ರಾಷ್ಟ್ರರಾಜಕಾರಣಕ್ಕೆ ಸಿದ್ದು ಕರೆತರಲು ಪೂರ್ವ ತಯಾರಿ, ಒಬಿಸಿ ನಾಯಕತ್ವಕ್ಕೆ ಎಐಸಿಸಿಯ ಹೊಸ ಚಹರೆ?

Date:

Advertisements
ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಗಡಿಗಳನ್ನು ಮೀರಿದ ಅಸ್ತಿತ್ವ ಉಂಟು. ಅವರ 'ಅಹಿಂದ' ವರ್ಚಸ್ಸನ್ನು ದೇಶಾದ್ಯಂತ ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯೊಂದು ಅಸ್ತಿತ್ವಕ್ಕೆ ಬರುತ್ತಿದೆ. ಇದರ ಉನ್ನತ ಜವಾಬ್ದಾರಿ ಸಿದ್ದರಾಮಯ್ಯ ಅವರ ಹೆಗಲೇರಲಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ತಡವಾಗಿಯಾದರೂ ಸಿದ್ದರಾಮಯ್ಯ ವಿಚಾರದಲ್ಲಿ ಕಣ್ಣು ಬಿಟ್ಟಂತೆ ಕಾಣುತ್ತಿದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯೊಂದು ಅಸ್ತಿತ್ವಕ್ಕೆ ಬರುತ್ತಿದ್ದು, ಇದರ ಉನ್ನತ ಜವಾಬ್ದಾರಿ ಸಿದ್ದರಾಮಯ್ಯ ಅವರ ಹೆಗಲೇರಲಿದೆ.

ರಾಷ್ಟ್ರಮಟ್ಟದ ಕಾಂಗ್ರೆಸ್ ಘಟಾನುಘಟಿ ಒಬಿಸಿ ನಾಯಕರು ಈ ಮಂಡಳಿಯಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹಲೊಟ್, ಭೂಪೇಶ್ ಬಘೇಲ್, ವಿ.ನಾರಾಯಣಸ್ವಾಮಿ, ವೀರಪ್ಪ ಮೊಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದಶಕಗಟ್ಟಲೆ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಿರುವ ಬಿ.ಕೆ.ಹರಿಪ್ರಸಾದ್, ಕೇಂದ್ರ ಮಂತ್ರಿಗಳಾಗಿದ್ದ ಶ್ರೀಕಾಂತ ಜೇನ, ಸಚಿನ್ ಪೈಲಟ್ ಮೊದಲಾದ ಮಾಜಿ ಕೇಂದ್ರ ಮಂತ್ರಿಗಳು ಸಿದ್ದರಾಮಯ್ಯ ಅಧ್ಯಕ್ಷತೆಯ ಮಂಡಳಿಯ ಸದಸ್ಯರಾಗಿರುವುದು ಗಮನಾರ್ಹ.

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಜನನಾಯಕರಾಗಿ ಗುರುತಿಸಿಕೊಂಡವರು. ಜೆಡಿಎಸ್‌ನಲ್ಲಿದ್ದಾಗ ‘ಅಹಿಂದ’ ಹುಟ್ಟುಹಾಕಿ, ಮೂಂಚೂಣಿ ನಾಯಕರಾಗಿ ಹೊರಹೊಮ್ಮಿದವರು. ಅಹಿಂದ ಬಲದಿಂದ ಕಾಂಗ್ರೆಸ್‌ ಸೇರಿದ ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿಯೂ ಮುಖ್ಯಮಂತ್ರಿ ಪದವಿ ಒಲಿದು ಬಂದಿರುವದು ಅವರ ನಾಯಕತ್ವದ ಶಕ್ತಿ. ಆದರೆ, ಕಾಂಗ್ರೆಸ್‌ ಸೇರಿದ ಮೇಲೆ ಸಿದ್ದರಾಮಯ್ಯ ಅವರ ‘ಅಹಿಂದ’ ನಾಯಕತ್ವದ ಚಹರೆಗೆ ಹಿಂದಿನ ಹೊಳಪು ಮತ್ತೆ ಸಿಗಲೇ ಇಲ್ಲ.

