ಚಾಲಕನ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿದ್ದು, ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಗಾಮನಹಳ್ಳಿ ಬಳಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಗಾಮನಹಳ್ಳಿಯ ಮಹದೇವಮ್ಮ (50), ಅವರ ಸಂಬಂಧಿ ತಿ.ನರಸೀಪುರದ ಗೊರವನಹಳ್ಳಿಯ ಸಂಜನಾ, ಮಾದೇವಿ ಮತ್ತು ರೇಖಾ ಮೃತಪಟ್ಟಿದ್ದಾರೆ. ಕಾರು ಚಾಲಕ ಮನೋಜ್ ಈಜಿಕೊಂಡು ದಡ ಸೇರಿದ್ದು, ಬದುಕುಳಿದಿದ್ದಾರೆ.
ಗಾಮನಹಳ್ಳಿಯಿಂದ ದೊಡ್ಡಮುಲಗೂಡು ಗ್ರಾಮಕ್ಕೆ ತೆರಳುತ್ತಿದ್ದಾಗ ನಾಲೆ ಏರಿಯ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಏರಿಯಲ್ಲಿದ್ದ ಕಬ್ಬಿಣದ ತಡೆಗೋಡೆಗೆ ಗುದ್ದಿ ನಾಲೆಗೆ ಉರುಳಿದೆ ಎಂದು ತಿಳಿದುಬಂದಿದೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.