ಅಕ್ಕನೊಂದಿಗೆ ಸೇರಿಕೊಂಡು ಮಾವನ ಕೊಲೆ ಮಾಡಿದ ಆರೋಪಿಗಳಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಅವರು ಜೀವಾವಧಿ ಶಿಕ್ಷೆ ಮತ್ತು ₹1.40 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣ 2020ರ ಸೆಪ್ಟೆಂಬರ್ 3ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ನೇರಲಿ ಗ್ರಾಮದ ಸಚಿನ್ ಬೋಪಲೆ ಎಂಬಾತನು ತನ್ನ ಪತ್ನಿ ಅನಿತಾಳ ಮೇಲೆ ಅನುಮಾನ ಹೊಂದಿದ್ದ. ವಿಷಯ ಪರಿಹರಿಸಲು ಕುಟುಂಬಸ್ಥರನ್ನು ಕರೆಸಿ ಮಾತುಕತೆ ನಡೆಸುತ್ತಿದ್ದ ವೇಳೆ ಜಗಳ ನಡೆದು ಕೊಲೆಗೆ ಕಾರಣವಾಗಿತ್ತು
ಆರೋಪಿಗಳು ಸಚಿನ್ ಬೋಪಲೆ ಅವರನ್ನು ಕೊಂದು, ಜೆಸಿಬಿಯಿಂದ ಗುಂಡಿ ಅಗೆದು ಶವ ಮುಚ್ಚಲು ಯತ್ನಿಸುತ್ತಿದ್ದ ವೇಳೆ ಜೆಸಿಬಿ ಚಾಲಕ ಸುನೀಲ ರಾಥೋಡ ಶವವನ್ನು ನೋಡುತ್ತಾನೆ. ಆತನು ಯಾರಿಗಾದರೂ ಹೇಳಿದರೆ ನಿನ್ನೂ ಕೊಲ್ಲುತ್ತೇವೆ ಎಂದು ಆರೋಪಿ ಕೃಷ್ಣಾ ಅಲಿಯಾಸ್ ಪಿಂಟೂ ರಾಜಾರಾಮ ಘಾಟಗೆ ಬೆದರಿಕೆ ಹಾಕಿದ್ದ. ಬಳಿಕ ರಾಥೋಡ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.