- ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಸಮಸ್ಯೆ ಹೇಳಿದರೂ ಪ್ರತಿಕ್ರಿಯಿಸದ ಬಸ್ ನಿರ್ವಾಹಕ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ ಅನ್ನು ನಿತ್ಯದ ಸಂಚಾರಕ್ಕಾಗಿ ನಗರದ ಬಹುಪಾಲು ಜನರು ಬಳಸುತ್ತಾರೆ. ಮಹಿಳೆಯರು ಪ್ರಯಾಣಿಸುವಾಗ ಅನುಭವಿಸುವ ಕೆಲವೊಂದು ಚಿತ್ರಹಿಂಸೆಗಳನ್ನು ಸಹಿಸಿಕೊಂಡು ಸುಮ್ಮನಾಗುತ್ತಾರೆ. ಇಲ್ಲೊಬ್ಬ ಧೈರ್ಯಶಾಲಿ ಎಂಜಿನಿಯರ್‌ವೊಬ್ಬರು ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.
26 ವರ್ಷದ ಎಂಜಿನಿಯರ್ ಯುವತಿಯೊಬ್ಬರು ಎಂದಿನಂತೆ ಕೆಲಸಕ್ಕೆ ತೆರಳಲು ಶಿವಾಜಿನಗರದಿಂದ ಕೋರಮಂಗಲದ ಕಡೆಗೆ ಬಸ್ ಹತ್ತಿದ್ದರು. ಈ ವೇಳೆ, ಅವರೊಂದಿಗೆ ವ್ಯಕ್ತಿಯೊಬ್ಬ ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಹಾರ್ಡ್‌ವೇರ್ ಅಂಗಡಿಯ ಉದ್ಯೋಗಿ, ಆರೋಪಿ ಅಬ್ದುಲ್ಲಾ(44) ಎಂಬಾತನನ್ನು ಹಿಡಿದು ಯುವತಿ ಪೊಲೀಸರಿಗೆ ಒಪ್ಪಿಸಿದ್ದಾರೆ.
“ಬಸ್ಸಿನಲ್ಲಿ ಹೆಚ್ಚು ಪ್ರಯಾಣಿಕರಿರಲಿಲ್ಲ. ಬಸ್ ರಿಚ್‌ಮಂಡ್ ರಸ್ತೆಯನ್ನು ತಲುಪಿದಾಗ ನನ್ನ ಹಿಂದಿನಿಂದ ಯಾರೋ ನನ್ನನ್ನು ಮುಟ್ಟುತ್ತಿರುವ ಹಾಗೇ ಭಾಸವಾಯಿತು. ಹಿಂತಿರುಗಿ ನೋಡಿದಾಗ ನನ್ನ ಹಿಂದೆ (ಮಹಿಳೆಯರಿಗಾಗಿ ಮೀಸಲಿಟ್ಟ ಆಸನದಲ್ಲಿ) ಒಬ್ಬ ಮಧ್ಯವಯಸ್ಕ ವ್ಯಕ್ತಿ ಕುಳಿತಿದ್ದರು. ನನ್ನನ್ನು ಅವರು ಆಕಸ್ಮಿಕವಾಗಿ ಮುಟ್ಟಿರಬಹುದು ಎಂದು ನಿರ್ಲಕ್ಷಿಸಿದೆ” ಎಂದು ಯುವತಿ ವಿವರಿಸಿದ್ದಾಳೆ.
“ಬಸ್ ಮತ್ತೆ ಮುಂದೆ ಚಲಿಸುತ್ತಿದ್ದಂತೆ, ಹಿಂದಿನಿಂದ ಮತ್ತೆ ಯಾರೋ ನನ್ನ ಬೆನ್ನನ್ನು ಮುಟ್ಟಿದ ಅನುಭವವಾಯಿತು. ನಾನು ತಿರುಗಿ ನೋಡಿದೆ. ಈ ಬಗ್ಗೆ ಬಸ್ ನಿರ್ವಾಹಕರಿಗೆ ತಿಳಿಸಿದೆ. ಅವರು ಪ್ರತಿಕ್ರಿಯಿಸಲಿಲ್ಲ. ಘಟನೆಯನ್ನು ನೋಡಿದ ಇಬ್ಬರು ಮಹಿಳಾ ಪ್ರಯಾಣಿಕರು ಅಬ್ದುಲ್ಲಾ ಮೇಲೆ ಕ್ರಮ ಕೈಗೊಳ್ಳಬೇಕೆಂದು ನಿರ್ವಾಹಕರನ್ನು ಒತ್ತಾಯಿಸಿದರು. ಆದರೆ, ಅವರು ಮತ್ತೆ ಪ್ರತಿಕ್ರಿಯಿಸಲಿಲ್ಲ. ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಗಾಬರಿಗೊಂಡು ಮುಂಭಾಗದ ಬಾಗಿಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಈ ವೇಳೆ, ಅವನನ್ನು ಹಿಡಿದು ಬಸ್ ಚಾಲಕನಿಗೆ ಬಾಗಿಲು ಲಾಕ್ ಮಾಡಲು ಒತ್ತಾಯಿಸಿದೆ” ಎಂದು ಆಕೆ ತಿಳಿಸಿದ್ದಾರೆ.
