ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಹಿಂದಿ ಕಡ್ಡಾಯ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹೊರೆಯಾಗುತ್ತಿದೆ. ಹಿಂದಿ ಹೇರಿಕೆಗೆ ಕನ್ನಡ ಮಕ್ಕಳ ಭವಿಷ್ಯ ಬಲಿಯಾಗುತ್ತಿದೆ ಎಂದು ಆಪಾದಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ʼರಾಜ್ಯದಲ್ಲಿ ಮಕ್ಕಳಿಗೆ ಪ್ರಥಮ ಭಾಷೆಯಾಗಿ ಕನ್ನಡ, ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಹಾಗೂ ತೃತೀಯ ಭಾಷೆಯಾಗಿ ಹಿಂದಿ ಕಲಿಸಲಾಗುತ್ತಿದೆ. ಆದರೆ, ಹಿಂದಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನಗತ್ಯ ಒತ್ತಡ ಉಂಟು ಮಾಡುತ್ತಿದೆ. 2024ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 90,794 ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಇದು, ಒಟ್ಟು ವಿದ್ಯಾರ್ಥಿಗಳ ಶೇ 21ರಷ್ಟಿದೆ. 2025 ರಲ್ಲಿ ಅನುತ್ತೀರ್ಣ ಪ್ರಮಾಣ 1.2 ಲಕ್ಷಕ್ಕೂ ಹೆಚ್ಚಾಗಿದ್ದು, ಆಘಾತಕಾರಿ ಬೆಳವಣಿಗೆಯಾಗಿದೆʼ ಎಂದು ಆರೋಪಿಸಿದರು.
ʼರಾಜ್ಯದ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಹಾಗೂ ಇಂಗ್ಲಿಷ್ ದ್ವಿಭಾಷಾ ಶಿಕ್ಷಣ ನೀತಿ ಜಾರಿಗೆ ತರಬೇಕು. ತೃತೀಯ ಭಾಷೆ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು. ರಾಜ್ಯ ಹಾಗೂ ಕೇಂದ್ರೀಯ ಶಿಕ್ಷಣ ವ್ಯವಸ್ಥೆಗಳಾದ ಸಿಬಿಎಸ್‍ಇ ಹಾಗೂ ಐಸಿಎಸ್‍ಇ ಶಾಲೆಗಳಲ್ಲಿ ಏಕರೂಪದ ದ್ವಿಭಾಷಾ ನೀತಿ ಜಾರಿಗೊಳಿಸಬೇಕು. ಸಿಬಿಎಸ್‍ಇ, ಐಸಿಎಸ್‍ಇ ಶಾಲೆಗಳಲ್ಲೂ ಕಡ್ಡಾಯವಾಗಿ ಕನ್ನಡವನ್ನೇ ಪ್ರಥಮ ಭಾಷೆಯಾಗಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ, ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕುʼ ಎಂದು ಆಗ್ರಹಿಸಿದರು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಹೇಡೆ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ವೀರಶೆಟ್ಟಿ ಗೌಸಪುರೆ, ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಬಂಡೆಪ್ಪ ಕರಸಣ್ಣ, ಪ್ರಮುಖರಾದ ಉದಯಕುಮಾರ ಅಷ್ಟೂರೆ, ಶಿವರುದ್ರ ತೀರ್ಥ, ಸಚಿನ್ ಬೆನಕನಳ್ಳಿ, ವಿನಾಯಕ ರೆಡ್ಡಿ ಬುಧೇರಾ, ಮಹೇಶ ಸ್ವಾಮಿ, ಅಮೀತ್ ಶಿವಪೂಜೆ, ವಿವೇಕ್ ನಿರ್ಮಳೆ, ಸತೀಶ್ ಫುಲಾರೆ, ಮಲ್ಲಿಕಾರ್ಜುನ ಸಿಕೇನಪುರೆ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ? (ಭಾಗ-1)