“ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಎಲ್ಲರ ಹಿಂದಿನ ಜನ್ಮವನ್ನು ನಾನು ನೋಡಿದೆ. ಅವರೆಲ್ಲರೂ ಸೇರಿ ಹಿಂದಿನ ಜನ್ಮದಲ್ಲಿ ಬೆಂಕಿ ಇಟ್ಟಿದ್ದರು. ಬೆಂಕಿ ಇಟ್ಟಿದ್ದರಿಂದ ಗಿಡ ಮರ, ಪ್ರಾಣಿಗಳು, ಆದಿವಾಸಿ ಜನಗಳು ಸೇರಿದಂತೆ ಹಲವರು ಸುಟ್ಟು ಕರಕಲಾಗಿದ್ದರು. ಆ ಕರ್ಮವನ್ನು ನಿವಾರಣೆ ಮಾಡುವುದಕ್ಕಾಗಿ ಅವರೆಲ್ಲರೂ ವಿಮಾನ ಹತ್ತಿದ್ದರು. ಹಾಸ್ಟೆಲ್ನಲ್ಲಿ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳು ಕೂಡ ಹಿಂದಿನ ಜನ್ಮದಲ್ಲಿ ಈ ಕರ್ಮ ಎಸಗಿದ್ದರು. ಪೈಲಟ್ ಮತ್ತು ಗುಜರಾತ್ನ ಮಾಜಿ ಸಿಎಂ ಬೆಂಕಿ ಇಟ್ಟವರ ನಾಯಕರಾಗಿದ್ದರು. ಹಾಗಾಗಿ, ಅವರು ಕೂಡ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.
ಹೀಗಂತ ಒಬ್ಬ ಬೊಗಳೆ ಶೂರ, ತನ್ನನ್ನು ‘ಸೋ ಕಾಲ್ಡ್ ಆಧ್ಯಾತ್ಮಿಕ ತಜ್ಞ’ ಎಂದು ಹೇಳಿಕೊಳ್ಳುವ ಡಾ. ಉದಯ್ ಶಾ ಎಂಬಾತ ಬೊಗಳೆ ಬಿಟ್ಟಿದ್ದು, ಸದ್ಯ ಜನರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಬೈಸಿಕೊಳ್ಳುತ್ತಿದ್ದಾರೆ.
‘The Mystic Journey’ ಎಂಬ ಯೂಟ್ಯೂಬ್ ಚಾನೆಲ್ನ ನಿರೂಪಕಿಯ ಜೊತೆಗೆ ನಡೆಸಿದ ಪಾಡ್ ಕಾಸ್ಟ್ ಸಂದರ್ಶನದಲ್ಲಿ ಈ ವ್ಯಕ್ತಿ ಈ ರೀತಿಯ ಹೇಳಿಕೆ ನೀಡಿದ್ದಾನೆ. ಇದು ಈಗ ಜನರ ಕೆಂಗಣ್ಣಿಗೆ ಕಾರಣವಾಗಿದೆ.
“ವಿಮಾನ ದುರಂತದಲ್ಲಿ ವಿಶ್ವಾಸ್ ಕುಮಾರ್ ಎಂಬಾತ ಒಬ್ಬನೇ ಬದುಕಿದ್ದಾನೆ. ಅದು ಹೇಗೆ?” ಎಂದು ನಿರೂಪಕಿ ಕೇಳಿದ್ದಕ್ಕೆ ಉತ್ತರಿಸಿರುವ ಈತ, “ಕಾಡಿಗೆ ಬೆಂಕಿ ಇಡುವ ವೇಳೆ ಈತನೊಬ್ಬ ವಿರೋಧಿಸಿದ್ದ ಹಾಗೂ ಆ ಕೃತ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಹಾಗಾಗಿ, ಆತ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ” ಎಂದು ಉದಯ್ ಶಾ ಬೊಗಳೆ ಬಿಟ್ಟಿದ್ದಾನೆ. ಸದ್ಯ ಈತನ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
“ಪ್ರಧಾನ ಮಂತ್ರಿ ಮೋದಿಯವರ ಹಿಂದಿನ ಜನ್ಮವನ್ನೂ ಕೂಡ ನಾನು ನೋಡಿದ್ದೇನೆ. ಅವರು ಭೀಷ್ಮರಾಗಿದ್ದರು. ಬಾಲಿವುಡ್ ನಟರಾದ ಶಾರೂಖ್ ಖಾನ್, ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರ ಹಿಂದಿನ ಜನ್ಮವನ್ನು ನೋಡಿದ್ದೇನೆ. ಅವರೆಲ್ಲರೂ ಹಿಂದಿನ ಜನ್ಮದಲ್ಲಿ ಮೌಲಾನಾಗಳಾಗಿದ್ದರು. ಒಬ್ಬರು ಮದುವೆ ಆಗಿಲ್ಲ, ಇನ್ನೊಬ್ಬರು ಹೆಚ್ಚು ಹೆಚ್ಚು ಮದುವೆ ಆಗಿದ್ದಾರೆ. ನಿಧನರಾಗಿರುವ ನಟ ಸುಶಾಂತ್ ಸಿಂಗ್ ರಜಪೂತ್ ಚಂದ್ರನ ಗ್ರಹದಿಂದ ಬಂದಿದ್ದರು” ಎಂದೆಲ್ಲ ಬೊಗಳೆ ಬಿಟ್ಟಿದ್ದಾರೆ.
ಈತನ ವಿಡಿಯೋ ನೋಡಿ ರೊಚ್ಚಿಗೆದ್ದಿರುವ ನೆಟ್ಟಿಗರು, “ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬ ಇನ್ನೂ ಆ ಆಘಾತದಿಂದ ಚೇತರಿಸಿಕೊಂಡಿಲ್ಲ. ಈತ ಬೊಗಳೆ ಬಿಡುತ್ತಿದ್ದಾನೆ. ಈತನ ವಿರುದ್ಧ ಸರ್ಕಾರವೇ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಈತನ ವಿಡಿಯೋವನ್ನು ಟ್ವೀಟ್ ಮಾಡಿರುವ ಖ್ಯಾತ ಪತ್ರಕರ್ತ ಮೊಹಮ್ಮದ್ ಝುಬೇರ್, “ಈತನಿಗೆ ನಮ್ಮ ದೇಶದಲ್ಲಿ ಧೀರೇಂದ್ರ ಶಾಸ್ತ್ರಿ, ಶ್ರೀಶ್ರೀ ಮತ್ತು ಜಗ್ಗಿ ಅವರಿಗಿಂತ ಉಜ್ವಲ ಭವಿಷ್ಯವಿದೆ” ಎನ್ನುವ ಮೂಲಕ ವ್ಯಂಗ್ಯವಾಡಿದ್ದಾರೆ.