Advertisements

ರಾಜ್ಯದಲ್ಲಿ ದೇವರಾಜ ಅರಸು ನಂತರ ಅಹಿಂದ ವರ್ಗದ ಏಕಮೇವ ನಾಯಕರಾಗಿ ಸಿದ್ದರಾಮಯ್ಯ ಹೊರಹೊಮ್ಮಿ, ಅವರ ಪರಂಪರೆಯಲ್ಲಿ ಮುಂದುವರಿಯುತ್ತಿದ್ದಾರೆ. ಜೊತೆಗೆ ದೇವರಾಜ ಅರಸು ಅವರು 7 ವರ್ಷ 7 ತಿಂಗಳು ಸುದೀರ್ಘ ಅವಧಿಯವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿದ್ದರು. ಇವರಷ್ಟು ಸುದೀರ್ಘ ಅವಧಿಯವರೆಗೆ ಸಿಎಂ ಆಗಿದ್ದವರು ಯಾರೂ ಇಲ್ಲ. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಅರಸು ದಾಖಲೆ ಮುರಿಯುವತ್ತ ಹೆಜ್ಜೆ ಇಟ್ಟಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪದವಿ ಶಾಶ್ವತವಲ್ಲ. ಮುಂದೊಂದು ದಿನ ಸಿಎಂ ಗದ್ದುಗೆಯಿಂದ ಅವರು ಕೆಳಗಿಳಿಯಬೆಕು. ಅವರ ಸ್ಥಾನಕ್ಕೆ ಇನ್ನೊಬ್ಬರು ಬರಲೇಬೇಕು. ಆದರೆ, ಮುಂದೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಕಾಂಗ್ರೆಸ್‌ನಲ್ಲಿ‌ ಯಾವ ಜವಾಬ್ದಾರಿ ನಿಭಾಯಿಸಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರವಾಗಿ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಜವಾಬ್ದಾರಿಯ ಬಾಗಿಲೊಂದನ್ನು ಸಿದ್ದರಾಮಯ್ಯ ಅವರಿಗೆ ವರಿಷ್ಠರು ಈಗಲೇ ತೆರೆದಿದ್ದಾರೆ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಈಗಾಗಲೆ ಎಐಸಿಸಿ ಅಧ್ಯಕ್ಷರು. ಹಿಂದುಳಿದ ವರ್ಗದ ಚಹರೆಯಾಗಿ ರಾಷ್ಟ್ರಮಟ್ಟದಲ್ಲಿ ಸಿದ್ದರಾಮಯ್ಯ ಹೊರಹೊಮ್ಮುವ ಇಂಗಿತವಿದು.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಸ್ತಿತ್ವಕ್ಕೆ ಬರುತ್ತಿದೆ. ಇದು ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯಕ್ಕೆ ಆನೆ ಬಲ ತುಂಬಲಿದೆ.

ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿ ಗುರುತಿಸಿಕೊಂಡಿದ್ದರೂ ಅವರಿಗೆ ಹಾರ್ಡ್‌ಕೋರ್‌ ಹಿಂದುತ್ವವಾದಿ ಲೇಪನವಿದೆ. ಆದರೆ ಸಿದ್ದರಾಮಯ್ಯ ಜಾತ್ಯತೀತ ನಾಯಕರಾಗಿ, ಪ್ರಜಾಪ್ರಭುತ್ವವಾದಿಯಾಗಿ ಗುರುತಿಸಿಕೊಂಡವರು. ಹೀಗಾಗಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಮುನ್ನುಗ್ಗಲು ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಜವಾಬ್ದಾರಿ ಭೂಮಿಕೆಯಾಗಲಿದೆ. ಸಿದ್ದರಾಮಯ್ಯ ಅವರನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್‌ ತಡವಾಗಿಯಾದರೂ ಕಣ್ಣು ತೆರೆದಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ‘ಅಚ್ಛೇ ದಿನ’ದಲ್ಲಿ ಸಾಮಾನ್ಯರಿಗೆ ಸಾಲದ ಹೊರೆ

ಸಿದ್ದರಾಮಯ್ಯ ಅವರಿಗೆ ಇಂಗ್ಲಿಷ್‌ ಭಾಷೆ ಮೇಲೆ ಹಿಡಿತವಿದೆ. 16 ರಾಜ್ಯ ಬಜೆಟ್‌ ಮಂಡಿಸಿದ ದಾಖಲೆಯೂ ಅವರಿಗಿದೆ. ಆರ್ಥಿಕ ವಿಚಾರದಲ್ಲಿ ತಜ್ಞರಂತೆ ಮಾತನಾಡುತ್ತಾರೆ. ಅಂಕಿ-ಅಂಶಗಳನ್ನು ಯಾವ ದಾಖಲೆ ಇಲ್ಲದೇ ತುದಿ ನಾಲಿಗೆಯಲ್ಲಿ ಹೇಳಬಲ್ಲರು. ಹಿಂದಿ ಭಾಷೆ ಮೇಲೆ ಅಷ್ಟು ಹಿಡಿತ ಇಲ್ಲ ಎಂಬುದು ಬಿಟ್ಟರೆ ರಾಷ್ಟ್ರೀಯ ರಾಜಕಾರಣಕ್ಕೆ ಸಿದ್ದರಾಮಯ್ಯ ಸಲ್ಲುವ ನಾಯಕ.

