ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಬೇಕು ಹಿಂದಿ ಭಾಷೆ ಬೇಡ. ಕನ್ನಡವನ್ನು ಪ್ರಥಮ ಭಾಷೆಯಾಗಿ, ಆಂಗ್ಲ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಜಾರಿಗೆ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಂಕ್ರಪ್ಪ ಅಂಗಡಿ ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದಿಂದ ಕನ್ನಡ ಶಿಕ್ಷಣ ಪಠ್ಯಕ್ರಮದಲ್ಲಿ ಹಿಂದಿಭಾಷೆ ಕಡ್ಡಾಯಗೊಳಿಸಿರುವುದನ್ನು ರದ್ದುಗೊಳಿಸಿ ಹಾಗೂ ದ್ವಿಭಾಷಾ ನೀತಿ ಜಾರಿಗೆ ತರಬೇಕೆಂದು ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಶಂಕ್ರಪ್ಪ ಅಂಗಡಿ ಮಾತನಾಡಿ, “ತೃತೀಯ ಭಾಷೆಯಾದ ಹಿಂದಿಯು ಕರ್ನಾಟಕದ ವಿದ್ಯಾರ್ಥಿಗಳಿಗೆ ಅನಗತ್ಯವಾದ ಒತ್ತಡವನ್ನು ಒಡ್ಡುತ್ತಿದೆ. ದ್ವಿಭಾಷಾ ನೀತಿ ಜಾರಿಯಾಗಲಿ. ಇಂಗ್ಲೀಷ್ ಭಾಷೆ ಜಾಗತಿಕ ಭಾಷೆಯಾಗಿದ್ದು, ವ್ಯಾವಹಾರಿಕ ಭಾಷೆ ಕನ್ನಡಿಗರಿಗೆ ಅನಿವಾರ್ಯ. ರಾಜ್ಯ ಶಿಕ್ಷಣ ಪಠ್ಯಕ್ರಮದಲ್ಲಿ ಓದುವ ಮಕ್ಕಳು ಮೂರನೇ ಭಾಷೆಯಾಗಿ ಹಿಂದಿ ಕಲಿಯುವುದು ಕಡ್ಡಾಯವಾಗಿದೆ. ಮಾತ್ರವಲ್ಲ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ನೂರು ಅಂಕಗಳಿಗೆ ಹಿಂದಿ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 90,794 ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಇದು ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 21 ರಷ್ಟಿದೆ. 2025ರಲ್ಲಿ ಈ ಸಂಖ್ಯೆ 1.2 ಲಕ್ಷಕ್ಕಿಂತ ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದೆ. ಹಿಂದಿ ಕಡ್ಡಾಯ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಶೈಕ್ಷಣಿಕ ಹೊರೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹಿಂದಿ ಹೇರಿಕೆಗೆ ಕನ್ನಡದ ಮಕ್ಕಳ ಭವಿಷ್ಯ ಬಲಿಯಾಗುತ್ತಿರುವುದು ದುರಂತ” ಎಂದು ಕಳವಳ ವ್ಯಕ್ತಪಡಿಸಿದರು.
