ಸಮಾನತೆ, ಸಹೋದರತೆ ಭ್ರಾತೃತ್ವವನ್ನು ಸಾರುವ ಭಾರತದ ಸಂವಿಧಾನದ ಪೀಠಿಕೆ ಅಡಿಯಲ್ಲಿ ನಾವು ಕೆಲಸ ಮಾಡಬೇಕು. ಸಂವಿಧಾನದ ಆಶಯದಂತೆ ಎಲ್ಲರು ಸಮಾನತೆಯಿಂದ ಬದುಕಲು ನಾವೆಲ್ಲ ಕೆಲಸ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಹಿರಿಯ ಮುಖಂಡ ಎನ್ ವೆಂಕಟೇಶ್ ಹೇಳಿದರು.
ಚಿಕ್ಕಬಳ್ಳಾಪುರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ದಸಂಸ ಆಯೋಜಿಸಿದ್ದ ’ಬಡವರ ಗ್ಯಾರಂಟಿಗಳು ದೇಶದ ವಾರಂಟಿಗಳು’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ದೇಶವನ್ನು ಕಟ್ಟುವುದರಲ್ಲಿ ಭಾಗಿಯಾಗುತ್ತಿರುವ ಬಡವರ ದೃಷ್ಟಿಕೋನದಿಂದ ಯೋಚಿಸಿ ಸರ್ಕಾರಗಳು ಯೋಜನೆಗಳನ್ನು ರೂಪಿಸುವುದು ಅತ್ಯಾವಶ್ಯವಾಗಿದೆ” ಎಂದರು.
ಉಪನ್ಯಾಸಕ ಬಿ.ಸಿ ಬಸವರಾಜ್ ಮಾತನಾಡಿ, “ಮುಖ್ಯ ವಾಹಿನಿಯ ಮಾಧ್ಯಮಗಳು ‘ಗ್ಯಾರಂಟಿ ಯೋಜನೆಗಳಿಂದ ಆಗುವ ಪ್ರಯೋಜನ ಏನು? ಅನಾನುಕೂಲ ಏನು’ ಎಂಬ ಚರ್ಚೆ ಮಾಡಬೇಕಿತ್ತು. ಆದರೆ, ಅವರು ಅತ್ಯಂತ ಬೇಜಾವಾಬ್ದಾರಿಯಿಂದ ಗ್ಯಾರಂಟಿ ಯೋಜನೆಗಳ ವಿರುದ್ದ ಯುದ್ಧೋಪಾದಿಯಲ್ಲಿ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಕಾಂಗ್ರೆಸ್ ಸಚಿವರಲ್ಲಿಯೇ ಮಾಹಿತಿ ಕೊರತೆ ಇದೆ. ಇಂತಹ ಚರ್ಚೆ ಹಾಗೂ ಕಾರ್ಯಾಗಾರಗಳನ್ನು ಮೊದಲು ಕಾಂಗ್ರೆಸ್ ಸಚಿವರಿಗೆ ಮಾಡಬೇಕಿದೆ. ಕಲ್ಯಾಣ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ. ಶ್ರೀಮಂತ ಕಂಪನಿಗಳಿಗೆ ಅನಾವಶ್ಯಕ ಸಾಲಗಲನ್ನು ಕೊಡಲಾಗಿದೆ. ಆ ಸಾಲಗಳು ನಿಜವಾದ ಬಿಟ್ಟಿ ಭಾಗ್ಯಗಳು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈದಿನ.ಕಾಮ್‌ನ ಡಾ. ಎಚ್.ವಿ ವಾಸು, ದಸಂಸ ಮುಖಂಡ ರಾಜಕಾಂತ್, ಮುನಿರೆಡ್ಡಿ, ಸಿ.ಜಿ ಗಂಗಪ್ಪ, ಬಿ.ವಿ ಆನಂದ್, ಬಿ.ವಿ ವೆಂಕಟರವಣಪ್ಪ, ಚಲಪತಿ ಸೇರಿದಂತೆ ಹಲವರು ಇದ್ದರು.