ಸಿದ್ದರಾಮಯ್ಯ ಬಣದ ನಾಯಕರು ದಾವಣಗೆರೆಯಲ್ಲಿ ಅವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ಅಮೃತ ಮಹೋತ್ಸವ’ಕ್ಕೆ (ಸಿದ್ದರಾಮೋತ್ಸ) ಜನಸಾಗರವೇ ಹರಿದುಬಂದಿತ್ತು. ಇಡೀ ದೇಶದಲ್ಲಿ ಅಷ್ಟು ಜನಸಂಖ್ಯೆ ಬೇರಾವ ನಾಯಕರಿಗೂ ಜಮಾಯಿಸಿರಲಿಲ್ಲ. ಸುಮಾರು 15 ಲಕ್ಷ ಅಭಿಮಾನಿಗಳು ಸಿದ್ದು ಜನ್ಮದಿನಕ್ಕೆ ಹಾಜರಿದ್ದರು. ಇದನ್ನು ಕಂಡ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯೇ ದಂಗಾಗಿದ್ದರು.

ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಗಡಿಗಳನ್ನು ಮೀರಿದ ಅಸ್ತಿತ್ವ ಉಂಟು. ಅವರ ‘ಅಹಿಂದ’ ವರ್ಚಸ್ಸನ್ನು ದೇಶಾದ್ಯಂತ ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ರಾಷ್ಟ್ರೀಯ ಮಂಡಳಿಯ ಚುಕ್ಕಾಣಿಯನ್ನು ಸಿದ್ದರಾಮಯ್ಯ ಅವರಿಗೆ ನೀಡುವ ಮೂಲಕ ದೇಶಾದ್ಯಂತ ಒಬಿಸಿ ಮತಗಳನ್ನು ಗುರಿಯಾಗಿಸಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಕಟ್ಟತೊಡಗಿರುವ ದಿಟ್ಟ ಪ್ರತ್ಯುತ್ತರ ಎಂದೇ ವಿಶ್ಲೇಷಿಸಲಾಗುತ್ತಿದೆ. ದೇಶದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕೂಲಂಕಷವಾಗಿ ಅರಿತು, ಅವುಗಳಿಗೆ ಪರಿಹಾರ ಒದಗಿಸುವ ದಿಕ್ಕಿನಲ್ಲಿ ಕಾರ್ಯತಂತ್ರ ರೂಪಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ಸಲಹಾ ಮಂಡಳಿಯೊಂದನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.

ಮಂಡಳಿಯಲ್ಲಿ 24 ಸದಸ್ಯರು

ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಮುಂದಿನ ಕಾರ್ಯಯೋಜನೆಗಳು, ಅವುಗಳ ಅನುಷ್ಠಾನ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಕುರಿತು ಈ ಸಲಹಾ ಮಂಡಳಿಯು ಸಲಹೆಗಳನ್ನು ನೀಡಲಿದೆ. ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 24 ಸದಸ್ಯರಿರುವ ಈ ಸಲಹಾ ಮಂಡಳಿಯನ್ನು ಸಿದ್ದರಾಮಯ್ಯ ಮುನ್ನಡೆಸಲಿದ್ದಾರೆ.

ಸಮಕಾಲೀನ ಸಂದರ್ಭದಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕರಾಗಿರುವ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಬಳಸಿಕೊಂಡು ದೇಶದಾದ್ಯಂತ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್‌ ಈ ಮಂಡಳಿ ರಚಿಸಿದೆ. ದೇಶದಾದ್ಯಂತ ಹಿಂದುಳಿದ ವರ್ಗಗಳ ಸಮಸ್ಯೆ, ಸವಾಲುಗಳನ್ನು ಅರಿತು ಸಲಹೆ ನೀಡುವುದರ ಜೊತೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಮಂಡಳಿ ಸಲಹೆಗಳನ್ನು ನೀಡಲಿದೆ.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ರಚನೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಅನುಮೋದಿಸಿದ್ದಾರೆ. ರಾಜ್ಯದ ಕಾಂಗ್ರೆಸ್‌ ನಾಯಕರ ಪೈಕಿ ಸಿದ್ದರಾಮಯ್ಯ ಅವರೊಂದಿಗೆ ಹಿಂದುಳಿದ ವರ್ಗಗಳ ಇತರೆ ಚಹರೆಗಳಾದ ಹರಿಪ್ರಸಾದ್‌ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಕೂಡ ಮಂಡಳಿಯಲ್ಲಿದ್ದಾರೆ.

