ಹೆಸರು ಬೆಳೆ ಬಿತ್ತನೆ ಈ ಬಾರಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಚುರುಕಿನಿಂದ ನಡೆದಿದ್ದು, ರೈತರು ಈಗ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮುಂಗಾರು ಹಂಗಾಮಿಗೆ ಸೇರಿದ ಹೆಸರು ಬೆಳೆ ಸಾಮಾನ್ಯವಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಬಿತ್ತಲಾಗುತ್ತದೆ. ಸುಮಾರು 50 ರಿಂದ 70 ದಿನಗಳಲ್ಲಿ ಈ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಹುಕ್ಕೇರಿ, ಚಿಕ್ಕೋಡಿ, ಅಥಣಿ, ಯರಗಟ್ಟಿ, ಸವದತ್ತಿ, ರಾಯಬಾಗ ಮತ್ತು ಖಾನಾಪೂರ ತಾಲೂಕುಗಳಲ್ಲಿ ಹೆಸರು ಬೆಳೆಯು ಪ್ರಮುಖವಾಗಿ ಕಂಡುಬರುತ್ತದೆ. ಈ ಸಾಲಿನಲ್ಲಿ ರಾಮದುರ್ಗ ತಾಲೂಕಿನ ರೈತರು ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಹೆಸರು ಬೆಳೆ ಬೆಳೆದಿದ್ದು, ಆರಂಭಿಕ ಮಳೆಯಿಲ್ಲದ ಕಾರಣ ರೈತರು ಆತಂಕದಲ್ಲಿದ್ದಾರೆ.
ರೈತನ ಪಾಲಿಗೆ ಮಣ್ಣು ದೇವರ ತುಂಡು. ಅದರೊಳಗೆ ಬೀಜ ಹಾಕುವಾಗ ಅವನು ಹಂಗು ಬಿಡುತ್ತಾನೆ, ನಂಬಿಕೆ ಇಡುತ್ತಾನೆ, ಈ ಬಾರಿ ಸಹ ರೈತರು ಅದೇ ನಂಬಿಕೆಯಿಂದ ಹೆಸರು ಬಿತ್ತಿದ್ದಾರೆ. ಆದರೆ ಈ ಬಾರಿ ಮಳೆ ಬಾರದೆ, ಆಟ ಜೀವಾಟಕ್ಕೆ ತಿರುಗಿದೆ.
“ಬಿತ್ತನೆ ಮುಗಿದು ಒಂದು ತಿಂಗಳು ಕಳೆದಿದೆ. ಸರಿಯಾಗಿ ಮಳೆಯಾಗಿಲ್ಲ. ಮಳೆಯಿಲ್ಲದೇ ಬೇಸರವಾಗಿದೆ. ನೆಲ ಒಣಗುತ್ತಿದೆ. ಇನ್ನೂ ಮಳೆ ಬಾರದಿದ್ದರೆ ಬೆಳೆ ನಾಶವಾಗುವ ಭೀತಿ ಇದೆ” ಎಂದು ರಾಮದುರ್ಗದ ರೈತ ಬಸವರಾಜ ಬಡಿಗೇರ ಆತಂಕದಿಂದ ಆಕಾಶದೆಡೆಗೆ ದಿಟ್ಟಿಸುತ್ತಿದ್ದಾರೆ.
ರಾಮದುರ್ಗದ ರೈತರು ಮಣ್ಣಿಗೆ ತಮ್ಮ ಕನಸುಗಳ ಬೀಜವನ್ನು ಹಾಕಿದ್ದು, ಮಳೆ ಬರುವ ಭರವಸೆಯ ಮೇಲೆ ದಿನದೂಡುತ್ತಿದ್ದಾರೆ. ಹೆಜ್ಜೆಗಾಲಿನಿಂದ ಹಾದುಹೋಗುವ ಹೊಲದ ನಡುವೆ ರೈತನ ಹೃದಯ ಮಳೆಬಿಡುವ ಕ್ಷಣವನ್ನು ಕಾಯುತ್ತಾ ಕುಳಿತಿದ್ದಾರೆ.
