2019ರಲ್ಲಿ ಕುವೆಂಪು ವಿವಿಯಲ್ಲಿ ಕುಲಸಚಿವರಾಗಿದ್ದ ಪ್ರೊ ಪಿ ಕಣ್ಣನ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿತ್ತು. ಅದರ ತನಿಖೆಗೆ ನಿವೃತ್ತ ನ್ಯಾಯಾಧೀಶ ಎಚ್ ಬಿ ರವೀಂದ್ರನಾಥ್ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿ 20 ದಿನದೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ 2023 ಮೇ 29 ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆ ತನಿಖಾ ವರದಿ ಇನ್ನೂ ಸಲ್ಲಿಕೆಯಾಗಿಲ್ಲ. ಅಷ್ಟರಲ್ಲಿ ಮತ್ತೆ ಅದೇ ವಿವಿಗೆ ಕುಲಸಚಿವರಾಗಿ ನೇಮಕವಾಗಿದ್ದಾರೆ!
ಪರೀಕ್ಷಾ ಅವ್ಯವಹಾರ, ಆಡಳಿತದಲ್ಲಿ ಭ್ರಷ್ಟಾಚಾರ, ನಿಯಮಬಾಹಿರವಾಗಿ ನೇಮಕಾತಿ- ಪದೋನ್ನತಿ ಮಾಡಿರುವುದು… ಹೀಗೆ ಹಲವು ಹಗರಣಗಳಲ್ಲಿ ಭಾಗಿಯಾದ ಆರೋಪ ಹೊತ್ತಿರುವ ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಪಿ ಕಣ್ಣನ್ ಅವರನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಕ್ಕೆ ಕುಲಸಚಿವರನ್ನಾಗಿ ನೇಮಿಸಿರುವ ಸರ್ಕಾರದ ಕ್ರಮ ಶೈಕ್ಷಣಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ಇದೇ ಜುಲೈ ಎರಡನೇ ವಾರ ಕೆಲವು ವಿವಿಗಳಿಗೆ ಐಎಎಸ್/ ಕೆಎಎಸ್ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅದರಲ್ಲಿ ಕುವೆಂಪು ವಿವಿ ಕೂಡಾ ಸೇರಿತ್ತು. ಆದರೆ, ಒಂದೇ ವಾರದಲ್ಲಿ ಪ್ರೊ. ಕಣ್ಣನ್ ಅವರನ್ನು ಕುಲಸಚಿವ (ಆಡಳಿತ)ರನ್ನಾಗಿ ನೇಮಕ ಮಾಡಿ ಹೊಸ ಆದೇಶ ಹೊರಡಿಸಲಾಗಿದೆ. ಜು.28ರಂದು ಅವರು ಅಧಿಕಾರ ವಹಿಸಿಕೊಂಡೂ ಆಗಿದೆ. ಮೊದಲ ದಿನವೇ ಹಲವು ಕಡತಗಳಿಗೆ ತರಾತುರಿಯಲ್ಲಿ ಸಹಿ ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
“ನಿಯೋಜನೆಗೊಂಡ ಕೆಎಎಸ್ ಅಧಿಕಾರಿ ಬರಲೊಪ್ಪದ ಕಾರಣ ಕಣ್ಣನ್ ಅವರನ್ನು ನೇಮಕ ಮಾಡಲಾಗಿದೆ” ಎಂಬ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರ ಹೇಳಿಕೆ ಬಾಲಿಶವಾಗಿದೆ. ಸರ್ಕಾರ ನಿಯೋಜಿಸಿದ ಜಾಗದಲ್ಲಿ ಕೆಲಸ ಮಾಡುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ. ಅವರು ಹೋಗಲ್ಲ ಎಂದರೆ ಅದು ಕರ್ತವ್ಯ ಲೋಪವಾಗುತ್ತದೆ; ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಅದು ಬಿಟ್ಟು ಕೇವಲ ಒಂದೇ ವಾರದಲ್ಲಿ ಬೇರೊಬ್ಬರನ್ನು ನೇಮಿಸಿರುವುದು ನೇಮಕಾತಿ, ವರ್ಗಾವಣೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಪ್ರೊ ಕಣ್ಣನ್ ಯಾರು?
