ಬೀದರ್ ಜಿಲ್ಲೆಯಲ್ಲಿ ಸೆ. 3 ರಂದು ರಾಜ್ಯದ ಗಮನ ಸೆಳೆಯುವ ರೀತಿಯಲ್ಲಿ ಅರ್ಥಪೂರ್ಣ ಬಸವ ಸಂಸ್ಕೃತಿ ಅಭಿಯಾನ ನಡೆಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಬಸವ ಪರ ಸಂಘಟನೆಗಳು ನಿರ್ಧರಿಸಿದೆ.
ಬೀದರ್ ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಪೂರ್ವ ಸಿದ್ಧತಾ ಸಭೆಯಲ್ಲಿ ಈ ಕುರಿತು ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.
ʼರಾಜ್ಯ ಸರ್ಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿದ ಪ್ರಯುಕ್ತ ಬಸವ ಸಂಸ್ಕೃತಿಯನ್ನು ಮನೆ-ಮನೆಗೆ ತಲುಪಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಎಲ್ಲ ಬಸವ ಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆʼ ಎಂದು ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಸೆ. 1ರಿಂದ ಅಕ್ಟೋಬರ್ 1 ರವರೆಗೆ ರಾಜ್ಯದ್ಯಂತ ಅಭಿಯಾನ ನಡೆಯಲಿದೆ. ಅಭಿಯಾನ ಪ್ರತಿ ಜಿಲ್ಲೆಯಲ್ಲಿ ಒಂದು ದಿನ ಜರುಗಲಿದೆ. ಅಭಿಯಾನದ ಯಶಸ್ವಿಗೆ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.
ʼಬಸವ ಸಂಸ್ಕೃತಿ ವಿಶ್ವದ ಶ್ರೇಷ್ಠ ಸಂಸ್ಕೃತಿ. ಈ ಅಭಿಯಾನದ ಮೂಲಕ ಅದರ ಪ್ರಚಾರದ ಅವಕಾಶ ಒದಗಿ ಬಂದಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳೋಣ. ಜಿಲ್ಲೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಮಾದರಿಯಾಗಿ ನಡೆಸೋಣʼ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಅಭಿಯಾನದ ರಥ ಸೆ. 3ರಂದು ಬೀದರ್‌ಗೆ ಬರಲಿದೆ. ಅಭಿಯಾನವು ವಿದ್ಯಾರ್ಥಿಗಳೊಂದಿಗೆ ಸಂವಾದ, ಬಸವ ಸಂಸ್ಕೃತಿ ಪಥ ಸಂಚಲನ, ಬಹಿರಂಗ ಸಭೆ ಹಾಗೂ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ವಚನ ನೃತ್ಯ, ವಚನ ಸಂಗೀತ ಮೊದಲಾದವನ್ನು ಒಳಗೊಂಡಿದೆ ಎಂದು ತಿಳಿಸಿದರು.
ಬಸವಣ್ಣನವರ ತತ್ವಗಳ ಪ್ರಚಾರಕ್ಕಾಗಿ ಅಭಿಯಾನ ಅವಶ್ಯಕವಾಗಿದೆ. ಇದರ ಯಶಸ್ವಿಗೆ ಎಲ್ಲರೂ ಕಂಕಣಬದ್ಧರಾಗಿದ್ದೇವೆ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.
ಬಸವ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಲು ಅಭಿಯಾನ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಕೌಠಾ(ಬಿ) ಬಸವ ಯೋಗಾಶ್ರಮದ ಸಿದ್ಧರಾಮ ಶರಣರು ಬೆಲ್ದಾಳ ನುಡಿದರು.

ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಪ್ರಮುಖರಾದ ಶ್ರೀಕಾಂತ್ ಸ್ವಾಮಿ, ರಾಜೇಂದ್ರಕುಮಾರ ಗಂದಗೆ, ಸುವರ್ಣಾ ಚಿಮಕೋಡೆ, ಮಲ್ಲಮ್ಮ ಆರ್. ಪಾಟೀಲ ಮಾತನಾಡಿದರು.
ಬಸವಕಲ್ಯಾಣದ ಬಸವ ಮಹಾ ಮನೆಯ ಸಿದ್ಧರಾಮೇಶ್ವರ ಸ್ವಾಮೀಜಿ, ಮಹಾಲಿಂಗ ದೇವರು, ಮಾತೆ ಮೈತ್ರಾದೇವಿ, ಪ್ರಮುಖರಾದ ಜೈರಾಜ ಖಂಡ್ರೆ, ಕುಶಾಲ್ ಪಾಟೀಲ ಖಾಜಾಪುರ, ಆನಂದ ದೇವಪ್ಪ, ಚಂದ್ರಕಾಂತ ಶೆಟಕಾರ್, ಕಾಶಿನಾಥ ಶೆಟಕಾರ್, ಶಂಭುಲಿಂಗ ಕಾಮಣ್ಣ, ಉಷಾ ಮೀರ್ಚೆ, ಸುವರ್ಣಾ ಧನ್ನೂರ, ಜಯದೇವಿ ಯದಲಾಪುರೆ, ಡಾ. ವಿಜಯಶ್ರೀ ಬಶೆಟ್ಟಿ, ಸುಮಾ ಭೂಶೆಟ್ಟಿ, ಸುನೀತಾ ದಾಡಗೆ ಸೇರಿದಂತೆ ಬಸವ ಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಗಣ್ಯರು ಹಾಗೂ ಬಸವಾನುಯಾಯಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | ದ್ವಿಭಾಷಾ ಶಿಕ್ಷಣ ನೀತಿ ಜಾರಿಗೆ ಆಗ್ರಹಿಸಿ ಕರವೇ ಪ್ರತಿಭಟನೆ
ರೇವಣಪ್ಪ ಮೂಲಗೆ, ಕಂಟೆಪ್ಪ ಗಂದಿಗುಡೆ, ನಿರ್ಮಲಾ ಮಸೂದಿ ವಚನ ಗಾಯನ ನಡೆಸಿಕೊಟ್ಟರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು.