ಕಳೆದ 3 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ನಾಯಕರು ಶನಿವಾರ ಭೇಟಿ ನೀಡಿರುವುದರ ಬಗ್ಗೆ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಇವೆಲ್ಲಾ ಕೇವಲ ತೋರಿಕೆಯಷ್ಟೆ. ರಾಜಸ್ತಾನ, ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ಹೇಯ ಕೃತ್ಯಗಳು ನಡೆದಿವೆ. ಆಗೇಕೆ ಈ ನಾಯಕರು ಆ ರಾಜ್ಯಗಳಿಗೆ ಭೇಟಿ ನೀಡಲಿಲ್ಲ. ವಿಪಕ್ಷಗಳ ಮಣಿಪುರ ಭೇಟಿ ಕೇವಲ ನಾಟಕವಷ್ಟೇ. ಇಂಡಿಯಾ ಮೈತ್ರಿಕೂಟದ ನಾಯಕರು ಮಣಿಪುರದಿಂದ ವಾಪಸ್ಸಾದ ಬಳಿಕ ಪಶ್ಚಿಮ ಬಂಗಾಳಕ್ಕೂ ಕರೆದುಕೊಂಡು ಹೋಗುವಂತೆ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ“ ಎಂದು ತಿಳಿಸಿದ್ದಾರೆ.
“ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ನಡೆದ ಕೃತ್ಯಗಳನ್ನು ಅಧೀರ್ ರಂಜನ್ ಚೌಧರಿಯವರು ಸಮರ್ಥಿಸಿಕೊಳ್ಳುತ್ತಾರೆಯೇ? ಈ 21 ಸಂಸದರು ರಾಜಸ್ಥಾನ, ಪಶ್ಚಿಮ ಬಂಗಾಳ ರಾಜ್ಯಗಳಿಗೂ ಭೇಟಿ ನೀಡಿ ವರದಿ ನೀಡುತ್ತಾರೆಯೇ“ ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರಕ್ಕೆ ಭೇಟಿ ನೀಡಿದ ‘ಇಂಡಿಯಾ’ ಒಕ್ಕೂಟದ 21 ಸಂಸದರ ನಿಯೋಗ
“ಹತ್ಯೆಗಳ ಮೂಲಕ ಮಮತಾ ಬ್ಯಾನರ್ಜಿ ಸರ್ಕಾರ ಅಧಿಕಾರ ಹಿಡಿಯುತ್ತಿರುವ ವಿಧಾನವನ್ನು ಕಾಂಗ್ರೆಸ್ ವಿರೋಧಿಸುತ್ತದೆಯೇ? ಮಹಿಳೆಯರ ವಿರುದ್ಧ ಅಪರಾಧಗಳು ನಡೆಯುತ್ತಿರುವ ರಾಜಸ್ಥಾನಕ್ಕೆ ಇಂಡಿಯಾ ಒಕ್ಕೂಟದ ಸದಸ್ಯರು ಭೇಟಿ ನೀಡಿ ವರದಿಗಳನ್ನು ಸಲ್ಲಿಸುತ್ತಾರೆಯೆ?” ಎಂದು ಅನುರಾಗ್ ಠಾಕೂರ್ ಪ್ರಶ್ನಿಸಿದರು.
ಜನಾಂಗೀಯ ಪೀಡಿತ ಮಣಿಪುರದ ಪರಿಸ್ಥಿತಿಯನ್ನು ಅವಲೋಕಿಸಲು ವಿರೋಧ ಪಕ್ಷ ಇಂಡಿಯಾ ಒಕ್ಕೂಟದ 21 ಸಂಸದರ ನಿಯೋಗ ಶನಿವಾರ ಇಂಫಾಲ್ ತಲುಪಿದೆ.
ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಸಂಭವಿಸಿದ ಜನಾಂಗೀಯ ಘರ್ಷಣೆಯ ಸಂತ್ರಸ್ತರನ್ನು ಭೇಟಿ ಮಾಡಲು ತಂಡವು ಹಲವಾರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದೆ. ಹಿಂಸಾಚಾರದಲ್ಲಿ ಇಲ್ಲಿಯವರೆಗೆ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.