ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ ಎಂಟು ಜನರು ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಶನಿವಾರ ಮುಂಜಾನೆ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟವುಂಟಾಗಿದ್ದು ಸಮೀಪದ ಹೋಟೆಲ್ ಕಟ್ಟಡ ಕುಸಿದು ಉಳಿದ ನಾಲ್ಕು ಕಟ್ಟಡಗಳು ಭಾಗಶಃ ಹಾನಿಯಾಗಿವೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ 12 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್: ಮೊಹರಂ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ 4 ಸಾವು
ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಮೊಹರಂ ಮೆರವಣಿಗೆಗೆ ತಯಾರಿ ನಡೆಸುತ್ತಿದ್ದಾಗ ಹೈಟೆನ್ಷನ್ ತಂತಿಯ ಸ್ಪರ್ಶದಿಂದ ನಾಲ್ವರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ.
ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 80 ಕಿಮೀ ದೂರದಲ್ಲಿರುವ ಪೆಟಾರ್‌ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಖೆಟ್ಕೊ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೆರವಣಿಗೆಯಲ್ಲಿ ಕಬ್ಬಿಣದಿಂದ ಮಾಡಲ್ಪಟ್ಟ ಧಾರ್ಮಿಕ ಧ್ವಜವು 11,000 ವೋಲ್ಟ್‌ಗಳ ಹೈಟೆನ್ಷನ್ ತಂತಿಗೆ ತಗುಲಿ ದುರಂತ ಸಂಭವಿಸಿದೆ ಎಂದು ಬೊಕಾರೊ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯದರ್ಶಿ ಅಲೋಕ್ ತಿಳಿಸಿದ್ದಾರೆ.
ಎಲ್ಲ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಭಾರತದ ಅಕ್ಕಿ ರಫ್ತು ನಿಷೇಧ ಮತ್ತು ಜಾಗತಿಕ ಪರಿಣಾಮಗಳು
ಮಹಾರಾಷ್ಟ್ರದಲ್ಲಿ ಬಸ್‌ಗಳ ಡಿಕ್ಕಿಯಿಂದ 6 ಸಾವು
ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಿನ್ನೆ(ಜುಲೈ 29) ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.
ಮಲ್ಕಾಪುರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 53ರ ನಂದೂರ್ ನಾಕಾ ಮೇಲ್ಸೇತುವೆಯ ಬಳಿ ಬೆಳಗಿನ ಜಾವ 2.30ರ ಸುಮಾರಿಗೆ ಮುಂದೆ ಹೋಗುತ್ತಿದ್ದ ಬಸ್‌ಗೆ ಹಿಂದೆ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಬಾಲಾಜಿ ಟ್ರಾವೆಲ್ಸ್ ಹೆಸರಿನ ಕಂಪನಿಯ ಒಡೆತನದ ಬಸ್‌ಗಳಲ್ಲಿ ಒಂದು ಅಮರನಾಥ ಯಾತ್ರೆಯಿಂದ ಹಿಂಗೋಲಿ ಜಿಲ್ಲೆಗೆ ಮರಳುತ್ತಿದ್ದರೆ, ಇನ್ನೊಂದು ರಾಯಲ್ ಟ್ರಾವೆಲ್ಸ್ ಕಂಪನಿಯ ಮಾಲೀಕತ್ವದ ಬಸ್ ನಾಸಿಕ್‌ಗೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಇನ್ನೊಂದನ್ನು ಹಿಂದಿಕ್ಕುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಸುಮಾರು 20 ಮಂದಿಯನ್ನು ಬುಲ್ಧಾನಾದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳಾದ 32 ಪ್ರಯಾಣಿಕರಿಗೆ ಸಮೀಪದ ಗುರುದ್ವಾರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.