ಶಿಕ್ಷಕಿಯು ದಲಿತೆ ಎಂಬ ಕಾರಣಕ್ಕೆ ಅಂಗನವಾಡಿ ಕೇಂದ್ರಕ್ಕೆ ಪ್ರವೇಶ ನಿರಾಕರಿಸಿ ಗ್ರಾಮಸ್ಥರು ಜಾತಿ ದೌರ್ಜನ್ಯ ಎಸಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆ ಗ್ರಾಮದಲ್ಲಿ ನಡೆದಿದೆ. ಕಳೆದ 10 ತಿಂಗಳಿಂದ ಅಂಗವಾಡಿಗೆ ಬರುತ್ತಿರುವ ಶಿಕ್ಷಕಿ, ಕೇಂದ್ರಕ್ಕೆ ಪ್ರವೇಶಿಸಲಾಗದೇ ಹೊರಗೇ ನಿಲ್ಲುತ್ತಿದ್ದಾರೆಂದು ತಿಳಿದುಬಂದಿದೆ.
ಮಾದಿಗ ಸಮುದಾಯಕ್ಕೆ (ಎಸ್‌ಸಿ) ಸೇರಿದ ಶಿಕ್ಷಕಿ ಆನಂದಮ್ಮ ರಾಜಘಟ್ಟದಲ್ಲಿ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಅಂಗನವಾಡಿ ಶಿಕ್ಷಕಿಯಾಗಿ ಬಡ್ತಿ ನೀಡಿ, ಮೆಳೆಕೋಟೆ ಗ್ರಾಮಕ್ಕೆ 2022ರ ಸೆಪ್ಟೆಂಬರ್‌ನಲ್ಲಿ ವರ್ಗಾವಣೆ ಮಾಡಲಾಗಿತ್ತು.
ಆದರೆ, ಆಕೆ ದಲಿತೆ ಎಂಬ ಕಾರಣಕ್ಕೆ ಆಕೆಯನ್ನು ತಮ್ಮ ಗ್ರಾಮದ ಅಂಗನವಾಡಿಗೆ ನಿಯೋಜಿಸಬಾರದು ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಹೊರತಾಗಿಯೂ ಮೇಲಧಿಕಾರಿಗಳ ಆದೇಶದಂತೆ ಶಿಕ್ಷಕಿ ಆನಂದಮ್ಮ ಅವರು ದೊಡ್ಡರಾಯಪ್ಪನಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು, ಮೆಳೆಕೋಟೆ ಅಂಗನವಾಡಿಗೆ ಬರುತ್ತಿದ್ದರು. ಆದರೆ, ಅಲ್ಲಿನ ಗ್ರಾಮಸ್ಥರು ಆಕೆಗೆ ಅಂಗನವಾಡಿ ಒಳಗೆ ಹೋಗದಂತೆ ತಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
“ನಾನು ಎಸ್‌ಸಿ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ನನಗೆ ಅಂಗನವಾಡಿಯಲ್ಲಿ ಕೆಲಸ ಮಾಡಲು ಗ್ರಾಮಸ್ಥರು ಬಿಡುತ್ತಿಲ್ಲ. ಕೇಂದ್ರ ಪ್ರವೇಶಿಸಲು ಹಲವು ಬಾರಿ ಪ್ರಯತ್ನಿಸಿದರೂ ಗ್ರಾಮಸ್ಥರು ತಡೆಯುತ್ತಿದ್ದಾರೆ. ಕಳೆದ 10 ತಿಂಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಪ್ರತಿದಿನ ಗ್ರಾಮಸ್ಥರು ನನಗೆ ಕೆಲಸ ಮಾಡಲು ಬಿಡದೆ, ತಡೆಯುತ್ತಿದ್ದಾರೆ. ನಾನು ಅಂಗನವಾಡಿಯ ಹೊರಗೆಯೇ ನಿಲ್ಲುವಂತೆ ತಾಕೀತು ಮಾಡುತ್ತಿದ್ದಾರೆ” ಎಂದು ಶಿಕ್ಷಕಿ ಆನಂದಮ್ಮ ಆರೋಪಿಸಿದ್ದಾರೆ.
“ಗ್ರಾಮದ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದ್ದು, ಸಮಸ್ಯೆಗೆ ಸೌಹಾರ್ದಯುತ ಪರಿಹಾರ ದೊರಕಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ” ಎಂದೂ ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ತುಮಕೂರು | ಹೃದಯ ವಿದ್ರಾವಕ ಘಟನೆ; ಸೂತಕದ ಮೌಢ್ಯಕ್ಕೆ ಹಸುಗೂಸು ಬಲಿ
“ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಗೆ ಮನವರಿಕೆ ಮಾಡಿ ಶಿಕ್ಷಕಿಗೆ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿಕುಮಾರ್ ಅವರಿಗೆ ಸೂಚನೆ ನೀಡಿದ್ಧೇನೆ” ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್ ಎಸ್ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ. ಸೋಮವಾರ ಗ್ರಾಮಸಭೆ ನಡೆಸಿ, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ, ಮನವರಿಕೆ ಮಾಡಿ, ಶಿಕ್ಷಕಿಗೆ ಕೆಲಸ ಮಾಡಲು ಅನುವು ಮಾಡಿಕೊಡಲಾಗುತ್ತದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.