“ಬಸ್ ಚಾಲಕ ಬಸ್‌ನ ಬಾಗಿಲು ಲಾಕ್ ಮಾಡಿದರು. ಇದೇ ವೇಳೆ ನನ್ನ ಮೊಬೈಲ್‌ನಲ್ಲಿ ಅಬ್ದುಲ್ಲಾ ಚಲನವಲನಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದೆ. ಆತ ಅದನ್ನು ಕಸಿದುಕೊಳ್ಳಲು ಯತ್ನಿಸಿದ. ಅಲ್ಲದೆ, ಕಿಟಕಿಯನ್ನು ತೆರೆಯುತ್ತಿದ್ದಾಗ ಅಜಾಗರೂಕತೆಯಿಂದ ಮುಟ್ಟಿರಬಹುದು ಎಂದು ಸಮಜಾಯಶಿ ನೀಡಿ, ನನ್ನ ಬಳಿ ಕ್ಷಮೆಯಾಚಿಸಿದ. ಆದರೆ, ಆತನ ಮಾತುಗಳು ನಂಬುವಂತಿರಲಿಲ್ಲ” ಎಂದು ಯುವತಿ ಹೇಳಿದ್ದಾರೆ.
“ಬಸ್‌ನಲ್ಲಿದ್ದ ಮೂವರು ಮಹಿಳೆಯರು ಆಡುಗೋಡಿ ಪೊಲೀಸ್ ಠಾಣೆ ಬಳಿ ಬಸ್ ನಿಲ್ಲಿಸುವಂತೆ ಮತ್ತು ಪೊಲೀಸರು ಬರುವವರೆಗೆ ಬಾಗಿಲು ತೆರೆಯದಂತೆ ಚಾಲಕರಿಗೆ ಹೇಳಿದರು. ಅದರಂತೆ ಚಾಲಕ ನಡೆದುಕೊಂಡರು. ಆದರೆ, ಬಸ್‌ನ ನಿರ್ವಾಹಕರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಅವರ ಧೋರಣೆಯೂ ಮಹಿಳಾ ವಿರೋಧಿ ನಡೆಯಾಗಿತ್ತು. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು” ಎಂದು ಯುವತಿ ಒತ್ತಾಯಿದ್ದಾರೆ.
“ಬಸ್‌ನಲ್ಲಿ ಕೇವಲ 10 ಜನರಿದ್ದಾಗ ಹಾಗೂ ಪುರುಷರ ಸಾಲಿನಲ್ಲಿ ಸೀಟುಗಳು ಖಾಲಿ ಇದ್ದಾಗ ಆರೋಪಿ ಏಕೆ ಮಹಿಳೆಯ ಸೀಟಿನಲ್ಲಿ ಕುಳಿತಿದ್ದರು. ಮಹಿಳೆಯರಿಗೆ ಮೀಸಲಾದ ಸೀಟುಗಳಲ್ಲಿ ಪುರುಷರು ಕುಳಿತುಕೊಳ್ಳಲು ನಿರ್ವಾಹಕರು ಅನುಮತಿಸಬಾರದು ಮತ್ತು ಅಂತಹವರಿಗೆ ಟಿಕೆಟ್ ನೀಡಬಾರದು” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಧಾನಸೌಧದ ಬಳಿ ಡ್ರೋನ್ ಹಾರಾಟಕ್ಕೆ ಯತ್ನ; ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು
“ಅಬ್ದುಲ್ಲಾ ಅವರನ್ನು ಐಪಿಸಿ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಬಸ್ ನಲ್ಲಿ ಅಳವಡಿಸಿರುವ ಕ್ಯಾಮೆರಾದ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಬಿಎಂಟಿಸಿಗೆ ಪತ್ರ ಬರೆದಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರಡೆ.
“ಈ ಘಟನೆಯು ದುರದೃಷ್ಟಕರ. ಮಹಿಳೆಗೆ ಪ್ರತಿಕ್ರಿಯಿಸಲು ನಿರ್ವಾಹಕರು ವಿಫಲವಾಗಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸುವೆ” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
“ಆರೋಪ ಸಾಬೀತಾದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಬಿಎಂಟಿಸಿ ಪಿಆರ್‌ಒ ಸುನೀತಾ ತಿಳಿಸಿದ್ದಾರೆ.