ಆನ್ ಲೈನ್ ಗೇಮ್ ಆಟದ ಚಟಕ್ಕೆ ಬಿದ್ದು ಹಲವಾರು ಮಂದಿ ಹಣ ಕಳೆದುಕೊಂಡು ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ ದಾವಣಗೆರೆಯಲ್ಲಿ ಯುವಕನೋರ್ವ ಆನ್ಲೈನ್ ಗೇಮಿಂಗ್ ಮೋಸಕ್ಕೆ ಬಲಿಯಾಗದ್ದಾನೆ. ಇದಕ್ಕೆ ನಿಯಂತ್ರಣ ಹೇರಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕೂಡಲೇ ಆನ್ ಲೈನ್ ಗೇಮ್ ನಿಷೇಧಿಸಬೇಕು ಎಂದು ದಾವಣಗೆರೆ ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಒತ್ತಾಯಿಸಿದ್ದಾರೆ.
ಆನ್ಲೈನ್ ಗೇಮಿಂಗ್ ನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮಾತನಾಡಿದ ಅವರು, “ಅನೇಕ ಯುವಕರು ಈಗಾಗಲೇ ಆನ್ ಲೈನ್ ಗೇಮ್, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಇತರೆ ಜೂಜಾಟಗಳ ಚಟಕ್ಕೆ ಬಿದ್ದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಬಿಗಿಯಾದ ಕ್ರಮ ಜರುಗಿಸಬೇಕು. ಯುವಪೀಳಿಗೆಯವರು ದುಶ್ಚಟಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಾರೆ. ಸಾಲ ಮಾಡಿ ಜೂಜಾಡಿ ಸಾಲ ಮಾಡಿಕೊಳ್ಳುತ್ತಾರೆ. ತೀರಿಸಲು ಸಾಧ್ಯವಾಗದೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಮತ್ತಷ್ಟು ಮಂದಿ ಬಲಿಯಾಗುತ್ತಾರೆ. ಇದಕ್ಕೆ ಆಸ್ಪದ ಕೊಡಬಾರದು” ಎಂದು ಮನವಿ ಮಾಡಿದ್ದಾರೆ.

“ದಾವಣಗೆರೆಯಲ್ಲಿ ಆನ್ ಲೈನ್ ಗೇಮ್ ಗೆ ಶಶಿಕುಮಾರ ಎಂಬ ಯುವಕ ಬಲಿಯಾಗಿದ್ದಾನೆ. ಹದಿನೆಂಟು ಲಕ್ಷ ರೂಪಾಯಿ ಸಾಲ ಮಾಡಿದ್ದು, 19 ಕೋಟಿ ರೂಪಾಯಿ ಹಣ ಬಂದಿದ್ದರೂ ವೆಬ್ ಸೈಟ್ ನವರು ನೀಡಿಲ್ಲ ಎಂದು ಆರೋಪ ಮಾಡಿದ್ದಾನೆ. ಇಂಥ ಯುವಕರು ದಿನೇ ದಿನೇ ಬಲಿಯಾಗುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆನ್ಲೈನ್ ಗೇಮಿಂಗ್ ಗೆ ಯುವಕ ಬಲಿ; ಕ್ರಮಕ್ಕೆ ಡೆತ್ ನೋಟಿನಲ್ಲಿ ಸಿಎಂ, ಡಿಸಿಎಂ, ಸಂಸದೆ, ನ್ಯಾಯಾಧೀಶರಿಗೆ ಮನವಿ
“ಹಣ ಪಡೆಯುವುದಷ್ಟೇ ಆನ್ ಲೈನ್ ಗೇಮ್ ಜೂಜಾಟ ನಡೆಸುವ ನಕಲಿ ವೆಬ್ ಸೈಟ್ ಗಳದ್ದಾಗಿದೆ. ಯುವಕರಿಗೆ ಪೊಲೀಸ್ ಇಲಾಖೆಯು ಜಾಗೃತಿ ಮೂಡಿಸುತ್ತಿದ್ದರೂ, ಇಂಥ ಗೀಳಿಗೆ ಬಿದ್ದು ಸಾವು ಕಾಣುತ್ತಿದ್ದಾರೆ. ಪೋಷಕರೂ ಸಹ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಇಂಥ ಆನ್ ಲೈನ್ ಗೇಮ್ ನಡೆಸುವ ನಕಲಿ ವೆಬ್ ಸೆಟ್ ಗಳ ಮಾಲೀಕರ ಬಂಧಿಸಬೇಕು. ಅನುಮತಿ ಕೊಟ್ಟಿದ್ದರೆ ಕೂಡಲೇ ರದ್ದುಪಡಿಸಬೇಕು” ಎಂದು ಮೊಹಮ್ಮದ್ ಜಿಕ್ರಿಯಾ ಆಗ್ರಹಿಸಿದ್ದಾರೆ.