ಹಿಂದೂ- ಮುಸ್ಲಿಂ ಸಾಮರಸ್ಯ ಸಾರುವ ಹಬ್ಬ ‘ಮೊಹರಂ’. ಆದರೆ ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಹಬ್ಬವನ್ನು ಆಚರಣೆ ಮಾಡುವುದನ್ನು ನೋಡಿದ್ದಾರಾ ಅಥವಾ ಕೇಳಿದ್ದೀರಾ!? ಈ ಊರಲ್ಲಿ ಒಂದೇ ಒಂದು ಮುಸ್ಲಿಂ ಸಮುದಾಯದ ಕುಟುಂಬದವರೇ ಇಲ್ಲ. ಆದರೆ ಮೊಹರಂ ಹಬ್ಬವನ್ನು ಹಿಂದೂಗಳೇ ಸೇರಿ ಆಚರಿಸುತ್ತಾರೆ. ಮುಸ್ಲಿಂ ಸಂಪ್ರದಾಯದಂತೆಯೇ ಈ ಊರಲ್ಲಿ ಹಿಂದೂಗಳು ಮೊಹರಂ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿ ಸೌಹಾರ್ದತೆಯನ್ನು ಸಾರುತ್ತಾರೆ ಇಲ್ಲಿಯ ಜನರು.
ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕೋಣನತಂಬಿಗೆ ವಿಶಿಷ್ಟ ಗ್ರಾಮವಾಗಿದೆ. ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಒಂದೇ ಒಂದು ಕುಟುಂಬ ಇಲ್ಲ. ಹಿಂದೂಗಳೇ ಮೊಹರಂ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಅಲಾಯಿ ದೇವರ ಪ್ರತಿಷ್ಠಾಪನೆ, ಮೆರವಣಿಗೆ, ಮೊಹರಂ ಆಚರಣೆಯ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಗ್ರಾಮದ ಹಿಂದೂಗಳೇ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸುತ್ತಾರೆ.

ಇಡೀ ಗ್ರಾಮದಲ್ಲಿ ಸುಮಾರು ಮೂರು ಸಾವಿರ ಜನರಿದ್ದಾರೆ. ಎಲ್ಲ ಹಿಂದೂ ಜಾತಿಯ ಸಮುದಾಯದವರು ವಾಸ ಮಾಡುತ್ತಾರೆ. ಆದರೆ, ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ. ನೂರಾರು ವರ್ಷಗಳಿಂದ, ಪೂರ್ವಿಕರ ಕಾಲದಿಂದಲೂ ಹಿಂದೂಗಳೇ ಮೊಹರಂ ಹಬ್ಬವನ್ನು ಆಚರಿಸುತ್ತಾ ಬಂದಿದ್ದು, ಸರ್ವ ಜನಾಂಗದ ಶಾಂತಿಯ ತೋಟ ಇಲ್ಲಿ ಕಂಡು ಬರುತ್ತದೆ.
ಗ್ರಾಮದಲ್ಲಿ ವಿಶೇಷತೆ ಎಂದರೆ ಹಿಂದೂ ಮುಸ್ಲಿಂ ಸಾಮರಸ್ಯದ ಸಾಕ್ಷಿ ಎಂಬಂತೆ ಯಮನೂರು ಒಡೆಯ ದೇವಸ್ಥಾನವಿದೆ. ದೇವಸ್ಥಾನದಲ್ಲಿ ಲಾಲ್‌ಸಾಬ್, ಚಾಂದ್‌ಲಾಲ್ ಹಾಗೂ ಹುಸೇನ್ ಪೀರಲು ದೇವರನ್ನು ಮೊಹರಂ ಹಬ್ಬದಲ್ಲಿ ಹಿಂದೂಗಳೇ ಸೇರಿ ಅಲಂಕಾರ ಮಾಡುತ್ತಾರೆ. ಕಳೆದ ನಾಲ್ಕು ದಿನಗಳಿಂದ ವಿಶೇಷ ಪೂಜೆ, ಪುನಸ್ಕಾರ, ಪ್ರಸಾದ ವಿತರಣೆಯನ್ನು ಹಿಂದೂಗಳೇ ಮಾಡುತ್ತಿದ್ದಾರೆ. ಪಕ್ಕದ ಯಲಗಚ್ಚ ಗ್ರಾಮದ ಮುಸ್ಲಿಂ ಸಮುದಾಯದ ವ್ಯಕ್ತಿ ಸಕ್ಕರೆ, ಬೆಲ್ಲ ಹೂದಿಕೆ ಮಾಡಿ ಇಲ್ಲಿಗೆ ಕಳುಹಿಸುತ್ತಾರೆ.

