ಹಾಸನದಲ್ಲಿ ದಲಿತ ಕುಟುಂಬಗಳು ವಾಸ ಮಾಡುವ ಸ್ಥಳದಲ್ಲಿ ಬಲಾಢ್ಯರು, ಹಣವಂತರು ಅಕ್ರಮವಾಗಿ ಬೇಲಿ ಹಾಕಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜೈ ಭೀಮ್ ಬ್ರಿಗೇಡ್ ಸಂಘಟನಾ ಸಮಿತಿಯು ಶುಕ್ರವಾರ ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
“ಪಾಲಿಕೆ ವಾರ್ಡ್ ನಂ.16 ರಾಜಕುಮಾರ ನಗರ ಬಡಾವಣೆಯಲ್ಲಿ 30 ಬಡ ದಲಿತ ಕುಟುಂಬಗಳು ವಾಸಮಾಡುತ್ತಿವೆ. ಇಲ್ಲಿ ಕೆಲ ಹಣವಂತರು ಅತಿಕ್ರಮವಾಗಿ ಭೂ ಒತ್ತುವರಿ ಮಾಡಿ ದೌರ್ಜನ್ಯ ಎಸೆಗುತ್ತಿದ್ದಾರೆ. ಜೊತೆಗೆ ಕಾನೂನು ವಿರುದ್ಧವಾಗಿ ಸಾರ್ವ ಜನಿಕರಿಗೆ ತಿರುಗಾಡಲು ರಸ್ತೆ ಬಿಡದೆ ಅಕ್ರಮವಾಗಿ ಬೇಲಿ ಹಾಕಿಕೊಂಡು ತೊಂದರೆ ಕೊಡುತ್ತಿರುತ್ತಾರೆ. ಪಾಲಿಕೆಯ ಕೆಲವು ಅಧಿಕಾರಿಗಳು ಈ ಕೃತ್ಯದಲ್ಲಿ ಶಾಮೀಲಾಗಿ ಸರಿಯಾದ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕೂಡಲೇ ಒತ್ತುವರಿ ಮಾಡಿ ಬೇಲಿ ಹಾಕಿಕೊಂಡಿರುವ ಭೂ ಮಾಲೀಕರು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಸಮಿತಿ ಮನವಿ ಮಾಡಿತು.
ಇದನ್ನೂ ಓದಿ: ಹಾಸನ | 21 ವರ್ಷದ ಯುವಕ ಹೃದಯಾಘಾತಕ್ಕೆ ಬಲಿ
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪಾಲಿಕೆ ಅಧಿಕಾರಿಗೆ ಪೋನ್ ಮೂಲಕ ಸೂಕ್ತ ಕ್ರಮವಹಿಸಿ ವರದಿ ನೀಡುವಂತೆ ಸೂಚನೆ ನೀಡಿದರು. ಇದಲ್ಲದೆ ತಾವೂ ಕೂಡ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಶ್, ಕಾರ್ಯಾಧ್ಯಕ್ಷ ಚಂದ್ರಶೇಖರ್, ವೈಚಾರಿಕ ಪತ್ರಿಕೆ ಸಂಪಾದಕ ವೆಂಕಟೇಶ್ ಬ್ಯಾಕರವಳ್ಳಿ, ರಾಮು, ನಿವಾಸಿಗಳಾದ ಕೃಷ್ಣ, ಸುಭಾಷ್, ಪ್ರವೀಣ್, ಫಯಾಜ್ ಇನ್ನಿತರರು ಇದ್ದರು.