ರಾಮನಗರದಲ್ಲಿ ಎರಡು ದಿನದಿಂದ ನಾಪತ್ತೆಯಾಗಿದ್ದ ಬಾಲಕಿ ಕೋಣನಕುಂಟೆಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಮೇಲೆ ಮಲತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದು, ಮಾನಸಿಕ ಯಾತನೆಪಡುತ್ತಿದ್ದ ಬಾಲಕಿ ಮನೆಗೆ ಹೋಗದೆ, ತನ್ನ ಹಳೆಯ ಶಾಲೆಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಆಕೆಯ ಮೇಲೆ ದೌರ್ಜನಯ ಎಸಗಿದ್ದ ಮಲತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸಂಜೆ ತರಗತಿಗಳನ್ನು ಮುಗಿಸಿಕೊಂಡು ಶಾಲೆಯಿಂದ ಹೊರಟ ಬಾಲಕಿ ಮನೆಗೆ ಹೋಗಿರಲಿಲ್ಲ. ರಾಮನಗರದಲ್ಲಿ ಬಸ್ ಹತ್ತಿ ಕೋಣನಕುಂಟೆಯಲ್ಲಿ ತಾನು ಓದಿದ್ದ ಹಳೆಯ ಶಾಲೆಗೆ ಹೋಗಿ, ತನ್ನ ನೆಚ್ಚಿನ ಶಿಕ್ಷಕಿಯನ್ನು ಭೇಟಿ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಾಯಿ ಆಂಧ್ರಪ್ರದೇಶದವರಾಗಿದ್ದು, ಮಲತಂದೆ ತಮಿಳುನಾಡಿನವರು. ಇಬ್ಬರೂ ಬೆಂಗಳೂರಿ ಸುತ್ತ-ಮುತ್ತ ಕೂಲಿ ಕೆಲಸ ಮಾಡಿ ಬದುಕುತ್ತಿದ್ದರೂ. ಇತ್ತೀಚೆಗೆ ವಿವಾಹವಾಗಿದ್ದ ಅವರಿಬ್ಬರೂ, ತಮ್ಮ ಮಕ್ಕಳೊಂದಿಗೆ ಕೋಣನಕುಂಟೆ ಮತ್ತು ಬಿಡದಿಯಲ್ಲಿ ವಾಸವಾಗಿದ್ದರು. ಕೆಲವು ದಿನಗಳ ಹಿಂದಷ್ಟೇ ರಾಮನಗರಕ್ಕೆ ಹೋಗಿ, ಅಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಬಾಲಕಿಯ ತಾಯಿ ಮನೆಯಲ್ಲಿ ಇರದಿದ್ದಾಗ ಬಾಲಕಿಗೆ ಮಲತಂದೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಮಲತಂದೆಯ ದೌರ್ಜನ್ಯದಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದ ಬಾಲಕಿ ಗುರುವಾರ ಶಾಲೆ ಮುಗಿಸಿಕೊಂಡು ಮನೆಗೆ ಹೋಗದೆ, ಕೋಣನಕುಂಟೆಗೆ ತೆರಳಿ, ತನ್ನ ನೆಚ್ಚಿನ ಶಿಕ್ಷಕಿಯನ್ನು ಭೇಟಿ ಮಾಡಿದ್ದಾಳೆ. ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಶಿಕ್ಷಕಿಯ ಬಳಿ ಹೇಳಿಕೊಂಡಿದ್ದಾಳೆ.
ಕೂಡಲೇ ಬಾಲಕಿಯನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಕೆರೆದೊಯ್ದ ಶಿಕ್ಷಕಿ, ಅಲ್ಲಿನ ಅಧಿಕಾರಿಗಳಿಗೆ ಬಾಲಕಿ ಎದುರಿಸಿದ ದೌರ್ಜನ್ಯಗಳ ಬಗ್ಗೆ ವಿವರಿಸಿದ್ದಾರೆ. ಅಧಿಕಾರಿಗಳು ಶುಕ್ರವಾರ ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಾಲಕಿಯ ಮಲತಂದೆಯನ್ನು ಬಂಧಿಸಿದ್ದಾರೆ.
ಬಾಲಕಿ ನಾಪತ್ತೆಯಾಗಿದ್ದರಿಂದ ಆತಂಕಗೊಂಡಿದ್ದ ಬಾಲಕಿಯ ತಾಯಿ ಮತ್ತು ಆರೋಪಿ ಮಲತಂದೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ನಗರದಾದ್ಯಂತ ಹುಟುಕಾಟ ನಡೆಸಿದ್ದರು ಎಂದು ತಿಳಿದುಬಂದಿದೆ.
“ಬಾಲಕಿಯ ತಾಯಿ ಮತ್ತು ಮಲತಂದೆ – ಇಬ್ಬರೂ ಮದ್ಯ ವ್ಯಸನಿಗಳಾಗಿದ್ದರು. ಬಾಲಕಿಯ ಬಗ್ಗೆ ತಾಯಿಯೂ ಕಾಳಜಿ ಮಾಡುತ್ತಿರಲಿಲ್ಲ. ಇಬ್ಬರೂ ಆಕೆಗೆ ಹೊಡೆಯುತ್ತಿದ್ದರು. ಹೀಗಾಗಿ, ತನ್ನ ಮೇಲಾದ ದೌರ್ಜನ್ಯದ ಬಗ್ಗೆ ತಾಯಿಯ ಬಳಿ ಬಾಲಕಿ ಹೇಳಿಕೊಂಡಿಲ್ಲ” ಎಂದು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.