ಉತ್ತರ ಪ್ರದೇಶದ ಅಲಿಗಢದ ಜತ್ತಾರಿ ಪಟ್ಟಣದಲ್ಲಿ ಸ್ಮಶಾನದಲ್ಲಿರುವ ಸೂಫಿ ಸಂತರ ಸಮಾಧಿ ಕಟ್ಟೆಗೆ ಅಪರಿಚಿತ ವ್ಯಕ್ತಿಗಳು ಹಾನಿ ಮಾಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಜತ್ತಾರಿ ಪಟ್ಟಣದಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ. ಸುದ್ದಿ ಹರಡುತ್ತಿದ್ದಂತೆ ಹಫೀಜ್ ಅಲ್ಲಾ ಮೆಹರ್ ಶಾ ಸಮಾಧಿಯ ಸಮೀಪ ಜನರು ಸೇರಲು ಪ್ರಾರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸುವ ಯತ್ನ ಮಾಡಿದ್ದಾರೆ.
ಸಮಾಧಿ ಮತ್ತು ಸುತ್ತಮುತ್ತಲಿನ ಲೋಹದ ರೇಲಿಂಗ್‌ಗೆ ಆಗಿರುವ ಹಾನಿಯನ್ನು ತಕ್ಷಣವೇ ಸರಿಪಡಿಸಲಾಗುವುದು. ಇನ್ನು ಮುಂದೆ ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳಲು ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿ ಗಣ್ಯರ ಸಂತಾಪ
ಸಮಾಧಿಯ ನಿರ್ವಹಣಾ ಸಮಿತಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶಾಂತಿ ಕದಡಲು ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿ ವರುಣ್ ಕುಮಾರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಮೊಹರಂ ಆಚರಣೆಗೂ ಮುನ್ನ ಭಕ್ತರು ಸಮಾಧಿ ಬಳಿ ಫಾತಿಹಾ ಪ್ರಾರ್ಥನೆ ಸಲ್ಲಿಸಲು ಭಾನುವಾರ ಮುಂಜಾನೆ ಬಂದಾಗ ಹಾನಿ ಕಂಡುಬಂದಿದೆ ಎಂದು ದೇವಾಲಯ ನಿರ್ವಹಣಾ ಸಮಿತಿಯ ವಕ್ತಾರ ಶಜಾದ್ ಖಾನ್ ಹೇಳಿದ್ದಾರೆ. ಸಮಾಧಿಯನ್ನು ಧ್ವಂಸಗೊಳಿಸಲು ಇದೇ ರೀತಿ ಮೂರು ವಾರಗಳ ಹಿಂದೆ ಪ್ರಯತ್ನ ನಡೆದಿದೆ. ದುಷ್ಕರ್ಮಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ.
ಇಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎಂದಿರುವ ಖಾನ್, ಪ್ರದೇಶದ ಕೋಮು ಸಾಮರಸ್ಯವನ್ನು ಭಂಗಗೊಳಿಸಲು ಪ್ರಯತ್ನಿಸುವವರನ್ನು ಗುರುತಿಸಿ ಶಿಕ್ಷಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ, ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