ಕರವೇ ರಾಜ್ಯ ಉಪಾಧ್ಯಕ್ಷ ಚಾನಾಳ ಶೇಖರ್ ಮಾತನಾಡಿ, “ತ್ರಿಭಾಷಾ ಸೂತ್ರದ ಕುರಿತು ರಾಷ್ಟಕವಿ ಕುವೆಂಪುರವರು ಹಿಂದೆಯೇ ತೀಕ್ಷ್ಣವಾದ ವಿರೋಧವನ್ನು ಸಾರಿದ್ದರು. ‘ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ, ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ ।
ಚೂರು ತಿಂಡಿಗೆ ಸಿಕ್ಕಿಸಿದರೊ ಈ ಮೂರು ಗಾಳ, ನುಂಗದಿದ್ದರೆ ಹಸಿವೆ: ನುಂಗಿದರೆ ಪ್ರಾಣ ಶೂಲ,’ ಎಂದು. ಕನ್ನಡದ ಸಾಂಸ್ಕೃತಿಕ ಮತ್ತು ಭಾಷಿಕ ಆಸ್ಮಿತೆಯಲ್ಲಿ ಈ ನೆಲದ ನುಡಿಯಾದ ಕನ್ನಡವು ಕೇಂದ್ರ ಸ್ಥಾನವನ್ನು ಹೊಂದಿದೆ. ಬದಲಾದ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆಯು ಜಾಗತಿಕ ವ್ಯವಹಾರಗಳಿಗೆ, ಉನ್ನತ ಶಿಕ್ಷಣ ಹಾಗೂ ವೃತ್ತಿ ನಿರ್ವಹಣೆಗೆ ಅಗತ್ಯವಾಗಿದ್ದು, ಇದನ್ನು ಕಲಿಯುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ. ಆದರೆ, ಹಿಂದಿಯನ್ನು ಕಡ್ಡಾಯವಾಗಿ ಓದಿಸುವುದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಯಾವುದೇ ಗಮನಾರ್ಹ ಲಾಭವಿಲ್ಲ. ತ್ರಿಭಾಷಾ ನೀತಿಯಿಂದ ಕರ್ನಾಟಕಕ್ಕೆ ಯಾವ ಲಾಭವೂ ಇಲ್ಲ. ಇದರಿಂದ ಒಬ್ಬನೇ ಒಬ್ಬ ಕನ್ನಡಿನಿಗೂ ಉದ್ಯೋಗ ದೊರೆತಿಲ್ಲ” ಎಂದರು.
ಇದನ್ನೂ ಓದಿ: ಬಳ್ಳಾರಿ | ಖರೀದಿ ಕೇಂದ್ರದ ಜೋಳವನ್ನು ಶೀಘ್ರ ಸಾಗಾಣಿಕೆ ಮಾಡಿ: ಮೆಣಸಿನ ಈಶ್ವರಪ್ಪ
“ತಮಿಳುನಾಡು 1968ರಿಂದಲೇ ತ್ರಿಭಾಷಾ ನೀತಿಯನ್ನು ತಿರಸ್ಕರಿಸಿ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳನೊಳಗೊಂಡ ದ್ವಿಭಾಷಾ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇತ್ತೀಚೆಗೆ. ಮಹಾರಾಷ್ಟ್ರ ಸರ್ಕಾರವು ಸಹ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಡ್ಡಾಯಗೊಳಿಸುವ ನಿರ್ಧಾರವನು, ಕೈಗೊಂಡಿದೆ. ಈ ರಾಜ್ಯಗಳು ತಮ್ಮ ಭಾಷಿಕ ಗುರುತನ್ನು ರಕ್ಷಿಸುವುದರ ಜೊತೆಗೆ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡಿವೆ. ಕರ್ನಾಟಕವು ಈ ಉದಾಹರಣೆಗಳಿಂದ ಸ್ಫೂರ್ತಿಯನ್ನು ಪಡೆದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಆದ್ಯತೆ ನೀಡುವ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ಕೆ.ಎಂ ಶಿವಕುಮಾರ್, ಕೊಳೂರು ತಿಪ್ಪಾರೆಡ್ಡಿ, ಹುಬ್ಬಳ್ಳಿ ರಾಜು, ಆನಂದಗೌಡ್, ಸೋಮಶೇಖರ್, ತೆಕ್ಕಲಕೋಟೆ ಬಸವರಾಜ್, ವಿರೇಶ, ದಿವಾಕರ, ಪಂಪನಗೌಡ, ಚಾಂದ್ ಭಾಷಾ, ರಾಜೇಶ್, ಶಿವಕುಮಾರ್, ತಿಪ್ಪೇಶ್, ವಿನೋದ್, ಮಂಜು, ಹಾಗೂ ಇತರರು ಉಪಸ್ಥಿತರಿದ್ದರು.