ತಮಿಳುನಾಡು ಮೂಲದ ಇಂಗ್ಲಿಷ್ ಪ್ರಾಧ್ಯಾಪಕ ಕಣ್ಣನ್ ದಾವಣಗೆರೆ ವಿವಿಯಲ್ಲಿ ಆಡಳಿತಾಧಿಕಾರಿಯಾಗಿದ್ದರು. ನಂತರ ಕುವೆಂಪು ವಿವಿಗೆ ಪರೀಕ್ಷಾಂಗ ಕುಲಸಚಿವರಾಗಿ ಬಂದಿರುತ್ತಾರೆ. ಅಲ್ಲಿ ಭ್ರಷ್ಟಾಚಾರದ ಆರೋಪ ಬಂದ ಹಿನ್ನೆಲೆಯಲ್ಲಿ 2021ರಲ್ಲಿ ಅವರ ಜಾಗಕ್ಕೆ ಬೆಳಗಾವಿ ರಾಣಿ ಚೆನ್ನಮ್ಮ ವಿವಿಯ ಪ್ರಾಧ್ಯಾಪಕ ಪ್ರೊ. ಎಂ. ಸಿ ತ್ಯಾಗರಾಜ್ ಅವರು ಕುವೆಂಪು ವಿವಿಯ ಕುಲಸಚಿವರಾಗಿ ನೇಮಕವಾಗುತ್ತಾರೆ. ಆಗ ಕಣ್ಣನ್ ವಿಜಯಪುರ ವಿವಿಯ ಹಿರಿಯ ಪ್ರಾಧ್ಯಾಪಕರಾಗಿ ಹೋಗುತ್ತಾರೆ. ಅದಾಗಿ ಕೇವಲ ಎರಡೇ ವರ್ಷದಲ್ಲಿ ಮತ್ತೆ ಕುವೆಂಪು ವಿವಿಗೆ ಕುಲಸಚಿವರಾಗಿ ಕಣ್ಣನ್ ನೇಮಕವಾಗಿರುವುದು ಕಾಕತಾಳೀಯವೇನಲ್ಲ.
ದಾವಣಗೆರೆ ವಿವಿಯಲ್ಲಿ ಕುಲಸಚಿವ(ಆಡಳಿತ)ರಾಗಿದ್ದಾಗ ನಡೆದ ವಿವಿಧ ಹುದ್ದೆಗಳ ನೇಮಕ, ಪದೋನ್ನತಿ ಮತ್ತುಅಗತ್ಯ ಸಾಮಗ್ರಿ ಖರೀದಿಯಲ್ಲಿನ ಭ್ರಷ್ಟಾಚಾರದ ಆರೋಪ ಇವರ ಮೇಲಿತ್ತು. 2019ರಲ್ಲಿ ಕುವೆಂಪು ವಿವಿಯ ದೂರಶಿಕ್ಷಣ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಫಲಿತಾಂಶ ನೀಡಿರುವುದು ಮುಂತಾದ ನಿಯಮ ಉಲ್ಲಂಘನೆಯ ಆಪಾದನೆ ಕುಲಪತಿ ಮತ್ತು ಕುಲಸಚಿವ ಕಣ್ಣನ್ ಮೇಲಿತ್ತು. ವಿ ವಿ ಅಧ್ಯಾಪಕರ ಒತ್ತಡಕ್ಕೆ ಮಣಿದ ಸರ್ಕಾರ ನಿವೃತ್ತ ನ್ಯಾಯಾಧೀಶ ಎಚ್ ಬಿ ರವೀಂದ್ರನಾಥ್ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿ 2023 ಮೇ 29 ರಂದು ಆದೇಶ ಹೊರಡಿಸಿತ್ತು. 20 ದಿನದೊಳಗೆ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆ ತನಿಖಾ ವರದಿ ಇನ್ನೂ ಸಲ್ಲಿಕೆಯಾಗಿಲ್ಲ. ಯಾವ ವಿವಿಯಲ್ಲಿ ಭ್ರಷ್ಟಾಚಾರ ನಡೆಸಿದರೆಂಬ ಆರೋಪವಿತ್ತೋ, ಅದೇ ವಿವಿಗೆ, ಸಂಬಂಧಿಸಿದ ತನಿಖಾ ವರದಿ ಬರುವ ಮುಂಚೆಯೇ ಅದೇ ವ್ಯಕ್ತಿಯನ್ನು ಅದೇ ಹುದ್ದೆಗೆ ನೇಮಿಸಿರುವುದು ಇಡೀ ವ್ಯವಸ್ಥೆಯ ಅಣಕವಾಗಿದೆ.
ದೂರಶಿಕ್ಷಣ ಪರೀಕ್ಷಾ ಹಗರಣ: ತನಿಖೆಗೆ ಸಮಿತಿ
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆಡಳಿತ ಕುಲಸಚಿವರಾಗಿದ್ದ ಕಣ್ಣನ್ ಶಿವಮೊಗ್ಗ ವಿಶ್ವವಿದ್ಯಾಲಯಕ್ಕೆ ಮೌಲ್ಯಮಾಪನ ಕುಲಸಚಿವರಾಗಿ ಬರುತ್ತಾರೆ. ಅವರ ಅವಧಿಯಲ್ಲಿ ದೂರಶಿಕ್ಷಣದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟ ಮಾಡಿದ ಆರೋಪ ಇವರ ಮೇಲಿದೆ. 2019-20ರ ಸಾಲಿನಲ್ಲಿ ಕೋವಿಡ್ -19 ಸೋಂಕಿನ ಕಾರಣದಿಂದಾಗಿ ಪರೀಕ್ಷೆ ನಡೆಸದೇ ಆಂತರಿಕ ಅಂಕಗಳ ಆಧಾರದಲ್ಲಿ ಪಾಸು ಮಾಡುವ ನಿಯಮ ಜಾರಿಗೊಳಿಸಲಾಗಿತ್ತು. ಆದರೆ, ಕಣ್ಣನ್ ಇದೇ ನಿಯಮವನ್ನು ಕೊರೋನಾ ನಂತರವೂ ಮುಂದುವರಿಸಿ 20-21ನೇ ಸಾಲಿನ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ದಾಖಲಾತಿ ತೋರಿಸಿ ಪರೀಕ್ಷೆ ನಡೆಸದೇ ಬೇಕಾಬಿಟ್ಟಿ ಅಂಕ ನೀಡಿ, ಹಣ ಪಡೆದು ಫಲಿತಾಂಶ ಪ್ರಕಟಿಸಿ ಅಂಕಪಟ್ಟಿಯನ್ನೂ ನೀಡಿದ್ದರು ಎಂದು ಆರೋಪಿಸಿ ಸಿಂಡಿಕೇಟ್ ಸದಸ್ಯರು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.

