ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 9 ರಂದು ಕಾರ್ಮಿಕ ಸಂಘಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಜಿಲ್ಲಾ ಬೀದರ ಘಟಕಗಳು ಜಂಟಿಯಾಗಿ ಬೀದರನಲ್ಲಿ ಸಾರ್ವತ್ರಿಕ ಮುಷ್ಕರ ನಡೆಸಲು ತೀರ್ಮಾನಿಸಿದೆ.
ಈ ಸಂಬಂಧ ಜಂಟಿ ಸಂಘಟನೆಗಳ ಮುಖಂಡರು ಬೀದರ್ ನಗರದ ಸ್ಟಾರ್ ಲಾಡ್ಜ್ ಸಭಾಂಗಣದಲ್ಲಿ ನಡೆಸಲಾದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಹಳ್ಳಿಖೇಡ್ ಕಾರ್ಮಿಕರು, ಬಗರ್ ಹುಕುಂ ಸಾಗುವಳಿದಾರರು, ರೈತರು, ಕಾರ್ಮಿಕರು, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆರರು ಅಂದು ಮಧ್ಯಾಹ್ನ 12 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕೆಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಸ್ವಾಮಿನಾಥನ್ ಆಯೋಗ ಶಿಫಾರಸ್ಸಿನಂತೆ ಎಂಎಸ್‌ಪಿ (ಕನಿಷ್ಟ ಬೆಂಬಲ ಬೆಲೆ) ಕುರಿತು ಪಾರ್ಲಿಮೆಂಟ್‌ನಲ್ಲಿ ಕಾಯ್ದೆ ಅಂಗೀಕರಿಸಬೇಕು. ಬೀದರ ಜಿಲ್ಲೆ ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕು. ಬಗರ್ ಹುಕುಂ ಸಾಗುವಳಿಯನ್ನು ಸಕ್ರಿಯಗೊಳಿಸಬೇಕು. ಬಿಎಸ್‌ಎಸ್‌ಕೆ ಹಳ್ಳಖೇಡ್ (ಬಿ) ಸಕ್ಕರೆ ಕಾರ್ಖಾನೆ ಪುನಾರಂಭಿಸಿ ಕಾರ್ಖಾನೆ ನೌಕರರಿಗೆ ಕೊಡಬೇಕಾದ 35 ಕೋಟಿ ರೂ. ಸಂಬಳವಾಗಿ ಇನ್ನಿತರ ಹಣ ಸಂದಾಯ ಮಾಡಬೇಕೆಂದು ಮುಷ್ಕರದ ಬೇಡಿಕೆಗಳಾಗಿವೆ ಎಂದು ಹೇಳಿದರು.
ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಕನಿಷ್ಠ ಸಂಬಳ 25ಸಾವಿರ ವೇತನ ನೀಡಬೇಕು. ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ವೇತನ ಬಿಡುಗಡೆ ಮಾಡಬೇಕು. ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಬಿಡುಗಡೆ ಮಾಡುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದನ್ನೂ ಓದಿ : ಬೀದರ್ | ದ್ವಿಭಾಷಾ ಶಿಕ್ಷಣ ನೀತಿ ಜಾರಿಗೆ ಆಗ್ರಹಿಸಿ ಕರವೇ ಪ್ರತಿಭಟನೆ
ಜೆಸಿಟಿಯು ಸಂಘಟನೆಯ ಸಂಚಾಲಕ ಬಾಬುರಾವ ಹೊನ್ನಾ, ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ನಜೀರ ಅಹ್ಮದ್, ಕಟ್ಟಡ ಕಾರ್ಮಿಕ ಸಂಘ (ಎಐಟಿಯುಸಿ) ಅಧ್ಯಕ್ಷ ಎಂ.ಡಿ. ಶಫಾಯತ್‌ಅಲಿ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಚಂದ್ರಕಲಾ ಕಮಠಾಣಕರ್, ಭಾರತೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಲಾ ಸಾಗರ, ಆರ್.ಪಿ. ರಾಜಾ, ಮಹೇಶ ನಾಡಗೌಡಾ, ಬಿಎಸ್‌ಎಸ್‌ಕೆ ಹಳ್ಳಿಖೇಡ್(ಬಿ) ನಿವೃತ್ತ ನೌಕರರು ಸಿದ್ರಾಮಪ್ಪಾ ಸೇರಿದಂತೆ ಮತ್ತಿತರರು ಇದ್ದರು.