- ಸಿಬ್ಬಂದಿಯ ಪರವಾಗಿ ಕ್ಷಮೆಯಾಚಿಸಿದ ಏರ್ ಏಷ್ಯಾ ಇಂಡಿಯಾ ಅಧಿಕಾರಿಗಳು
- ಪ್ರೋಟೋಕಾಲ್ ಉಲ್ಲಂಘನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅಧಿಕಾರಿಗಳು
ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಕರ್ನಾಟಕ ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಅವರನ್ನು ಬಿಟ್ಟು ವಿಮಾನ ಹಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಮಾನದ ಸಿಬ್ಬಂದಿ ಮೇಲೆ ರಾಜಭವನದ ಉನ್ನತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕಳೆದ 10 ವರ್ಷದಿಂದ ರಾಜಭವನದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೂವರು ರಾಜ್ಯಪಾಲರಿಗೆ ಪ್ರೋಟೋಕಾಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಸಾಂವಿಧಾನಿಕ ಮುಖ್ಯಸ್ಥರನ್ನು ಇಂತಹ ಶೈಲಿಯಲ್ಲಿ ನಡೆಸಿಕೊಳ್ಳುವುದನ್ನು ನಾನು ಎಂದು ಕಂಡಿಲ್ಲ” ಎಂದು ರಾಜಭವನದ ಪ್ರೋಟೋಕಾಲ್ ಅಧಿಕಾರಿ ಎಂ ವೇಣುಗೋಪಾಲ್ ತಿಳಿಸಿದರು.
“ಏರ್ ಏಷ್ಯಾ ಇಂಡಿಯಾ ಅಧಿಕಾರಿಗಳು ಗವರ್ನರ್ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿಯ ಪರವಾಗಿ ಕ್ಷಮೆಯಾಚಿಸಿದ್ದಾರೆ. ಅನುಸರಿಸಬೇಕಾದ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು.
“ರಾಜ್ಯಪಾಲರು ಗುರುವಾರ ಬೆಳಗ್ಗೆ 9 ಗಂಟೆಗೆ ಟೇಕ್ ಆಫ್ ಆಗಬೇಕಿದ್ದ ಸ್ಟಾರ್ ಏರ್ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಿದ್ದರು. ಆದರೆ, ರಾಜ್ಯಪಾಲರು ಹಿಂದಿನ ರಾತ್ರಿ (ಬುಧವಾರ) ಇಂದೋರ್ನಿಂದ ತಡವಾಗಿ ಬೆಂಗಳೂರಿಗೆ ಬಂದ ಕಾರಣ ಬೆಳಗಿನ ವಿಮಾನವನ್ನು ರದ್ದುಗೊಳಿಸಿ, ಮಧ್ಯಾಹ್ನದ ವಿಮಾನವನ್ನು ಕಾಯ್ದಿರಿಸಿದರು” ಎಂದು ವಿವರಿಸಿದರು.
“ಏರ್ಏಷ್ಯಾ ಇಂಡಿಯಾ ವಿಮಾನದ ಟಿಕೆಟ್ ಅನ್ನು ಮಧ್ಯಾಹ್ನ 2.05ಗಂಟೆಗೆ ಕಾಯ್ದಿರಿಸಲಾಗಿತ್ತು. ಟಿಕೆಟ್ ಕಾಯ್ದಿರಿಸಿದಾಗಿನಿಂದ ನಮ್ಮ ತಂಡ ರಾಜ್ಯಪಾಲರ ಪ್ರಯಾಣಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಿಬ್ಬಂದಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿತ್ತು. ಮಧ್ಯಾಹ್ನ 1.35ಕ್ಕೆ ಕೆಐಎಗೆ ರಾಜ್ಯಪಾಲರ ಆಗಮನದ ಬಗ್ಗೆ ವಿಮಾನಯಾನ ಸಂಸ್ಥೆಗೆ ಎಚ್ಚರಿಕೆ ನೀಡಲಾಯಿತು. ರಾಜ್ಯಪಾಲರು ಎಂದಿಗೂ ತಡವಾಗಿ ಹೋಗುವುದಿಲ್ಲ. ಅವರು ಟೇಕ್-ಆಫ್ ಆಗುವ 40 ನಿಮಿಷಗಳ ಮೊದಲು ವಿಮಾನ ನಿಲ್ದಾಣದಲ್ಲಿದ್ದರು” ಎಂದು ಅವರು ಹೇಳಿದರು.
