ಮೂಢ, ವಿಕೃತ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅತ್ತೆಯನ್ನು ವಿವಸ್ತ್ರಗೊಳಿಸಿ ಮಾಟಮಂತ್ರ ಮಾಡಿ, ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ನವಿ ಮುಂಬೈನಲ್ಲಿ ನಡೆದಿದೆ. ತನ್ನ ಸೋದರ ಅಳಿಯನಿಗೆ ಮದುವೆಗೆ ದುಷ್ಟಶಕ್ತಿಗಳು ಅಡ್ಡಿಯಾಗಿವೆ ಎಂದು ಮೂಢನಂಬಿಕೆಗೆ ಒಳಗಾಗಿದ್ದ ವ್ಯಕ್ತಿ, ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ವಾಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಆರೋಪಿ ಮತ್ತು ಸಂತ್ರಸ್ತರು ಉತ್ತರ ಪ್ರದೇಶದ ದೇವ್ರಿಯಾ ಮೂಲದವರು. ಅವರೆಲ್ಲರೂ ನವಿ ಮುಂಬೈನಲ್ಲಿ ನೆಲೆಸಿದ್ದರು. ಏಪ್ರಿಲ್ 15 ರಂದು, ಆರೋಪಿಯು ತನ್ನ ಪತ್ನಿ ಮತ್ತು ಆಕೆಯ ತಾಯಿಯನ್ನು ವಿವಸ್ತ್ರಗೊಳಿಸಿ, ಕೆಲವು ಆಚರಣೆಗಳನ್ನು ನಡೆಸುವಂತೆ ಒತ್ತಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುವುದರಿಂದ ಉಂಟಾಗುವ ಬಿಕ್ಕಟ್ಟುಗಳೇನು ಬಲ್ಲಿರಾ?
“ಆರೋಪಿಯು ಸಂತ್ರಸ್ತೆಯರ ನಗ್ನ ಚಿತ್ರಗಳನ್ನು ತೆಗೆದುಕೊಂಡಿದ್ದು, ಅವುಗಳನ್ನು ತನ್ನ ಸಂಬಂಧಿಗಳಿಗೆ ವಾಟ್ಸ್‌ಆ್ಯಪ್ ಮೂಲಕ ಕಳಿಸಿದ್ದಾನೆ” ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಪೊಲೀಸರು ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 351(2), 352 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮಾಟಮಂತ್ರಗಳ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ ಕಾಯ್ದೆ-2013 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.