ತಂತ್ರಜ್ಞಾನ ಯುಗದಲ್ಲಿ ಅವಕಾಶಗಳು ಸಾಕಷ್ಟು ಇದ್ದು, ಸವಾಲುಗಳನ್ನು ಧೈರ್ಯದಿಂದ ಎದುರಿಸಿದಾಗ ಬದುಕಿನಲ್ಲಿ ಯಶಸ್ಸು ಖಚಿತ ಎಂದು ಹಿರಿಯ ಪತ್ರಕರ್ತ ಜಿ ಎಸ್ ಕಮತರ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರತಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮಲ್ಲಪ್ಪ ರಾಮಪ್ಪ ಮಾನಕರ ದತ್ತಿನಿಧಿ ಉಪನ್ಯಾಸದ ಅಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ ಹಾಗೂ ದಿನಪತ್ರಿಕೆ ಪುಟವಿನ್ಯಾಸ ತಂತ್ರಗಳು’ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪುಟ ವಿನ್ಯಾಸ ಎನ್ನುವುದು ಎಲ್ಲಾ ಪತ್ರಿಕೆಗಳಿಗೂ ಅನ್ವಯವಾಗುತ್ತದೆ. ಬದುಕು ತಂತ್ರಗಾರಿಕೆಯಿಂದ ಕೂಡಿದಾಗ, ಅದರ ಜೊತೆಗೆ ಕಲಿಯುವುದು ಅನಿವಾರ್ಯವಾಗುತ್ತದೆ. ಕಲಿತ ವಿದ್ಯೆ ಎಂದಿಗೂ ವ್ಯರ್ಥವಾಗುವುದಿಲ್ಲ. ಉತ್ತಮ ಪತ್ರಕರ್ತನಾಗಲು ಭಾಷಾ ನೈಪುಣ್ಯತೆ, ಶಬ್ದಗಳ ಸರಿಯಾದ ಬಳಕೆ, ಬಹುಭಾಷಾ ಜ್ಞಾನ ಅಗತ್ಯ. ಇಂದು ಪತ್ರಿಕೋದ್ಯಮವು ಹಲವಾರು ನಿರೀಕ್ಷೆಗಳನ್ನು ಹೊಂದಿದೆ. ಹೆಚ್ಚು ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, “ತಂತ್ರಜ್ಞಾನವು ಒಂದು ಕಡೆ ಸವಾಲುಗಳನ್ನೂ, ಇನ್ನೊಂದೆಡೆ ಹೊಸ ಅವಕಾಶಗಳನ್ನೂ ನೀಡುತ್ತಿದೆ. ಕೃತಕ ಬುದ್ಧಿಮತ್ತೆಯನ್ನು ಸರಿಯಾಗಿ ಬಳಸಿಕೊಂಡು ವೃತ್ತಿಜೀವನ ರೂಪಿಸಿಕೊಳ್ಳಬೇಕು. ತಂತ್ರಜ್ಞಾನ ನಿರಂತರವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ, ಅಧ್ಯಯನ ಶೀಲತೆಯಿಂದಲೇ ಯಶಸ್ಸು ಸಾಧಿಸಬಹುದು” ಎಂದರು.
ಇದನ್ನೂ ಓದಿ: ವಿಜಯಪುರ | ವಿದ್ಯಾರ್ಥಿನಿಯರ ವಸತಿ ನಿಲಯ ಮಂಜೂರಾತಿಗೆ ಆಗ್ರಹ
ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕೋತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.