“ರಾಜ್ಯಪಾಲರಿಗೆ ತಪಾಸಣೆಯಿಂದ ವಿನಾಯಿತಿ ನೀಡಲಾಗಿದೆ. ಪ್ರೋಟೋಕಾಲ್ ಪ್ರಕಾರ, ಕೊನೆಯ ಪ್ರಯಾಣಿಕರು ಒಳಹೋದ ನಂತರವೇ ವಿಮಾನವನ್ನು ಹತ್ತಲು ವಿಐಪಿಗಳನ್ನು ವಿಮಾನಯಾನ ಸಂಸ್ಥೆ ಕರೆಯುತ್ತದೆ. ರಾಜ್ಯಪಾಲರು ಬೆಂಗಾವಲು ವಾಹನದೊಂದಿಗೆ ವಿಮಾನ ನಿಲ್ದಾಣ ತಲುಪಲು 8 ನಿಮಿಷ ತೆಗೆದುಕೊಂಡಿತು. ವಿಮಾನದ ಮುಂದೆ ರಾಜ್ಯಪಾಲರು ತಮ್ಮ ಕಾರಿನಿಂದ ಇಳಿದಾಗ ಮಧ್ಯಾಹ್ನ 2.06 ಆಗಿತ್ತು. ವಿಮಾನದ ಬಾಗಿಲು ಇನ್ನೂ ತೆರೆದಿತ್ತು. ಆದರೂ, ರಾಜ್ಯಪಾಲರನ್ನು ವಿಮಾನ ಏರಲು ಅನುವು ಮಾಡಿಕೊಡಲಿಲ್ಲ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಇದಕ್ಕೆ ಸಾಕ್ಷಿಯಿವೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮರಾ ಅಳವಡಿಕೆ
“ಮೆಟ್ಟಿಲು ಏಣಿಯ ಬಳಿ ನಿಂತಿದ್ದಾಗ ವಿಮಾನದೊಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಅರೀಫುಲ್ಲಾ ಅವರು ರಾಜ್ಯಪಾಲರಿಗೆ ಹೇಳಿದಾಗ ನಮ್ಮ ಇಡೀ ತಂಡ ತಬ್ಬಿಬ್ಬಾಯಿತು. ರಾಜ್ಯಪಾಲರು ರಾಜ್ಯದ ಪ್ರಥಮ ಪ್ರಜೆ ಮತ್ತು ಸಾಂವಿಧಾನಿಕ ಮುಖ್ಯಸ್ಥರು ಅವರನ್ನು ಈ ರೀತಿ ಪರಿಗಣಿಸಲಾಗುವುದಿಲ್ಲ ಎಂದು ನಾವು ಅವರಿಗೆ ಹೇಳಿದೆವು. ಅರೀಫುಲ್ಲಾ ಅವರನ್ನು ವಿಮಾನ ನಿಲ್ದಾಣದಲ್ಲಿ ಅವರ ವ್ಯವಸ್ಥಾಪಕರನ್ನು ಸಂಪರ್ಕಿಸಲು ಕೇಳಿದೆವು. ಅವರು ಅದನ್ನು ನಿರಾಕರಿಸಿದರು. ರಾಜ್ಯಪಾಲರ ಆಗಮನದ ಕುರಿತು ವಿಮಾನಯಾನ ಸಿಬ್ಬಂದಿಗೆ ಸಂಪೂರ್ಣ ತಿಳಿದಿದ್ದರೂ ಈ ರೀತಿ ನಡೆದುಕೊಂಡಿರುವುದು ಬೇಸರ ತಂದಿದೆ. ವಿಐಪಿಗಳು ಬಂದಾಗ ವಿಮಾನ ಕಾಯಲೇಬೇಕು. ಇದು ಪ್ರೋಟೋಕಾಲ್ ಉಲ್ಲಂಘನೆಯಾಗಿದೆ. ವಿಐಪಿಗಳ ಪಟ್ಟಿಯಲ್ಲಿ ರಾಜ್ಯಪಾಲರು ನಾಲ್ಕನೇ ಸ್ಥಾನದಲ್ಲಿದ್ದಾರೆ” ಎಂದು ವೇಣುಗೋಪಾಲ್ ಹೇಳಿದರು.