ಜುಲೈ 15ಕ್ಕೆ ಮೊದಲ ಸಭೆ

ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ಮುಂದಾಗಿದೆ. ಜುಲೈ 15ರಂದು ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿನ ಭಾರತ್‌ ಜೋಡೊ ಭವನದಲ್ಲಿ ಮಂಡಳಿಯ ಮೊದಲ ಸಭೆ ನಡೆಯಲಿದೆ. ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಆಹ್ವಾನ ನೀಡಲಾಗಿದೆ. ಐವರು ಮಾಜಿ ಮುಖ್ಯಮಂತ್ರಿಗಳು, ಹತ್ತು ಮಂದಿ ಕೇಂದ್ರದ ಮಾಜಿ ಸಚಿವರು ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿಯವರ ಜೊತೆ ಸಮಾಲೋಚಿಸಿದ ಬಳಿಕ ಮಂಡಳಿಯ ಸದಸ್ಯರು ಸಭೆಯ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಮಾಡಿರುವ ಸಲಹಾ ಮಂಡಳಿಯ ಸದಸ್ಯರಾಗಿರುವ ವಿಧಾನ ಪರಿಷತ್‌ ಸದಸ್ಯ, ಹರಿಯಾಣ ಕಾಂಗ್ರೆಸ್‌ನ ಎಐಸಿಸಿ ಉಸ್ತುವಾರಿಯಾಗಿರುವ ಬಿ.ಕೆ. ಹರಿಪ್ರಸಾದ್‌ ಅವರು ಸಭೆಗೆ ಆಗಬೇಕಿರುವ ಪೂರಕ ಸಿದ್ಧತೆ ಕುರಿತು ಚರ್ಚಿಸಿದ್ದಾರೆ.

ಈ ಸಭೆ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದಿಸೆಯಲ್ಲಿ ಐತಿಹಾಸಿಕ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಎಐಸಿಸಿ ರಚಿಸಿರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ

ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್‌, ಅಶೋಕ್‌ ಗೆಹಲೋಟ್‌, ಭೂಪೇಶ್‌ ಬಘೇಲ್‌, ವಿ. ನಾರಾಯಣಸ್ವಾಮಿ, ಸಚಿನ್‌ ಪೈಲಟ್‌, ಗುರುದೀಪ್‌ ಸಿಂಗ್‌ ಸಪ್ಪಲ್‌, ಅರುಣ್‌ ಯಾದವ್‌, ವಿಜಯ್‌ ನಾಮ್‌ದೇವ್‌ರಾವ್‌ ವಡೆಟ್ಟಿವಾರ್‌, ವಿ. ಹನುಮಂತರಾವ್‌, ಅಮಿತ್‌ ಚಾವ್ಡಾ, ಬಿ. ಮಹೇಶ್‌ ಕುಮಾರ್‌ ಗೌಡ್‌, ಪೊನ್ನಮ್‌ ಪ್ರಭಾಕರ್‌, ಡಾ. ವೀರಪ್ಪ ಮೊಯಿಲಿ, ಎಸ್‌. ಜೋತಿಮಣಿ, (ಸಂಸದೆ), ಶ್ರೀಕಾಂತ್‌ ಜೇನಾ, ಕಮಲೇಶ್ವರ್‌ ಪಟೇಲ್‌, ಅಜಯ್‌ ಕುಮಾರ್‌ ಲಲ್ಲು, ಸುಭಾಷಿಣಿ ಯಾದವ್‌, ಅಡೂರು ಪ್ರಕಾಶ್‌ (ಸಂಸದ), ಧನೇಂದ್ರ ಸಾಹು, ಹೀನಾ ಕಾವ್ರೆ, ಡಾ. ಅನಿಲ್‌ ಜೈಹಿಂದ್-‌ ಸಲಹಾ ಮಂಡಳಿಯ ಸಂಚಾಲಕರು, ಜಿತೇಂದರ್‌ ಬಘೇಲ್-‌ ಸಲಹಾ ಮಂಡಳಿಯ ಕಾರ್ಯದರ್ಶಿ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X