ಇದನ್ನೂ ಓದಿರಿ: ಚಿಕ್ಕಬಳ್ಳಾಪುರ | ಅಲಿಪುರ ಗ್ರಾಮದಲ್ಲಿ ಅದ್ದೂರಿ ಮೊಹರಂ ಆಚರಣೆ
ಕತ್ತಲ ರಾತ್ರಿಯ ದಿನ ಅಲಾಯಿ ಪದಗಳನ್ನು ಹಾಡುತ್ತಾರೆ. ಆಲೀ ಹೆಜ್ಜೆಗಳನ್ನು ಹಾಕುತ್ತಾರೆ. ದೇವರುಗಳು ಹೊಳೆಗೆ ಹೋಗುವ ದಿನ ದೇವರುಗಳನ್ನು ಹಿಂದೂಗಳೇ ಹೊತ್ತುಕೊಂಡು ಊರಲ್ಲಿ ಹೆಜ್ಜೆ ಮೇಳದೊಂದಿಗೆ ಮೆರವಣಿಗೆ ಹೊರಡುತ್ತಾರೆ. ಸಂಜೆ ವೇಳೆ ದೇವರು ಅಲೆಕುಣಿಯಲ್ಲಿ ಕೆಂಡ ತುಳಿಯುವ ಕಾರ್ಯ ವಿಶೇಷವಾಗಿಯೇ ನಡೆಯುತ್ತದೆ. ನಂತರದಲ್ಲಿ ದೇವರುಗಳನ್ನು ಹೊಳೆಗೆ ಕಳುಹಿಸಿ, ಮನೆಗೆ ಬಂದು ಜನರೆಲ್ಲ ದೇವರಿಗೆ ಭಕ್ತಿಯಿಂದ ಜಂಗೇವು ಎಡೆ ಇಟ್ಟು ಸೇವಿಸುತ್ತಾರೆ.
ಮೊಹರಂ ಹಬ್ಬದ ದೇವರುಗಳ ಹಿಂದೂ ಪೂಜಾರಿ ಪುಂಡಲೀಕಪ್ಪ ಮಂಗಲೇಕಾರ ಮಾತನಾಡಿ, “ಯಾವುದೇ ಜಾತಿ ತಾರತಮ್ಯ ಇಲ್ಲದೆ, ನಮ್ಮೂರಿನಲ್ಲಿ ಎಲ್ಲ ಜಾತಿಯವರು ಸೇರಿಕೊಂಡು ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ನಾವು ಕೂಡ ಮೊಹರಂ ಹಬ್ಬವನ್ನು ಸಂಭ್ರಮದಿಂದ ಮುಂದುವರಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್, ತ್ರಿವಳಿ ತಲಾಖ್, ಸಂತೆಯಲ್ಲಿ ವ್ಯಾಪಾರ ನಿಷೇಧ..ಹೀಗೆ ಕಳೆದ ಕೆಲವು ವರ್ಷಗಳಲ್ಲಿ ಅದೆಷ್ಟೋ ವಿವಾದಗಳನ್ನು ರಾಜ್ಯ ಕಂಡಿದೆ. ಹಿಂದೂ – ಮುಸ್ಲಿಂ ಧಾರ್ಮಿಕ ಭಾವೈಕ್ಯತೆ ಕ್ಷೀಣಿಸುತ್ತಿದೆ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಆದರೂ ನಗರದ ಜನರಿಗಿಂತಲೂ ಹೃದಯವಂತ ಹಳ್ಳಿ ಜನರು ತಮ್ಮ ಮನೆ ಮನದಲ್ಲಿ ಧಾರ್ಮಿಕ ಭಾವೈಕ್ಯತೆಯನ್ನು ಕಾಪಿಟ್ಟುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಹಾವೇರಿ ತಾಲೂಕಿನ ಕೋಣನತಂಬಿಗೆ ಗ್ರಾಮ ನಿಂತಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.