ದಲಿತ ಯುವಕ ಹರ್ಜೋತ್ ಸಿಂಗ್ ಮೇಲೆ ಹಲ್ಲೆ ನಡೆಸಿ, ನಂತರ ಬಲವಂತವಾಗಿ ತಲೆ ಬೋಳಿಸಿ ಕಪ್ಪು ಬಣ್ಣ ಬಳಿದು ಅರೆನಗ್ನ ಮೆರವಣಿಗೆ ನಡೆಸಿದ ಘಟನೆ ಪಂಜಾಬ್‌ನ ಲುಧಿಯಾನದ ಹೊರವಲಯದಲ್ಲಿರುವ ಸೀದಾ ಗ್ರಾಮದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಯುವಕನ ಸ್ನೇಹಿತ ಮತ್ತು ಗ್ರಾಮದ ಯುವತಿಯೊಬ್ಬಳು ಮನೆ ತೊರೆದು ಹೋಗಿದ್ದು, ಅವರಿಗೆ ಈ ಯುವಕನೇ ಸಹಾಯ ಮಾಡಿದ್ದಾನೆ ಎಂದು ಆರೋಪಿಸಿ ಯುವತಿಯ ಕುಟುಂಬಸ್ಥರು ಈ ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿ ಸದ್ಯ ಓರ್ವನ ಬಂಧನ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ಕುದುರೆ ಮೇಲೆ ಮೆರವಣಿಗೆ: ದಲಿತ ವರನ ಮೇಲೆ 40 ಮಂದಿ ಪ್ರಬಲ ಜಾತಿಯ ದುರುಳರಿಂದ ಹಲ್ಲೆ
ಹರ್ಜೋತ್ ತನ್ನ ಸ್ನೇಹಿತ ಮತ್ತು ಯುವತಿಯ ವಿವಾಹವನ್ನು ಜೂನ್ 19ರಂದು ನಡೆಸಿದ್ದಾನೆ ಎಂದು ಕುಟುಂಬಸ್ಥರು ಆರೋಪ. ಈ ಬೆನ್ನಲ್ಲೇ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರ, ಹರ್ಜೋತ್ ಸಲೂನ್‌ನಲ್ಲಿದ್ದಾಗ ಕೆಲವರು ಸಲೂನ್‌ಗೆ ನುಗ್ಗಿ ಹರ್ಜೋತ್‌ನನ್ನು ಹೊರಗೆ ಎಳೆದುಕೊಂಡು ಹೋಗಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ.
ಬಲವಂತವಾಗಿ ಯುವಕನ ಗಡ್ಡ ಮತ್ತು ಮೀಸೆಯನ್ನು ಬೋಳಿಸಲಾಗಿದ್ದು, ಮುಖಕ್ಕೆ ಕಪ್ಪು ಬಣ್ಣ ಬಳಿದು, ಬಟ್ಟೆಗಳನ್ನು ಹರಿದು ಅರೆಬೆತ್ತಲೆಯಾಗಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ಜಾತಿ ನಿಂದನೆ ಮಾಡಲಾಗಿದೆ. ಈ ಕೃತ್ಯದ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲೂ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಮೂತ್ರ ವಿಸರ್ಜಿಸಿ ವಿಕೃತಿ
ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದವರನ್ನು ಗುರುಪ್ರೀತ್ ಅಲಿಯಾಸ್ ಗೋಪಾ, ಸಿಮ್ರನ್‌ಜೀತ್ ಸಿಂಗ್ ಅಲಿಯಾಸ್ ಸಿಮ್ಮಾ, ಸಂದೀಪ್ ಅಲಿಯಾಸ್ ಸ್ಯಾಮ್, ರಾಜ್‌ವೀರ್ ಮತ್ತು ರಮಣದೀಪ್ ಅಲಿಯಾಸ್ ಕಾಕಾ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2) (ಅಪರಾಧಕ್ಕೆ ಪ್ರಚೋದನೆ), ಮತ್ತು 351(ಬೆದರಿಕೆ) ಹಾಗೂ ಐಟಿ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪಿಗಳ ಪೈಕಿ ಸಿಮ್ರನ್‌ಜೀತ್ ಸಿಂಗ್ ಅನ್ನು ಬಂಧಿಸಲಾಗಿದೆ ಎಂದು ಮೆಹರ್ಬನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪರಮದೀಪ್ ಸಿಂಗ್ ದೃಢಪಡಿಸಿದ್ದಾರೆ. ಉಳಿದ ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸಲಾಗುವುದು ಎಂದೂ ಹೇಳಿದ್ದಾರೆ.