ಈ ಕುರಿತು ಬೆಳಗಾವಿ ಜಿಲ್ಲೆಯ ಸಾಲಾಪೂರ ಗ್ರಾಮದ ರೈತ ಶಿವಾನಂದ ಕೆಂಚರಡ್ಡಿ ಮಾತನಾಡಿ, “ಈ ಬಾರಿ 12 ಎಕರೆ ಹೆಸರು ಬಿತ್ತನೆ ಮಾಡಿ, ಪ್ರತಿ ಎಕರೆಗೆ 5 ಸೇರು ಹೆಸರು ಬೀಜ ಬಿತ್ತಿದ್ದೇವೆ. ಬಿತ್ತನೆಗೆ ಹರಗಲು, ಯಡಿ ಹೊಡೆಯಲು, ಬೀಜ ಹಾಗೂ ಗೊಬ್ಬರಗಳಿಗೆ ಸಾವಿರಾರು ರೂಪಾಯಿ ವೆಚ್ಚವಾಗಿದೆ. ಟ್ರ್ಯಾಕ್ಟರ್ ಬಾಡಿಗೆ ಪ್ರತಿ ಎಕರೆಗೆ ₹800 ಆಗಿದ್ದು, ಎತ್ತುಗಳಿಂದ ಮಾಡಿದರೆ ದಿನಕ್ಕೆ ₹3,000 ಖರ್ಚಾಗುತ್ತದೆ. 2024ರಲ್ಲಿ ಅವರ ಭೂಮಿಯಲ್ಲಿ 10 ಕ್ವಿಂಟಲ್ ಹೆಸರು ಇಳುವರಿ ಸಿಕ್ಕಿದ್ದು, ಕ್ವಿಂಟಾಲಿಗೆ ₹7,500ರಷ್ಟು ಬೆಲೆ ದೊರೆತಿತ್ತು. ಈ ವರ್ಷವೂ ಅಂತಹ ಇಳುವರಿಯ ನಿರೀಕ್ಷೆ ಇತ್ತು. ಆದರೆ ಈಗ ಹೆಸರು ಹೂವು ಬಿಡುವ ಹಂತ ಹಂತದಲ್ಲಿ ಮಳೆಯಾಗಬೇಕು. ಆದರೆ ಇದುವರೆಗೆ ಮಳೆಯಾಗಿಲ್ಲ. ಇದರಿಂದ ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ. ಬಿತ್ತನೆಗೆ ಮಾಡಿದ ಖರ್ಚು ಸಹ ಸಿಗುವ ನಂಬಿಕೆ ಕೂಡ ಉಳಿದಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಮಹಿಳೆ ಮುತ್ತವ್ವ ರಾಜನಾಳ ಮಾತನಾಡುತ್ತಾ, “ಮೊದಲು ಮುಂಗಾರು ಹಂಗಾಮಿನಲ್ಲಿ ರೈತರು ಹೆಸರು ಜೊತೆ ಮಿಶ್ರ ಬೇಸಾಯವಾಗಿ ತೊಗರಿ ಮತ್ತು ಸಜ್ಜೆ ಬೆಳೆಯುತ್ತಿದ್ದರು. ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈಹಿಡಿಯುತ್ತಿತ್ತು. ಆದರೆ ಈಗ ಮಿಶ್ರ ಬೇಸಾಯದಿಂದ ರೈತರು ಹಿಂದೆ ಸರಿದಿದ್ದಾರೆ. ಈ ವರ್ಷ ಮಳೆಯು ಸರಿಯಾಗಿ ಆಗದ ಕಾರಣ ಹೆಸರು ಬೆಳೆಗಳು ಒಣಗುತ್ತಿವೆ. ಆದಷ್ಟು ಬೇಗ ಮಳೆಯಾದರೆ ಮಾತ್ರ ಉತ್ತಮ ಇಳುವರಿ ನಿರೀಕ್ಷಿಸಬಹುದು” ಎಂದು ತಿಳಿಸಿದರು.