ವಿವಿಯ ಪ್ರಾಥಮಿಕ ತನಿಖೆಯಲ್ಲಿ ನಿಯಮ ಉಲ್ಲಂಘಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ಹಣ ದುರುಪಯೋಗ ಮಾಡಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಲು ವಿವಿಗೆ ಆದೇಶ ನೀಡಲಾಗಿತ್ತು.ಇದರ ಪರಿಣಾಮವಾಗಿ ಕುವೆಂಪು ವಿವಿ ಕುಲಪತಿ, ಕುಲಸಚಿವ ಮತ್ತು ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರ ವಿರುದ್ಧ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎಚ್ ಬಿ ರವೀಂದ್ರನಾಥ್ ಅಧ್ಯಕ್ಷತೆಯ ಸಮಿತಿಗೆ ತನಿಖೆ ನಡೆಸಲು ವಹಿಸಲಾಗಿತ್ತು. ಈ ಮಧ್ಯೆ 2021ರ ಜುಲೈನಲ್ಲಿ ಕಣ್ಣನ್ ಅವರನ್ನು ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡಿ ವಿಜಯಪುರದ ವಿವಿಗೆ ಕಳಿಸಲಾಗಿತ್ತು!
ಸರ್ಕಾರದ ಉದಾಸೀನತೆ
ರಾಜ್ಯದ ವಿವಿಗಳಿಗೆ ಮಾತ್ರವಲ್ಲ ವಿವಿಧ ಸರ್ಕಾರಿ ಸಂಸ್ಥೆಗಳು, ತನಿಖಾ ಸಂಸ್ಥೆಗಳು, ಪೊಲೀಸ್ ಇಲಾಖೆಗಳಿಗೆ, ಹೆಚ್ಚುವರಿ ಅಡ್ವೊಕೇಟ್ ಹುದ್ದೆಗಳಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಘಪರಿವಾರದ ಹಿನ್ನೆಲೆಯವರನ್ನೇ ಆಯಕಟ್ಟಿನ ಜಾಗಗಳಲ್ಲಿ ನೇಮಿಸಲಾಗಿತ್ತು ಎಂಬ ಆರೋಪ ಇತ್ತು. ಆದರೆ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬಂದ ಮೇಲೂ ಅವರನ್ನು ಬದಲಾಯಿಸಿಲ್ಲ. ಅದರ ಬದಲಿಗೆ ಪದೋನ್ನತಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ನೇಮಕವಾದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳ ಪಟ್ಟಿಯಲ್ಲೂ ಬಲಪಂಥೀಯ ಸಮರ್ಥಕರ ಹೆಸರುಗಳಿರುವುದು ಚರ್ಚೆಗೆ ಗ್ರಾಸವಾಗಿತ್ತು. ಈಗ ಪ್ರೊ.ಕಣ್ಣನ್ ಅವರ ನೇಮಕದ ಸಂದರ್ಭದಲ್ಲೂ ಅದೇ ಆರೋಪ ಮತ್ತೆ ಕೇಳಿಬಂದಿದೆ. ಈಗ ಆ ತಪ್ಪನ್ನು ಉನ್ನತ ಶಿಕ್ಷಣ ಸಚಿವರು ಸರಿಪಡಿಸಿಕೊಳ್ಳುವರೇ? ಭ್ರಷ್ಟಾಚಾರದ ಆರೋಪದ ತನಿಖೆ ಮುಗಿಯುವ ಮುಂಚೆಯೇ, ಅಲ್ಲಿಂದ ತೆರವಾದವರನ್ನು ಮತ್ತೆ ಅಲ್ಲಿಗೇ ನೇಮಿಸಿಕೊಳ್ಳಲು ಕಾರಣರಾದವರ ಮೇಲೆ ಮುಖ್ಯಮಂತ್ರಿಯವರು ಕ್ರಮ ಕೈಗೊಳ್ಳುವರೇ ಎಂಬುದನ್ನು ನೋಡಬೇಕಿದೆ

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.