ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಅಬ್ಬರ ಮುಂದುವರೆದಿದೆ. ಹೀಗಾಗಿ, ಮಂಡಿ ಜಿಲ್ಲೆಯ 176 ರಸ್ತೆಗಳು ಸೇರಿದಂತೆ ಹಿಮಾಚಲದ ಒಟ್ಟು 260ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡಿ, ಕಾಂಗ್ರಾ ಹಾಗೂ ಸಿರ್ಮೌರ್ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಶನಿವಾರ ಭಾರೀ ಮಳೆಯಾಗುತ್ತಿದೆ. ಭಾನುವಾರ ಮಳೆ ಆರ್ಭಟ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಘೋಷಿಸಿದೆ. ಅಲ್ಲದೆ, ಉನಾ, ಬಿಲಾಸ್ಪುರ್, ಹಮೀರ್ಪುರ್, ಚಂಬಾ, ಸೋಲನ್, ಶಿಮ್ಲಾ ಹಾಗೂ ಕುಲ್ಲು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಡ್ ಘೋಷಿಸಲಾಗಿದೆ. ಹಿಮಾಚಲದಲ್ಲಿ ದಿನನಿತ್ಯ ಸುಮಾರು 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆ ಸುರಿಯುತ್ತಿದೆ.
ಮಳೆಯಿಂದಾಗಿ ಭೀಕರ ಪರಿಸ್ಥಿತಿ ಎದುರಾಗುವ ಆತಂಕ ರಾಜ್ಯದ ಜನರಲ್ಲಿ ಮನೆ ಮಾಡಿದೆ. ದಿನದಿಂದ ದಿನಕ್ಕೆ ಮಳೆ ತೀವ್ರತೆ ಹೆಚ್ಚುತ್ತಿದೆ. ಜೂನ್ 20ರಿಂದ ಈವರೆಗೆ 15 ದಿನಗಳಲ್ಲಿ ಸುಮಾರು 72 ಮಂದಿ ಸಾವನ್ನಪ್ಪಿದ್ದಾರೆ.
ಕಳೆದ ವರ್ಷವೂ ಇದೇ ರೀತಿ ಭಾರೀ ಮಳೆಯಾಗಿತ್ತು. ಪ್ರವಾಹ, ಭೂಕುಸಿತದಿಂದಾಗಿ 550ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, 700 ಕೋಟಿ ರೂ,ಗಳಿಗೆ ಅಧಿಕ ನಷ್ಟವಾಗಿತ್ತು.