದನಾಗಿ ನಾನು ಸಭೆಯ ಮುಂದೆ ಹೇಳಿದ್ದೇನೆ. ಅಲ್ಲದೇ, ತಾಂತ್ರಿಕ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ಮಾಡಿ. ತಾಂತ್ರಿಕ ಅಧಿಕಾರಿಗಳು ಕೊಡುವಂತಹ ವರದಿಯ ಆಧಾರದ ಮೇಲೆ ನೀವು ತೀರ್ಮಾನ ಕೈಗೊಳ್ಳಿ ಎಂದು ಹೇಳಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ” ಎಂದು ಕೇಂದ್ರ ಸಚಿವ ವಿ ಸೋಮಣ್ಣ ಸಭೆಯ ಬಳಿಕ ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್ ಸಭೆಗೆ ಗೈರು ಹಾಜರಾಗಿದ್ದರು.
986 ಕೋಟಿ ರೂ. ಮೊತ್ತದ ಯೋಜನೆ
ಹೇಮಾವತಿ ನಾಲಾ ವಲಯ ವ್ಯಾಪ್ತಿಯ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸಲು ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ನಿರ್ಮಿಸಲಾಗುತ್ತಿದೆ. ಗುಬ್ಬಿ ತಾಲೂಕಿನ ಕಡಬಾ ಬಳಿಯ ನಾಲೆಯ ಕೊನೆ ಭಾಗದಲ್ಲಿ ಭೂ ಮೇಲ್ಪಟ್ಟದಿಂದ 15 ಅಡಿ ಆಳದಲ್ಲಿ ಪೈಪ್‌ಲೈನ್ ಅಳವಡಿಸಿ ಕುಣಿಗಲ್ ಹಾಗೂ ಮಾಗಡಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಆದೇಶ ಹೊರಡಿಸಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರವು ಹಿಂದಿನ ಸರ್ಕಾರದ ಆದೇಶ ರದ್ದುಪಡಿಸಿತ್ತು. ನೈಸರ್ಗಿಕ ಕಾಲುವೆ ಮೂಲಕವೇ ಮಾಗಡಿಗೆ ನೀರು ಹರಿಸಲು ನಿರ್ಧರಿಸಿದ್ದರೂ ಒಂದೇ ಒಂದು ಹನಿ ನೀರು ಮಾಗಡಿಗೆ ಹರಿದಿರಲಿಲ್ಲ. ಈ ಹಿನ್ನೆಲೆಯಲ್ಲಿ 2023ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಪುನರಾರಂಭಿಸಿದೆ. ಯೋಜನೆಯ ಅಂದಾಜು ವೆಚ್ಚ 986 ಕೋಟಿ ರೂ.ಗಗಳಿಂದ ಕೂಡಿದೆ.
ನೀರಾವರಿ ಹಾಗೂ ಕುಡಿಯುವ ಉದ್ದೇಶಕ್ಕೆ ಹೇಮಾವತಿ ನೀರಿನ ಬಳಕೆಯ ಕುರಿತು ಕಾವೇರಿ ನ್ಯಾಯಾಧೀಕರಣ ಆದೇಶದಂತೆ ಹೇಮಾವತಿ ನಾಲಾ ವಲಯ ಹಾಗೂ ತುಮಕೂರು ಜಿಲ್ಲೆಗೆ ಒಟ್ಟು 25.31 ಟಿಎಂಸಿ ಅಡಿ ನೀರು ನಿಗದಿಪಡಿಸಲಾಗಿದೆ. ನಾಲಾ ವಲಯ ವ್ಯಾಪ್ತಿಯ ಹಾಸನ, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ 14 ತಾಲೂಕುಗಳಿಗೆ ರಾಜ್ಯ ಸರ್ಕಾರ 2019ರಲ್ಲಿ ನೀರು ಹಂಚಿಕೆ ಮಾಡಿದೆ.
ಸದ್ಯಕ್ಕೆ ಹೇಮಾವತಿ ನದಿ ನೀರಿನ ಹಂಚಿಕೆ, ಬಳಕೆಯ ವಿಚಾರವು ತುಮಕೂರು ಹಾಗೂ ರಾಮನಗರ ಜಿಲ್ಲೆಗಳ ರೈತರ ಮಧ್ಯೆ ದ್ವೇಷಮಯ ವಾತಾವರಣ ಸೃಷ್ಟಿಸಿದೆ. ಅಲ್ಲದೇ, ಎರಡೂ ಜಿಲ್ಲೆಗಳ ರಾಜಕಾರಣಿಗಳಿಗೆ ಮಧ್ಯೆ ಪ್ರತಿಷ್ಠೆಯ ವಿಷಯವಾಗಿ ರಾಜಕೀಯ ಮೇಲಾಟಕ್ಕೂ ಕಾರಣವಾಗುತ್ತಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.