ಎಡ್ಜ್‌ಬಾಸ್ಟನ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ, 336 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿತು.
ತೀವ್ರ ಕುತೂಹಲದ ಹಂತ ತಲುಪಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ, ಎರಡನೇ ಇನಿಂಗ್ಸ್‌ನಲ್ಲಿ 608 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್ ತಂಡ, ನಾಲ್ಕನೇ ದಿನದಾಟ ಅಂತ್ಯಕ್ಕೆ 72 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು.
ಕೊನೆಯ ದಿನ 536 ರನ್ ಗಳಿಸಬೇಕಿತ್ತು. ಭಾರತ ಗೆಲುವು ಸಾಧಿಸಲು 7 ಆಂಗ್ಲ ಪಡೆಯ 7 ವಿಕೆಟ್‌ಗಳನ್ನು ಕಬಳಿಸಬೇಕಿತ್ತು.
ಟೀಮ್ ಇಂಡಿಯಾದ ಸಂಘಟಿತ ಬೌಲಿಂಗ್ ಎದುರಿಸುವಲ್ಲಿ ವಿಫಲವಾದ ಬೆನ್ ಸ್ಟೋಕ್ಸ್ ನೇತೃತ್ವದ ಆಂಗ್ಲನ್ನರು, 271 ರನ್ ಗಳಿಸುವ ವೇಳೆಗೆ ಆಲೌಟ್ ಆದರು. ಎಡ್ಜ್ ಬಾಸ್ಟನ್‌ನಲ್ಲಿ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಗೆದ್ದು, ಐತಿಹಾಸಿಕ ಸಾಧನೆ ಮಾಡಿದೆ.
ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಬುಮ್ರಾ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ವೇಗದ ಬೌಲರ್ ಆಕಾಶ್ ದೀಪ್, ಎರಡನೇ ಇನ್ನಿಂಗ್ಸ್‌ನಲ್ಲಿ ಮಾರಕ ಬೌಲಿಂಗ್ ನಡೆಸುವ ಮೂಲಕ ಪ್ರಮುಖ 6 ವಿಕೆಟ್‌ಗಳನ್ನು ಪಡೆಯುವ ಮೂಲಕ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಆಕಾಶ್ ದೀಪ್ ನಾಲ್ಕು ವಿಕೆಟ್ ಪಡೆದಿದ್ದರು. ಒಟ್ಟಾರೆಯಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಪಡೆದು ಮಿಂಚಿದ್ದಾರೆ.
ಉಳಿದಂತೆ ಟೀಮ್ ಇಂಡಿಯಾ ಪರವಾಗಿ 2ನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ವಿಭಾಗದಲ್ಲಿ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವು ಕ್ರಿಕೆಟ್ ಕಾಶಿ ಎಂದೇ ಪರಿಗಣಿತವಾಗಿರುವ ಲಾರ್ಡ್ಸ್ ಮೈದಾನದಲ್ಲಿ ಜುಲೈ 10ರಿಂದ ಆರಂಭವಾಗಲಿದೆ.