“ಗ್ರಾಮೀಣ ಭಾಗದಲ್ಲಿ ಮಿಶ್ರ ಬೇಸಾಯದ ಪ್ರಾಮುಖ್ಯತೆ ತಗ್ಗುತ್ತಿರುವುದು ಮತ್ತು ಹವಾಮಾನ ವೈಪರೀತ್ಯಗಳು ರೈತರ ಇಂದಿನ ಈ ಪರಿಸ್ಥಿತಿಗೆ ಕಾರಣವಾಗುತ್ತಿದೆ. ಸರ್ಕಾರ ಹಾಗೂ ಕೃಷಿ ಇಲಾಖೆಯು ರೈತರಿಗೆ ಸಲಹೆ, ಮಾರ್ಗದರ್ಶನ ಮತ್ತು ತಕ್ಷಣದ ನೆರವು ನೀಡಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಹೆಸರು ಬೆಳೆಯಲ್ಲಿ ಹೂವು ಬಿಟ್ಟ ನಂತರ ಗಿಡಗಳಲ್ಲಿ ರಸ ಹೀರುವ ಕೀಟಗಳು, ಕಾಯಿ ಕೊರಕ ಕೀಟಗಳು, ತಂಬಾಕು ಮರಿಹುಳು ಸೇರಿದಂತೆ ವಿವಿಧ ಹಾನಿಕರ ಕೀಟಗಳು ದಾಳಿ ನಡೆಸುತ್ತವೆ ಹಾಗೂ ಹಳದಿ ಮೊಸಾಯಿಕ್ ನಂಜು ರೋಗ ಹಾಗೂ ಎಲೆ ಚುಕ್ಕೆ ರೋಗಗಳು ಕೂಡಾ ಹೆಸರು ಬೆಳೆಗೆ ಭಾರೀ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತಿವೆ. ಈ ಎಲ್ಲಾ ಸಮಸ್ಯೆಗಳ ನಿಯಂತ್ರಣಕ್ಕಾಗಿ ಕೀಟನಾಶಕ ಔಷಧಿಗಳು ಹಾಗೂ ರೋಗ ನಿರೋಧಕ ಸಿಂಪಡಣೆಗೆ ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ. ಇದು ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತದೆ. ಆ ಸಂದರ್ಭದಲ್ಲಿ ಸರ್ಕಾರವು ನಮ್ಮ ಸಹಾಯಕ್ಕೆ ಬರಬೇಕು” ಎಂದು ರೈತ ಬಸವರಾಜ ಮನವಿ ಮಾಡಿದ್ದಾರೆ.
ರಾಮದುರ್ಗ ತಾಲೂಕಿನಲ್ಲಿ 18735 ಹೆಕ್ಟೇರ್ ಹೆಸರು ಬಿತ್ತನೆ ಆಗಿದೆ ಎಂದು ರಾಮದುರ್ಗ ತಾಲೂಕಿನ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಖಾನಾಪೂರ, ಕಿತ್ತೂರು, ಬೆಳಗಾವಿ ತಾಲೂಕುಗಳಲ್ಲಿ ಮಳೆಯಾಗಿದೆ. ಆದರೆ ರಾಮದುರ್ಗ ತಾಲೂಕಿನಲ್ಲಿ ಸರಿಯಾಗಿ ಮಳೆ ಆಗದಿರುವುದು ಹೆಸರು, ಸಜ್ಜೆ, ಈರುಳ್ಳಿ, ತೊಗರಿ ಬೆಳೆದ ರೈತರಿಗೆ ಸಂಕಷ್ಟವನ್ನುಂಟು ಮಾಡಿದೆ. ಈ ವರ್ಷ ಹೆಸರು ಬಿತ್ತನೆ ಜೋರಾಗಿ ನಡೆದಿದೆ. ಆದರೆ ಮಳೆ ಮಾತ್ರ ಈ ಹೊತ್ತಿನವರೆಗೆ ಬಂದಿಲ್ಲ. ಈ ಬಿಕ್ಕಟ್ಟಿನ ನಡುವೆಯೇ, ರೈತನ ಕಣ್ಣಲ್ಲಿ ತಂಪಿಲ್ಲ, ಹೃದಯದಲ್ಲಿ ನಿಶ್ಶಬ್ದ ಕಳವಳ. ನಿನ್ನೆಯ ದಿನ ಹಸಿರು ಕಂಡವನಿಗೆ ಇಂದು ಶೂನ್ಯತೆಯ ಭಯ ಕಾಡುತ್ತಿದೆ.
ಈ ಸಂದರ್ಭದಲ್ಲಿ ಸರ್ಕಾರ ರೈತರ ಕೈಹಿಡಿಯಬೇಕು ಎಂಬುದು ಅನ್ನದಾತರ ಆಗ್ರಹ. ಬಿತ್ತನೆಗೂ ಮುಂಚೆ ಇದ್ದ ನಂಬಿಕೆ, ಈಗ ಸರ್ಕಾರದ ಬೆಂಬಲದಿಂದ ಜೀವ ಪಡೆಯಬೇಕಿದೆ. ಮಳೆ ಬರುವುದೋ ಇಲ್ಲವೋ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ರೈತನ ಕೈ ಹಿಡಿಯುವ ಮನುಷ್ಯತ್ವ ಸರ್ಕಾರದ್ದು. ರೈತನ ಬೆವರು ಮಣ್ಣು ಸೇರುತ್ತದೆ. ಆದರೆ ಅವನ ಕನಸುಗಳು ಮಣ್ಣಲ್ಲೇ ಕುಸಿಯದಿರಲಿ. ಅವನ ನಗು ಮತ್ತೆ ಹೊಲದಲ್ಲಿ ಮೂಡಬೇಕಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು