ಬಿಹಾರದ ಪ್ರಸಿದ್ಧ ಉದ್ಯಮಿ ಮತ್ತು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕ ಗೋಪಾಲ್ ಖೇಮ್ಕಾ ಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಘಟನೆಯನ್ನು ಖಂಡಿಸಿರುವ ಸಂಸದ ರಾಹುಲ್, “ಬಿಜೆಪಿ ಮತ್ತು ಸಿಎಂ ನಿತೀಶ್ ಒಟ್ಟಾಗಿ ಬಿಹಾರವನ್ನು ‘ದೇಶದ ಅಪರಾಧ ರಾಜಧಾನಿ’ಯನ್ನಾಗಿ ಹೇಗೆ ಪರಿವರ್ತಿಸಿದ್ದಾರೆ ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ | ಬಿಜೆಪಿ ನಾಯಕ, ಉದ್ಯಮಿ ಗೋಪಾಲ್ ಖೇಮ್ಕಾಗೆ ಗುಂಡಿಕ್ಕಿ ಹತ್ಯೆ
“ಪಟನಾದಲ್ಲಿ ಉದ್ಯಮಿ ಗೋಪಾಲ್ ಖೇಮ್ಕಾ ಅವರ ಬಹಿರಂಗ ಹತ್ಯೆಯು ಬಿಜೆಪಿ ಮತ್ತು ನಿತೀಶ್ ಕುಮಾರ್ ಒಟ್ಟಾಗಿ ಬಿಹಾರವನ್ನು ‘ಭಾರತದ ಅಪರಾಧ ರಾಜಧಾನಿ’ಯನ್ನಾಗಿ ಮಾಡಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ” ಎಂದು ರಾಹುಲ್ ಟೀಕಿಸಿದ್ದಾರೆ.
“ಇಂದು ಬಿಹಾರ ದರೋಡೆ, ಗುಂಡಿನ ದಾಳಿ ಮತ್ತು ಕೊಲೆಗಳ ನೆರಳಿನಲ್ಲಿ ಬದುಕುತ್ತಿದೆ. ಅಪರಾಧ ಇಲ್ಲಿ ಸಾಮಾನ್ಯ ವಿಷಯವಾಗಿದೆ. ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬಿಹಾರದ ಸಹೋದರ ಸಹೋದರಿಯರೇ, ಈ ಅನ್ಯಾಯವನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ನಿಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗದ ಸರ್ಕಾರವು ನಿಮ್ಮ ಭವಿಷ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ರಾಹುಲ್ ಹೇಳಿದ್ದಾರೆ.
“ಪ್ರತಿಯೊಂದು ಕೊಲೆ, ಪ್ರತಿಯೊಂದು ದರೋಡೆ, ಪ್ರತಿಯೊಂದು ಗುಂಡು – ಬದಲಾವಣೆಯ ಕೂಗು. ಈಗ ಭಯವಿಲ್ಲದ ಆದರೆ ಪ್ರಗತಿ ಇರುವ ಹೊಸ ಬಿಹಾರದ ಸಮಯ. ಈ ಬಾರಿ ಮತ ಚಲಾವಣೆ ಸರ್ಕಾರವನ್ನು ಬದಲಾಯಿಸಲು ಮಾತ್ರವಲ್ಲ, ಬಿಹಾರವನ್ನು ಉಳಿಸುವ ನಿಟ್ಟಿನಲ್ಲಿ ಆಗಿರಲಿ” ಎಂದು ಈ ಟ್ವೀಟ್‌ನಲ್ಲೇ ಮನವಿ ಮಾಡಿದ್ದಾರೆ.
पटना में व्यवसायी गोपाल खेमका की सरेआम गोली मारकर हत्या ने एक बार फिर साबित कर दिया है – भाजपा और नीतीश कुमार ने मिलकर बिहार को “भारत की क्राइम कैपिटल” बना दिया है।
— Rahul Gandhi (@RahulGandhi) July 6, 2025
आज बिहार लूट, गोली और हत्या के साए में जी रहा है। अपराध यहां ‘नया नॉर्मल’ बन चुका है – और सरकार पूरी तरह नाकाम।…
ಶುಕ್ರವಾರ ರಾತ್ರಿ ಪಟನಾದ ತಮ್ಮ ಮನೆಯ ಹೊರಗೆ ಉದ್ಯಮಿ, ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆದರೆ ಕೊಲೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಗಳ ಪತ್ತೆಯೂ ನಡೆದಿಲ್ಲ. ಖೇಮ್ಕಾ ಅವರ ಮಗ ಗುಂಜನ್ ಖೇಮ್ಕಾ ಅವರನ್ನೂ ಮೂರು ವರ್ಷಗಳ ಹಿಂದೆ ಕೊಲೆ ಮಾಡಲಾಗಿತ್ತು.
ಉದ್ಯಮಿ ಹತ್ಯೆಯ ಕುರಿತು ನಡೆಯುತ್ತಿರುವ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಕಾರ್ಯಪಡೆಯ ಅಧಿಕಾರಿಗಳು ಮತ್ತು ಕೇಂದ್ರ ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿಯನ್ನು ರಚಿಸಲಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.
ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಕೆಲವೇ ತಿಂಗಳುಗಳ ಮುನ್ನ ನಡೆದ ಈ ಘಟನೆ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
